ಶಾಶ್ವತ ನೀರಾವರಿಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಯತ್ನ: ರೈತ ಮುಖಂಡರ ಬಂಧನ

 


ಬೆಂಗಳೂರು: ಶಾಶ್ವತ ನೀರಾವರಿಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿರುವ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಗುರುವಾರ ಬೆಂಗಳೂರಿನ ದೇವನಹಳ್ಳಿಯತ್ತ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ.  ರೈತರ ಪ್ರತಿಭಟನೆ ಕಾವೇರಿರುವುದರಿಂದ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸರು ಕೆಲವು ರೈತ ಮುಖಂಡರನ್ನು ಮುಂಜಾಗ್ರತೆ ಕ್ರಮವಾಗಿ ಬಂಧಿಸಿದ್ದಾರೆ.

 ದೇವನಹಳ್ಳಿ ಮುಖಾಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದು, ರೈತರು ಈಗ ರಾಣಿಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಶ್ವತ ನೀರಾವರಿ ಸೌಲಭ್ಯಕ್ಕೆ ಆಗ್ರಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕಕರ್ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಚಿಕ್ಕಬಳ್ಳಾಪುರ ಮುಖಾಂತರ ಆಗಮಿಸುವ ರೈತರನ್ನು ದೇವನಹಳ್ಳಿಯ ರಾಣಿಕ್ರಾಸ್ ಬಳಿ ತಡೆಯಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ವಾಟರ್ ಜೆಟ್, ಕೆಎಸ್ಆರ್‌ ತುಕಡಿ ಜತೆಗೆ ಸಾವಿರಾರು ಪೊಲೀಸರು ರಾಣಿಕ್ರಾಸ್‌‌‌ನಲ್ಲಿ ಬಂದೋಬಸ್ತ್ ಗೆ ನಿಂತಿದ್ದಾರೆ. ರಾಮನಗರದಿಂದ ಆಗಮಿಸುತ್ತಿದ್ದ ರೈತರನ್ನು ಎಪಿಎಂಸಿ ಮಾರುಕಟ್ಟೆ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ರೈತ ಮುಖಂಡರಾದ ಶಿವಕುಮಾರ್, ವಿಶ್ವನಾಥ್ ಹಾಗೂ ರಾಜು ಎಂಬುವರನ್ನು  ಪೊಲೀಸರು ಬಂಧಿಸಿದ್ದಾರೆ. ರೈತ  ಮುಖಂಡರ ಬಂಧನ ಹಿನ್ನೆಲೆಯಲ್ಲಿ  ಕೋಲಾರದ ಮುಳುಬಾಗಿಲಿನಿಂದ ಹೊರಟ ರೈತರು ಮಾರ್ಗ ಬದಲಿಸಿದ್ದು, ವೇಮಗಲ್‌ ಮೂಲಕ ದೇವನಹಳ್ಳಿಯತ್ತ ತೆರಳಿದ್ದಾರೆ.

Leave a Reply

Your email address will not be published.