ಪರಿಸರ ದಿನ ಬಂದಿದೆ, ಬನ್ನಿ ಪರಿಸರದೊಂದಿಗೆ ಬಾಂಧವ್ಯ ಬೆಳೆಸೋಣ


ಪರಿಸರ ದಿನಾಚರಣೆ ಮತ್ತೆ ಬಂದಿದೆ. ಮುಂದಿನ ಪೀಳಿಗೆಗೆ ಪರಿಸರ ರಕ್ಷಣೆಯ ಮಹತ್ವ ತಿಳಿಸುವ ಮಹತ್ವದ ಜವಾಬ್ದಾರಿಯನ್ನು ಮತ್ತೊಮ್ಮೆ ನೆನಪಿಸಿದೆ. ಪರಿಸರ ದಿನಾಚರಣೆ, ಜಾಗೃತಿ, ವನಮಹೋತ್ಸವ ಹೆಸರಿನಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ಈ ಬಾರಿಯೂ ನಡೆಯುತ್ತಿವೆ. ಪ್ರತಿವರ್ಷವೂ ಅಷ್ಟೇ ಸಂಪ್ರದಾಯ ಯಾಕೆ ಎಂದು ಪ್ರಶ್ನಿಸಿಕೊಂಡು ಬದಲಾವಣೆಯ ಹಾದಿಯಲ್ಲಿ ಮುಂದಡಿಯಿಡುವವರು ಈಗ ಬೇಕಾಗಿದ್ದಾರೆ.  ಪರಿಸರದೊಂದಿಗೆ ಮನುಷ್ಯ ಸಂಬಂಧವನ್ನು ಸುಧಾರಿಸಲು ಜಾಗೃತಿ ಮೂಡಿಸಿದರೆ ಅದಕ್ಕಿಂತ ದೊಡ್ಡ ಆಚರಣೆ ಇಲ್ಲ ಅನ್ನೋ ಅಭಿಪ್ರಾಯಗಳು ಕೇಳುತ್ತಿವೆ.

ವಿಶ್ವಸಂಸ್ಥೆ 2017ರ ಪರಸರ ದಿನಾಚರಣೆಗೆ ಅರ್ಥಪೂರ್ಣ ಘೋಷ ವಾಕ್ಯ ನೀಡಿದೆ.  ಪ್ರಕೃತಿ ಸುಂದರವಾಗಿದೆ. ಆದರೆ ನಮಗೆ ಅದರ ಬಗ್ಗೆ ಕಾಳಜಿ ಮರೆತುಹೋಗಿದೆ. ತಂತ್ರಜ್ಞಾನದ ನಾಗಾಲೋಟದಲ್ಲಿ ಪ್ರಕೃತಿಯೊಂದಿಗಿನ ಬಾಂಧವ್ಯ ಕಡಿಮೆಯಾಗುತ್ತಿದೆ. ಹೀಗಾಗಿ  “ಪರಿಸರದೊಂದಿಗೆ ಮನುಷ್ಯ ಬಾಂಧವ್ಯ” ಎನ್ನುವುದು ಈ ಸಲದ ಪರಿಸರ ದಿನಾಚರಣೆಯ ಘೋಷವಾಕ್ಯ.

ಎಲ್ಲೆಂದರಲ್ಲಿ ಕಸ ಚೆಲ್ಲುುವುದು, ಅನಗತ್ಯವಾಗಿ ವಾಹನ ಬಳಸುವುದು, ಪ್ರತಿಭಟನೆ ಹೆಸರಲ್ಲಿ ಟಯರ್ ಸುಡುವುದು, ಇಂಧನ ಬಳಕೆಗೆ ಮಿತಿ ಹೇರದಿರುವುದು, ಅರಣ್ಯ ನಾಶಕ್ಕೆ ಕಡಿವಾಣ ಇಲ್ಲದಿರುವುದು ಹೀಗೆ ಪರಿಸರ ಮಾಲಿನ್ಯಕ್ಕೆ ನಮ್ಮ ಕೊಡುಗೆ ಸಣ್ಣದಲ್ಲ. ಪ್ರಕೃತಿಯೊಂದಿಗಿನ ಬಾಂಧವ್ಯ ನಮಗೆ ಮರೆತು ಹೋಗಿದೆ. ಪರಿಸರದ ಜೊತೆ ನಿಜವಾದ ಪ್ರೀತಿ ಉದಯಿಸಬೇಕಿದೆ, ಇರುವ ಪ್ರೀತಿ ಜಾಗೃತಗೊಳ್ಳಬೇಕಿದೆ.

 ಪರಿಸರ ನಾಶದ ಪರಿಣಾಮಗಳು ಜಗತ್ತಿನೆಲ್ಲೆಡೆ ಗೋಚರವಾಗತೊಡಗಿವೆ. ಪರಿಸರ ಕುರಿತು ವಿಶ್ವಸಮ್ಮೇಳನಗಳಲ್ಲಿ ಕೇವಲ ಕಳವಳದಿಂದ ಏನೇನೂ ಪ್ರಯೋಜನವಿಲ್ಲ.  ಜನಸಾಮಾನ್ಯರಲ್ಲಿ ಪರಿಸರ ಪ್ರೀತಿ ಬೆಳೆಸುವ ಕೆಲಸ ಈಗ ಆಗಬೇಕು.  ವಿಶ್ವ ಸಂಸ್ಥೆಯ ಈ ಬಾರಿಯ ಘೋಷ ವಾಕ್ಯ ಎಷ್ಟು ಅರ್ಥಪೂರ್ಣವಾಗಿದೆ ಅಂತ ಉದ್ಗರಿಸಿದರೆ ಸಾಲದು. ಬನ್ನಿ ಪರಿಸರದೊಂದಿಗೆ ಬಾಂಧವ್ಯ ಬೆಳೆಸೋಣ. ಪರಿಸರ ಉಳಿದರೆ ನಮ್ಮ ಉಳಿವು. ಮರೆಯದಿರೋಣ.

-ಮೃತ್ಯುಂಜಯ ಯಲ್ಲಾಪುರಮಠ

Leave a Reply

Your email address will not be published.