ಯುದ್ಧ ದಾಹ: ನೆಲಕಚ್ಚಿ ನಿಂತ ಸೈನಿಕರೇ, ನಿಮಗಿದೋ ಕೋಟಿ ಸಲಾಂ…!

ಯುದ್ಧ ದಾಹ: ನೆಲಕಚ್ಚಿ ನಿಂತ ಸೈನಿಕರೇ, ನಿಮಗಿದೋ ಕೋಟಿ ಸಲಾಂ…!
Second Indo-pak war,1965. Third Indo-pak war,1971. Siachin war,1984. Kargil war ,1999.

ನಮ್ಮ ದೇಶದೊಳಗೆ ಕೆಲವು ಮನಃಸ್ಥಿತಿಗಳಿವೆ. ಅವರ ಚಿಂತನೆಗಳಿಗೆ ತಲೆಬುಡವೇ ಇರುವುದಿಲ್ಲ. ಆಕ್ರೋಶಕ್ಕೆ ಅರ್ಥವೂ ಇರುವುದಿಲ್ಲ. ಮೆದುಳು ಶಕ್ತಿಗೆ ಅನುಗುಣವಾಗಿ ಅವರ ನಾಲಿಗೆ ಹರಿತವಾಗುತ್ತದೆ. ಆದರೆ ತೋಳ್ಬಲದ ಬಗ್ಗೆ ಕಿಂಚಿತ್ತು ಪರಾಮರ್ಶೆ ಇರುವುದಿಲ್ಲ. ಕಾಶ್ಮೀರದ ಗಡಿಯಲ್ಲಿ ನಿಂತು ಭಾರತದವರು ಉಚ್ಛೆ ಹುಯ್ದರೆ ಪಾಕಿಸ್ತಾನ ಮುಳುಗಡೆಯಾಗುತ್ತದೆ ಎಂಬ ಚಪ್ಪಾಳೆಯ ಹೇಳಿಕೆಗಳನ್ನು ಕೊಡುವವರಿಗೆ ಪ್ರಸ್ತುತ ಪರಮಾಣುವಿನ ಆಘಾತಕಾರಿ ಅಂಶಗಳ ಬಗ್ಗೆ ಅರಿವಿಲ್ಲ.

ಐವತ್ತಾರು ಇಂಚಿನ ಎದೆ ಇಟ್ಟುಕೊಂಡು ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗುವ ಬದಲು ವಿಶ್ವದ ಮುಂದೆ ದೂರು ದಾಖಲಿಸುತ್ತಿದ್ದಾರೆ ಎಂದರೆ  ಅಪಾಯದ ನೈಜತೆಗಳು ಪ್ರತಿಯೊಬ್ಬರಿಗೂ ಅರ್ಥವಾಗಬೇಕು.

ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ವೀಕು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇತಿಹಾಸಗಳೇ ಪಾಕ್ ಸೋಲನ್ನು ಪುಷ್ಟೀಕರಿಸುತ್ತವೆ. ಅದೇ ಚೀನಾದ ಸೈನ್ಯ ಸಾಮರ್ಥ್ಯವನ್ನು ಭಾರತಕ್ಕೆ ಹೋಲಿಸಿದರೆ ಭಾರತ ಏನೇನೂ ಅಲ್ಲ ಎಂಬುದೇ ವಾಸ್ತವ. ಇತಿಹಾಸದಲ್ಲೂ ಚೀನಾ ಪರಾಕ್ರಮ ಮೆರೆದಿದೆ. ವಾಸ್ತವದಲ್ಲಿ ಚೀನಾ ಅವತ್ತಿಗಿಂತ ನೂರು ಪಟ್ಟು ಬಲಿಷ್ಠವಾಗಿದೆ. ಭಾರತ ಅವತ್ತಿಗಿಂತ ನೂರು ಪಟ್ಟು ಬೆಳೆದಿರಬಹುದು. ಚೀನಾಕ್ಕೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ನಾವಿನ್ನು ಶಸ್ತ್ರಾಸ್ತ್ರ ಖರೀದಿಯಲ್ಲಿದ್ದೇವೆ. ಚೀನಾದವರು ಶಸ್ತ್ರಾಸ್ತ್ರ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಆರ್ಥಿಕವಾಗಿ ಅವರ ಜಿಡಿಪಿ ಹದಿನೈದಕ್ಕಿಂತ ಹೆಚ್ಚಿದೆ. ನಮ್ಮ ಜಿಡಿಪಿ ವಿಶ್ವದಲ್ಲಿ ಮೂರಕ್ಕಿಂತ ಕಡಿಮೆಯಿದೆ.

