ಕನ್ನಡ ಚಿತ್ರರಂಗದ ಹಿರಿಯಮ್ಮ ಡಾ.ಪಾರ್ವತಮ್ಮ ರಾಜ್‍ಕುಮಾರ್ ನಿಧನ


ಬೆಂಗಳೂರು: ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರ ಧರ್ಮಪತ್ನಿ, ನಿರ್ಮಾಪಕಿ ಡಾ.ಪಾರ್ವತಮ್ಮ ರಾಜ್‍ಕುಮಾರ್ (78) ಬುಧವಾರ ಬೆಳಗ್ಗೆ 4.30ರ ಸುಮಾರು ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ರಾಜಕುಮಾರ್ ಸುಮಾರು 16 ದಿನಗಳ ಕಾಲ ಸಾವು ಬದುಕಿನ ನಡುವೆ ಉಯ್ಯಾಲೆಯಾಡಿ ಕಾಲನ ಮಡಿಲು ಸೇರಿದ್ದಾರೆ.  ರಕ್ತದೊತ್ತಡ , ಸಕ್ಕರೆ ಕಾಯಿಲೆಯ ನಡುವೆ  ಬ್ರೆಸ್ಟ್ ಕ್ಯಾನ್ಸರ್‌ಗೂ ಅವರು ತುತ್ತಾಗಿದ್ದರು.  ಲಿವರ್‌ಗೂ ಕ್ಯಾನ್ಸರ್‌ ವ್ಯಾಪಿಸಿ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು.  ಬಹಳ ವರ್ಷಗಳಿಂದ ದೇಹದಲ್ಲಿ ಮನೆ ಮಾಡಿದ್ದ ಕಿಡ್ನಿ ಸಮಸ್ಯೆ  ಅವರನ್ನು ಕೊನೆವರೆಗೂ ಕಾಡಿತು. ಆಸ್ಪತ್ರೆಗೆ ದಾಖಲಾದ ಕೆಲವೇ ದಿನಗಳಲ್ಲಿ ಅವರ  ಮಾತು ನಿಂತಿತ್ತು.  ಅಣ್ಣಾವ್ರ ಹುಟ್ಟಿದ ಹಬ್ಬದ ದಿನಕ್ಕೆ ಅವರಿಗೆ ಪ್ರಶಸ್ತಿ ಪ್ರದಾನ ನಿಗದಿಯಾಗಿತ್ತು. ಆದರೆ ಆ ಸಮಾರಂಭದ ದಿನ ಅವರು ಆಸ್ಪತ್ರೆಯಲ್ಲಿದ್ದರು.

 6-2-1939ರಲ್ಲಿ ಮೈಸೂರಿನ ಸಾಲಿಗ್ರಾಮದಲ್ಲಿ ಪಾರ್ವತೆಮ್ಮ ಜನಿಸಿದ್ದರು.  1953 ಮಾರ್ಚ್ ನಲ್ಲಿ ಡಾ.ರಾಜಕುಮಾರ ಅವರ ಜತೆ ಅವರ ವಿವಾಹ ನಂಜನಗೂಡಿನಲ್ಲಿ ನಡೆದಿತ್ತು.

 ಡಾ.ರಾಜ್ ದಂಪತಿಯ 5 ಮಕ್ಕಳಲ್ಲಿ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್  ಅಲ್ಲದೇ, ಪೂರ್ಣಿಮಾ ಹಾಗು ಲಕ್ಷ್ಮಿ ಅವರ ಕುಡಿಗಳು. ಈ ಕುಟುಂಬದಲ್ಲಿ ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದಾರೆ, ಶಿವರಾಜ್‌ಕುಮಾರ್ ಮಗಳು ನಿವೇದಿತಾ ಅಂಡಮಾನ್ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ.

ಡಾ. ರಾಜಕುಮಾರ್ ಮತ್ತು ಅವರ ಮಕ್ಕಳ ಸಿನಿಮಾ ಜಗತ್ತಿನ ಯಶಸ್ಸಿನಲ್ಲಿ ಡಾ.ಪಾರ್ವತಮ್ಮ ಅವರ ಕೊಡುಗೆಗೆ ಸರಿ ಸಾಟಿ ಇಲ್ಲ. ಹಲವು ಅಪಸ್ವರಗಳ ನಡುವೆಯೂ ಘನತೆಯಿಂದ ಬಾಳುವುದನ್ನು ಕುಟುಂಬಕ್ಕೆ ಕಲಿಸಿದ ಗುರು ಆಕೆ ಎಂದೇ ಅವರ ಆಪ್ತರೆಲ್ಲ ಹೇಳುತ್ತಾರೆ.

