ಕಾಂಗ್ರೆಸ್, ಬಿಜೆಪಿಗೆ ಅನೈತಿಕ ರಾಜಕಾರಣವೇ ಬಂಡವಾಳ: ಮಾಜಿ ಪ್ರಧಾನಿ ದೇವೇಗೌಡ


ಬೆಂಗಳೂರು: ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಆಗಿನ ಪ್ರಧಾನಿ  ಇಂದಿರಾ ಗಾಂಧಿ ಪೊಲೀಸ್ ಶಕ್ತಿ ಬಳಸಿ  ಜಯಪ್ರಕಾಶ ನಾರಾಯಣ ಅವರನ್ನು ಅಪರಾಧಿಯ ಪಟ್ಟ ಕಟ್ಟಿದರು. ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ಪಕ್ಷಗಳಿಗೆಅನೈತಿಕ ರಾಜಕಾರಣವೇ ಬಂಡವಾಳ  ಎಂದು ಮಾಜಿ ಪ್ರಧಾನಿ ಹೆಚ್‍.ಡಿ. ದೇವೇಗೌಡ ಹೇಳಿದರು.

ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಮತ್ತು ಯುನೈಟೆಡ್ ಲಾಯರ್ಸ್ ಫೋರಂ ಸಂಯುಕ್ತವಾಗಿ ತುರ್ತು ಪರಿಸ್ಥಿತಿ ವಿರೋಧಿ ದಿನದ ನಿಮಿತ್ತ  ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಭಾರತ ಪ್ರಜಾಪ್ರಭುತ್ವ, ಅಂದು-ಇಂದು”- ಒಂದು ಅವಲೋಕನ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದರು.

ಪಕ್ಷ ಸಂಘಟನೆ ಮತ್ತು ಶಕ್ತಿ ಪ್ರದರ್ಶನ ಹೆಸರಿನಲ್ಲಿ ಅನೈತಿಕ ರಾಜಕಾರಣ ನಡೆಯುತ್ತಿದೆ.  ಬಿಜೆಪಿ ಹಾಗೂ ಕಾಂಗ್ರೆಸ್ ಸಂಸ್ಕೃತಿ ಇದೇ ಆಗಿದೆ. ಎಳೆ ಎಳೆಯಾಗಿ ಇದನ್ನೆಲ್ಲ ಬಿಚ್ಚಿಡಲು ಹೆದರುವುದಿಲ್ಲ. ಸ್ವಾರ್ಥಕ್ಕಾಗಿ ನಾನು ರಾಜಕಾರಣ ಮಾಡುವುದಿಲ್ಲ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕಾವೇರಿ ಮತ್ತು ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವ ಭರವಸೆ ನನಗಿಲ್ಲ. ನಮ್ಮ ಪಾಲಿನ ನೀರು ಬಳಕೆ ಆಗ್ತಿಲ್ಲ. ಎಲ್ಲ ವಿಷಯಗಳಲ್ಲೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರೈಲ್ವೆ ಮತ್ತು ನೀರಾವರಿ ಯೋಜನೆಗಳಲ್ಲಿ ರಾಜ್ಯಕ್ಕೆ ಹೆಚ್ಚು  ಅನ್ಯಾಯವಾಗುತ್ತಿದೆ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ವಿಚಾರ ಪ್ರಸ್ತಾಪಿಸಿದ ದೇವೇಗೌಡರು, ದಲಿತ ವಿರೋಧಿ ಎಂದು ಬಿಂಬಿಸಿಕೊಳ್ಳಬಾರದು ಅಂತ ಸಹಿ ಹಾಕಿದ್ದೇನೆ. ಕಾಂಗ್ರೆಸ್ ನಾಯಕರೇ ಮನವಿ ಮಾಡಿದ್ದರಿಂದ ಬೆಂಬಲ ನೀಡಿದೆ ಎಂದರು.

Leave a Reply

Your email address will not be published.