ಇಸ್ರೇಲ್ ಗೆ ಪ್ರಧಾನಿ ಹೋದ ಕೂಡಲೇ ಯುದ್ಧ ಗೆದ್ದಿದ್ದೇವೆ ಎಂಬಂತೆ  ಬೀಗುವ ಮಂದಿ, ಚೀನಾ ಸೇನಾ ಸಾಮರ್ಥ್ಯದ ಕನಿಷ್ಠ ತಿಳಿವಳಿಕೆ ಪಡೆಯಲು ವಿಕೀಪಿಡಿಯಾಗಳನ್ನಾದರೂ ಓದಿಕೊಳ್ಳಬೇಕಿದೆ. ಗಡಿಯ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲದೆ  ಅಂಧಾಭಿಮಾನದಿಂದ ಸೋಸಿಯಲ್ ನೆಟ್ ವರ್ಕ ಗಳಲ್ಲಿ,  ಅರೆಬೆಂದ ಮಾಧ್ಯಮಗಳಲ್ಲಿ ಅಬ್ಬರಿಸಿದ ಕೂಡಲೇ ಚೀನಾ ಹೆದರಿ ಓಡುವುದಿಲ್ಲ. ಅವರಿಗಂತಹ ಭಯವಿದ್ದಿದ್ದರೆ ಕಾಲು ಕೆರೆದು ಜಗಳಕ್ಕೂ ಬರುತ್ತಿರಲಿಲ್ಲ. ಸಮರಾಭ್ಯಾಸಗಳನ್ನು ನಡೆಸುತ್ತಿರಲಿಲ್ಲ. ವಾಸ್ತವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿದೆ. ಅವರು ಚೀನಾ ಇರಲಿ, ಪಾಕಿಸ್ತಾನ ಇರಲಿ ತಡವಿಕೊಳ್ಳಲು ಸಿದ್ಧರಿಲ್ಲ.

ಭಾರತ ಚೀನಾ ಯುದ್ಧವಾದರೇ ಇಸ್ರೇಲ್, ಅಮೆರಿಕಾ, ಜಪಾನ್ ಯಾವ ದೇಶವೂ ಭಾರತದ ಜೊತೆ ನಿಂತು ಚೀನಿಯರ ಮೇಲೆ ಕಾದಾಡುವುದಿಲ್ಲ. ಏಕೆಂದರೆ ಅದು ಅವರಿಗೆ ಸಂಬಂಧಪಟ್ಟ ವಿಚಾರವಲ್ಲ. ಅವರಿಗೆ ಭಾರತ ಒಂದು ವ್ಯಾವಹಾರಿಕ ತಾಣ. ಇವರು ಕಾಸು ಕೊಟ್ಟರೆ ಅವರು ಶಸ್ತ್ರಾಸ್ತ್ರ ಕೊಡುತ್ತಾರೆ ಅಷ್ಟೇ.  ಮೈಲುದ್ದದ ಹೊಗಳಿಕೆಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

  ಕಾರ್ಗಿಲ್ ಯುದ್ಧದ ವೇಳೆ ಸುಮಾರು ಹದಿನೈದು ಕಿಲೋಮೀಟರ್ ಭಾರತದ ಭೂಭಾಗವನ್ನು ಪಾಕಿಸ್ತಾನ ಸೈನ್ಯ ವಶಕ್ಕೆ ತೆಗೆದುಕೊಂಡಾಗ, ಭಾರತದ ಶಸ್ತ್ರಕೋಠಿ ಖಾಲಿಯಾಗಿ ಸೋಲುವ ಭೀತಿ ಎದುರಾಗಿತ್ತು. ಆಗ ಅಮೆರಿಕಾ ವಿರೋಧದ ನಡುವೆಯೂ ನೆರವಿಗೆ ಬಂದಿದ್ದು ಇಸ್ರೇಲ್. ನೆರವು ಎಂದರೆ ಶಸ್ತ್ರಾಸ್ತ್ರ ಪೂರೈಸಿತ್ತು. ಇವರು ಹಣ ಪೂರೈಸಿದ್ದಕ್ಕೆ ಅವರು ವೆಪನ್ ಪೂರೈಸಿದ್ದರು. ಅಷ್ಟೇ ಸಂಬಂಧ.  ಅಮೆರಿಕಾ ವಿರೋಧವೆಂಬ ನಾಟಕ, ಇಸ್ರೇಲ್ ಸಹಾಯ ಮಾಡಿತೆಂಬ ಅಂಶವಷ್ಟೇ ನಮ್ಮ ಜೊತೆ ಇಸ್ರೇಲ್ ಇದೆ ಎಂಬ ಸಮಜಾಯಿಷಿಗೆ ಇದೆ.

