ಕಾಂಗ್ರೆಸ್ ಆಂತರಿಕ ವಿದ್ಯಮಾನಗಳಿಂದ ಶಂಕರಮೂರ್ತಿ ಪದಚ್ಯುತಿ ಹುನ್ನಾರ: ಈಶ್ವರಪ್ಪ

ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ.

ಶಿವಮೊಗ್ಗ: ಕಾಂಗ್ರೆಸ್ಸಿನ  ಆಂತರಿಕ ವಿಷಯಗಳಿಂದಾಗಿ ಡಿ.ಹೆಚ್.ಶಂಕರ ಮೂರ್ತಿ ಅವರನ್ನು ಸಭಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವ ಹುನ್ನಾರ ನಡೆದಿದ್ದು, ಇದಕ್ಕೆ ಜೆಡಿಎಸ್ ಸಹಕರಿಸುವುದಿಲ್ಲ ಎಂದು ಬಿಜೆಪಿ ಹಿರಿಯ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದರು.

ಇಂದಿಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ಎಸ್.ಆರ್ ಪಾಟೀಲ್ ಅವರಿಗೆ ಅಧ್ಯಕ್ಷಸ್ಥಾನ ದಕ್ಕದ ಕಾರಣ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿರುವ ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಜೆಡಿಎಸ್ ನ ಕುಮಾರಸ್ವಾಮಿಯವರೊಂದಿಗೆ ದೂರವಾಣಿ ಮೂಲಕ ತಾವು ಮಾತನಾಡಿದ್ದು, ಶಂಕರ ಮೂರ್ತಿ ಅವರನ್ನೆ ಮುಂದುವರೆಸಲು ಸಹಕರಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಪರ ವಿರೋಧಿ ಹೋರಾಟ ಪ್ರಾರಂಭವಾಗಿದೆ. ತಮಿಳು ನಾಡಿನ ಉಚ್ಚನ್ಯಾಯಾಲಯ ಇದಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆ ಅತಿಶೀಘ್ರದಲ್ಲಿ ತೆರವುಗೊಂಡು ನಿಷೇಧ ಸಂಪೂರ್ಣವಾಗಿ ಜಾರಿಗೊಳ್ಳುವ ವಿಶ್ವಾಸವಿದೆ. ಗೋಹತ್ಯೆ ನಿಷೇಧದ ಬಗ್ಗೆ ದೇಶದಲ್ಲಿ ಕಾನೂನು ಜಾರಿಗೊಳ್ಳಬೇಕೆಂದು ಮಹಾತ್ಮ ಗಾಂಧೀಜಿ ಸೂಚಿಸಿದ್ದರು. ಗೋಹತ್ಯೆ ನಿಷೇಧದ ವಿರುದ್ದ ಹೋರಾಡುವವರು ಇದು ಸಾರ್ವಜನಿಕರ ಆಹಾರ ಪದ್ದತಿ ಎಂದು ಆಗ್ರಹಿಸುತ್ತಿದ್ದಾರೆ. ಹಾಗಾದರೆ ಗಾಂಧಿಜಿ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲದೆ ಸ್ವಾತಂತ್ರ್ಯ ಪೂರ್ವದಲ್ಲೆ ಹೇಳಿಕೆ ನೀಡಿದ್ದರಾ ಎಂದು ಪ್ರಶ್ನಿಸಿದರು.
ಭಾನುಪ್ರಕಾಶ್ ಹಾಗೂ ಸುರಾನಾ ಅವರನ್ನು ಪಕ್ಷದ ಜವಬ್ದಾರಿಯಿಂದ ಹೊರಗಿಟ್ಟಿರುವುದು ಸಾವಿರಾರು ಕಾರ್ಯಕರ್ತರಿಗೆ ನೋವುಂಟಾಗಿದೆ. ಇದನ್ನು ಬಿಜೆಪಿ ಪಕ್ಷ ಗುರುತಿಸಿ ಅವರಿಗೆ ಇನ್ನು ಉನ್ನತ ಹುದ್ದೆ ನೀಡಲಿದೆ ಎಂದು ಈಶ್ವರಪ್ಪ ಹೇಳಿದರು.

Leave a Reply

Your email address will not be published.