ವಜ್ರೇಶ್ವರಿ ಕಂಬೈನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಡಾ.ರಾಜಕುಮಾರ ಅವರ ಚಿತ್ರಗಳಲ್ಲದೇ ಹಲವು ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ಅವರು ನೀಡಿದ್ದಾರೆ. ಪೂರ್ಣಿಮಾ ಎಂಟರ್ ಪ್ರೈಸಿಸ್ ಎಂಬ ಚಿತ್ರ ಹಂಚಿಕೆ ಸಂಸ್ಥೆ ಅವರ ಕೊಡುಗೆ ಆಗಿದೆ.  ಪಾರ್ವತಮ್ಮ ಅವರ ತಮ್ಮ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‍ಕುಮಾರ್ ಕೂಡ ಚಿತ್ರರಂಗದಲ್ಲಿದ್ದಾರೆ.  ಹಲವು ನಾಯಕ ನಟರು ಮತ್ತು ನಟಿಯರನ್ನು ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಕನ್ನಡ ಚಿತ್ರರಂಗಕ್ಕೆ ತಂತ್ರಜ್ಞರು, ಗಾಯಕ, ಗಾಯಕಿಯರು, ಸಂಗೀತ ನಿರ್ದೇಶಕರು, ನಿರ್ದೇಶಕರಿಗೂ  ಪರಿಚಯಿಸಿದ ಕೀರ್ತಿ ಅವರದು.

 ಶೋಷಿತ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮೈಸೂರಿನಲ್ಲಿ ಅವರು ಶಕ್ತಿಧಾಮ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳು ಆಶ್ರಯ ಪಡೆದಿದ್ದಾರೆ.

 ಡಾ.ರಾಜಕುಮಾರ ಅಭಿನಯದ ತ್ರಿಮೂರ್ತಿ ಚಿತ್ರದ ಮೂಲಕ  1975ರಿಂದ ಪಾರ್ವತಮ್ಮ ಅವರು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.  ಆ ನಂತರದಲ್ಲಿ ಒಂದರ ಮೇಲೆ ಒಂದರಂತೆ ಅವರು ಸುಮಾರು 85 ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಲು ಜೇನು, ಕವಿರತ್ನ ಕಾಳಿದಾಸ, ಜೀವನ ಚೈತ್ರ ಮತ್ತಿತರ ಚಿತ್ರಗಳು ಕನ್ನಡದ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿವೆ. ಅವರು ನಿರ್ಮಿಸಿದ 35 ಚಿತ್ರಗಳು ಶತದಿನೋತ್ಸವ ಕಂಡಿದ್ದು ಗಮನ ಸೆಳೆಯುವಂಥದು.

 ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆಗಾಗಿ ಪ್ರತಿಷ್ಠಿತ ದಾದಾಸಾಹೇಬ ಫಾಲ್ಕೆ ಪ್ರಶಸ್ತಿಯೂ ಪಾ ಅವರಿಗೆ ದೊರಕಿತ್ತು. ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ  ಪಾರ್ವತಮ್ಮ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ 51ನೇ ಘಟಿಕೋತ್ಸವದಲ್ಲಿ  ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು ವಿಶೇಷ.  ಕೇವಲ ಪ್ರೌಢಶಾಲೆ ಅಭ್ಯಾಸ ಮುಗಿಸಿ, ಬದುಕಿನ ವಿಶ್ವವಿದ್ಯಾಲಯದಲ್ಲಿ  ಬಹಳಷ್ಟು ವಿಷಯಗಳನ್ನು ಕಲಿತಿದ್ದ ಪಾರ್ವತಮ್ಮ, ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆಯುವಷ್ಟು ಬೆಳೆದದ್ದು ಮಾತ್ರ ಅಚ್ಚರಿ ಮೂಡಿಸುವಂಥದು.

 ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜಕುಮಾರ ಅವರ ಸಮಾಧಿ ಪಕ್ಕದಲ್ಲಿಯೇ ಪಾರ್ವತಮ್ಮ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published.