ಚೀನಾವನ್ನು ತಡವಿಕೊಳ್ಳುವ ವಿಚಾರ ಅತ್ಲಾಗಿರಲಿ. ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧವಾದರೇ ಭಾರತ ಇಲ್ಲಿಂದ ಎಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿ ನಿಲ್ಲುತ್ತದೆ ಎಂಬ ಲೆಕ್ಕಾಚಾರಗಳಿವೆ. ಈಗ ನಡೆಯುವ ಯುದ್ಧ ನಿಸ್ಸಂಶಯವಾಗಿ ಪರಮಾಣು ಯುದ್ಧವಾಗಿರುತ್ತದೆ. ಎರಡೂ ದೇಶಗಳ ಬಳಿಯೂ ಪರಮಾಣುಗಳಿವೆ. ಭಾರತದ ಪರಮಾಣುಗಳು ಇಡೀ ಪಾಕಿಸ್ತಾನವನ್ನು ಅಪೋಶನ ತೆಗೆದುಕೊಂಡರೆ,  ಅವರ ಪರಮಾಣುಗಳು ನಮ್ಮ ಉತ್ತರಭಾರತವನ್ನು ನುಂಗಿ ನೀರು ಕುಡಿಯುತ್ತವೆ. ದಕ್ಷಿಣ ಭಾರತ ಉಳಿದುಕೊಂಡರೆ ಕೈಕಾಲು ಕಿತ್ತ ಅಂಗವೈಕಲ್ಯದ ಸ್ಥಿತಿಯಲ್ಲಿರುತ್ತದೆ. ಆ ನಂತರ ತೀವ್ರ ತೆರನಾದ ಕ್ಷಾಮದಿಂದ ದಕ್ಷಿಣ ಹಂತ ಹಂತವಾಗಿ ಸರ್ವನಾಶವಾಗುತ್ತದೆ. ಮತ್ತೆ “ಮೇಕ್ ಇನ್ ಇಂಡಿಯಾ” ಅಷ್ಟು ಸುಲಭವಲ್ಲ.

ಜನರು ಪ್ರಧಾನಿ ನರೇಂದ್ರ ಮೋದಿ ಅವರ ರೀತಿಯಲ್ಲಿ ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಲ್ಲಿದ್ದ ಪೌರುಷಗಳು ಪ್ರಧಾನಿಯಾದ ಮೇಲೆ ಇಲ್ಲ. ಒಂದು ರಾಜ್ಯವಾಗಿ ದೇಶವನ್ನು ನೋಡಲಿಕ್ಕೆ ಆಗುವುದಿಲ್ಲ.  ದೇಶವನ್ನು ಹುಷಾರಾಗಿ ನಡೆಸುವುದು ಎಷ್ಟು ಕಷ್ಟವೆಂಬುದು ನರೇಂದ್ರ ಮೋದಿ ಅವರಿಗೂ  ಅರ್ಥವಾಗಿದೆ. ಆ ಸ್ಥಾನಕ್ಕೇರುವ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.

ದೇಶದೊಳಗಿನ ಸಮಸ್ಯೆಗಳನ್ನು ನಿಭಾಯಿಸುವುದೇ ಕಷ್ಟವಾಗಿರುವಾಗ, ಬೇರೇ ದೇಶಗಳನ್ನು ತಡವಿಕೊಳ್ಳುವುದು ಸುಲಭವಲ್ಲ. ರಣಹೇಳಿಕೆಯನ್ನು ಕೊಟ್ಟು ಸುಮ್ಮನಾಗಬಹುದು. ಆದರೆ ಎದುರಾಳಿ ನಮಗಿಂತಲೂ ಬಲಿಷ್ಠವಾಗಿದ್ದರೆ ರಣಹೇಳಿಕೆಗಳು ಮಾರಣಾಂತಿಕವಾಗಿಬಿಡುತ್ತದೆ. ಸದ್ಯ ಚೀನಾದ ವಿಚಾರದಲ್ಲಿ ಆಗುತ್ತಿರುವುದೂ ಅದೇ..!

