ಮಹಿಳಾ ವಿಶ್ವ ಕಪ್: ಕೌರ್‌ ಅಬ್ಬರದ ಬ್ಯಾಟಿಂಗ್, ಪೈನಲ್ ಪ್ರವೇಶಿಸಿದ ಭಾರತ ತಂಡ

 

ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ ಹರ್ಮನ್‌ಪ್ರೀತ್ ಕೌರ್‌
 

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 36 ರನ್’ಗಳ ಗೆಲುವು, 2ನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶ

 
ಲಂಡನ:   ಇಂಗ್ಲೆಂಡ್‌‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್  ಟೂರ್ನಿಯ ಫೈನಲ್‌ಗೆ ಭಾರತೀಯ ತಂಡ ಪ್ರವೇಶಿಸಿದೆ.
 
ಲಂಡನ್‌ನ ಡರ್ಬಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಭಾರತದ ವನಿತೆಯರು 36 ರನ್‌ಗಳಿಂದ ಮಣಿಸಿದರು. ಈ ಮೂಲಕ ವಿಶ್ವಕಪ್‌ ಫೈನಲ್‌ಗೆ 2ನೇ ಬಾರಿ ಎಂಟ್ರಿ ಕೊಟ್ಟ ಸಾಧನೆ ಮಾಡಿದರು.

ಹರ್ಮನ್‌ಪ್ರೀತ್ ಕೌರ್‌ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತದ ವನಿತೆಯರು ಫೈನಲ್‌ ಪ್ರವೇಶಿಸಿದ್ದಾರೆ.

ಟಾಸ್‌ ಗೆದ್ದ ಭಾರತೀಯ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಯುಂಟು ಮಾಡಿದ ಕಾರಣ 42 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ಆರಂಭಿಕರಾಗಿ ಮೈದಾನಕ್ಕಿಳಿದ ಸ್ಮೃತಿ ಮಂದಾನಾ (6), ಪೂನಮ್‌ ರಾವುತ್‌ (14) ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ನಂತರ ಬಂದ ನಾಯಕಿ ಮಿಥಾಲಿ ರಾಜ್‌ ಹಾಗೂ ‍ಹರ್ಮನ್‌ಪ್ರೀತ್‌ ಕೌರ್‌ ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ಯಶಸ್ವಿಯಾದರು.

ಹರ್ಮನ್‌ಪ್ರೀತ್‌ ಕೌರ್‌ ಅವರ ಸಿಡಿಲಬ್ಬರದ ಅಜೇಯ (171) ಶತಕ, ಮಿಥಾಲಿ ರಾಜ್‌ (36), ದೀಪ್ತಿ ಶರ್ಮಾ (25) ಮತ್ತು ವೇದಾ ಕೃಷ್ಣಮೂರ್ತಿ (16 ಅಜೇಯ) ನೆರವಿನಿಂದ ಟೀಂ ಇಂಡಿಯಾ 42 ಓವರ್‌ಗಳಲ್ಲಿ ಸವಾಲಿನ 281 ರನ್‌ ಕಲೆ ಹಾಕಿತು.

282 ರನ್‌ ಟಾರ್ಗೆಟ್‌ ಬೆನ್ನತ್ತಿದ  ಆಸ್ಟ್ರೇಲಿಯಾ ತಂಡ 40.1 ಓವರ್‌ಗಳಲ್ಲಿ 245 ರನ್‌ಗಳಿಸಿ ಸರ್ವಪತನ ಕಂಡಿತು.

ಜುಲೈ 23ರಂದು ಲಾರ್ಡ್ಸ್‌‌ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ಪ್ರಶಸ್ತಿ ಗೆಲ್ಲಲು ಸೆಣಸಾಟ ನಡೆಸಲಿವೆ.

 
 
 

Leave a Reply

Your email address will not be published.