ಬದಲಾಗಲಿದೆ ಹಣಕಾಸು ವರ್ಷ: ನವೆಂಬರ್ ನಲ್ಲೇ ಬಜೆಟ್ ಮಂಡಿಸಲು ಕೇಂದ್ರ ಸಿದ್ಧತೆ


ಹೊಸದಿಲ್ಲಿ: ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್‌ ಅವಧಿಗೆ ಬದಲಾಯಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದ್ದು,  2018ರಿಂದಲೇ ಈ ಬದಲಾವಣೆ ಮಾಡಲು ಚಿಂತನೆ ನಡೆದಿದೆ. ಹಾಗಾಗಿ ನವೆಂಬರ್‌ ತಿಂಗಳಲ್ಲೇ ವಾರ್ಷಿಕ ಬಜೆಟ್‌ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ 2018ರ ಹಣಕಾಸು ವರ್ಷ ಜನವರಿಯಿಂದಲೇ ಆರಂಭಗೊಳ್ಳಲಿದೆ.

 ಪ್ರತಿವರ್ಷ ಫೆಬ್ರವರಿ ಕೊನೆಯಲ್ಲಿ ಬಜೆಟ್ ಮಂಡಿಸಲಾಗುತ್ತದೆ. 2017-18ರ ಬಜೆಟ್ ಅನ್ನು ಫೆ.1ರಂದು ಮಂಡಿಸಲಾಗಿತ್ತು. 2017-18ನೇ ಹಣಕಾಸು ವರ್ಷದಲ್ಲಿ ರೈಲ್ವೆ ಬಜೆಟ್ ಮತ್ತು ಜನರಲ್ ಬಜೆಟ್‌ಗಳೆರಡನ್ನೂ ಒಟ್ಟಿಗೆ ಮಂಡಿಸಲಾಗಿದೆ. ಮತ್ತೊಂದು ಐತಿಹಾಸಿಕ ಬದಲಾವಣೆ ಎಂದು  ಪ್ರಧಾನಿ ನರೇಂದ್ರ ಮೋದಿ ಹಣಕಾಸು ವರ್ಷದ ಅವಧಿಯನ್ನು ಜನವರಿಯಿಂದ ಡಿಸೆಂಬರ್‌ ಅವಧಿಗೆ ಬದಲಾಯಿಸಲು ಯೋಜನೆ ರೂಪಿಸಿದ್ದಾರೆ ಎಂದು ಗೊತ್ತಾಗಿದೆ.  ಹಣಕಾಸು ವರ್ಷದ ಅವಧಿ ಬದಲಾವಣೆಗೆ ನೀತಿ ಆಯೋಗ, ಸಂಸತ್ತಿನ ಸ್ಥಾಯಿ ಸಮಿತಿ ಒಪ್ಪಿಗೆ ಸೂಚಿಸಿವೆ ಎಂದು ಗೊತ್ತಾಗಿದೆ.

 ಹಣಕಾಸು ವರ್ಷ ಎಂದರೆ ಏಪ್ರಿಲ್‌ 1ರಿಂದ ಮಾರ್ಚ್‌ 31ವರೆಗಿನ ಅವಧಿ ಎಂದು ಸುಮಾರು 150 ವರ್ಷಗಳಿಂದ ಗುರುತಿಸಲಾಗುತ್ತದೆ.  ಬ್ರಿಟನ್ ಸರ್ಕಾರ 1867ರಲ್ಲಿ ಏಪ್ರಿಲ್‌ 1ರಿಂದ ಮಾರ್ಚ್‌ 31ವರೆಗಿನ ಅವಧಿಯನ್ನು ಹಣಕಾಸು ವರ್ಷ ಎಂದು ಮೊಟ್ಟ ಮೊದಲು ಘೋಷಿಸಿತ್ತು. ಅದನ್ನೇ ಭಾರತ ಅನುಸರಿಸಿಕೊಂಡು ಬಂದಿದೆ. ಇದಕ್ಕೂ ಮುಂಚೆ ಮೇ 1ರಿಂದ ಏಪ್ರಿಲ್ 30ರವರೆಗಿನ ಅವಧಿ ಹಣಕಾಸು ವರ್ಷವಾಗಿತ್ತು.

 ದೇಶದ ಅಗತ್ಯಗಳಿಗೆ ಅನುಗುಣವಾಗಿ ಹಣಕಾಸು ವರ್ಷ ಇರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ನಿಲುವಾಗಿದ್ದು, ಇದಕ್ಕಾಗಿ ನೇಮಿಸಿದ್ದ ಅತ್ಯುನ್ನತ ಸಮಿತಿ ಈಗಾಗಲೇ ವರದಿ ಸಲ್ಲಿಸಿದೆ.

Leave a Reply

Your email address will not be published.