ಭಾರತ-ಚೀನಾ ನಡುವೆಯಿರುವ ಮೂಲ ಸಮಸ್ಯೆಗಳು ಚರ್ಚೆಗೆ ಈಡಾಗಬೇಕು. ಈ ಸಮಸ್ಯೆಗಳನ್ನು ಅರ್ಥೈಸಿಕೊಂಡು ಮುನ್ನಡೆಯಬೇಕು. ಯಾರನ್ನೋ ಮೆಚ್ಚಿಸಲೋ, ಯಾರಿಂದಲೋ ಚಪ್ಪಾಳೆ ಗಿಟ್ಟಿಸಲೋ ದೇಶವನ್ನು ಬಲಿಕೊಡುವುದಕ್ಕೆ ಆಗುವುದಿಲ್ಲ.  ಇಸ್ರೇಲ್ ಹಸ್ತಲಾಘವ ಸಿಕ್ಕಿದ ಕೂಡಲೇ ಯುದ್ಧ ನಡೆಯಲಿ, ಚೀನಾವನ್ನು ಸೋಲಿಸಿಬಿಡುತ್ತೇವೆ ಎಂದು ಮೂರ್ಖರಂತೆ ಮಾತನಾಡಿದರೆ ಅದು ಹುಚ್ಚುತನವಾಗುತ್ತದೆ. ಗಡಿಯಲ್ಲಿ ಚೀನಾ ಸೈನ್ಯಕ್ಕೆ ಮುಖಾಮುಖಿಯಾಗುವ ಸೈನಿಕರಿಗೆ ಮಾತ್ರ ಗೊತ್ತಿದೆ ವಾಸ್ತವ.

1962ರಲ್ಲಿ ಇಂಡೋ ಚೀನಾ ಯುದ್ಧದ ನಂತರ 1996ರಲ್ಲಿ ವಿವಾದವನ್ನು ಬಗೆಹರಿಸಲು ಒಂದು ಒಪ್ಪಂದವಾಯಿತು. 2006ರಲ್ಲಿ ಭಾರತಕ್ಕೆ ಚೀನಾದ ರಾಯಭಾರಿ ಅರುಣಾಚಲಪ್ರದೇಶವು ಚೀನಿಯರ ಭೂಪ್ರದೇಶವೆಂದು ಹೇಳಿಕೆ ನೀಡಿದ್ದ. ಆ ಸಮಯದಲ್ಲಿ ಎರಡೂ ದೇಶಗಳು ಪರಸ್ಪರ ಸಿಕ್ಕಿಂನ ಉತ್ತರ ತುದಿಯಲ್ಲಿ ಒಂದು ಕಿಲೋಮೀಟರ್ವರೆಗೆ ಆಕ್ರಮಣ ಮಾಡಿದೆ ಎಂದು ದೂರಿದವು. 2009ರಲ್ಲಿ ಗಡಿಯುದ್ದಕ್ಕೂ ಹೆಚ್ಚುವರಿ ಮಿಲಿಟರಿ ಪಡೆಗಳನ್ನು ನಿಯೋಜಿಸುವುದಾಗಿ ಭಾರತ ಘೋಷಿಸಿತು. ಗಡಿ ವಿವಾದವನ್ನು ಬಗೆಹರಿಸಲು ಚೀನಾ “ಒನ್ ಇಂಡಿಯಾ” ನೀತಿ ಅಂಗೀಕರಿಸಬೇಕೆಂದು ಭಾರತವು 2014ರಲ್ಲಿ ಸೂಚಿಸಿತ್ತು. ಪ್ರಸ್ತುತ ಸಮಸ್ಯೆ ಹೆಚ್ಚಿರುವುದು ಇದೇ ಪ್ರದೇಶದಲ್ಲಿ.

ಗಡಿಯಲ್ಲಿನ ಉದ್ವಿಗ್ನ ವಾತಾವರಣ ಕಡಿಮೆ ಆಗಬೇಕಾದರೆ ಅರ್ಥಪೂರ್ಣ ಚರ್ಚೆ ಆಗಬೇಕು.  ಅದಕ್ಕೂ ಮುನ್ನ ಡೊಕ್ಲಾಮ್  ನಲ್ಲಿ ನಿಯೋಜಿಸಿರುವ ಸೇನೆಯನ್ನು ಹಿಂಪಡೆಯಬೇಕು ಎಂದು ಚೀನಾ ತಾಕೀತು ಮಾಡಿದೆ. ಡೊಕ್ಲಾಮ್ ಪ್ರದೇಶದಲ್ಲಿ ಭಾರತೀಯ ಸೈನಿಕರು ಒಳ ನುಸುಳಿರುವ ಚಿತ್ರಗಳನ್ನು ಸೆರೆ ಹಿಡಿಯಲಾಗಿದ್ದು, ಸಾಕಷ್ಟು ಸಾಕ್ಷ್ಯಗಳು ನಮ್ಮ ಬಳಿ ಇವೆ. ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಬೇಕಾದರೆ ಮೊದಲು ಸೈನಿಕರನ್ನು ವಾಪಸ್ ಪಡೆಯಬೇಕು ಎಂದು ಚೀನಾ ಹೇಳಿದೆ. ಡೊಕ್ಲಾಮ್  ಕಡೆಯಿಂದ ಭೂತಾನ್ ಸೇನಾ ನೆಲೆಯೆಡೆಗೆ ಚೀನಾ ನಿರ್ಮಿಸುತ್ತಿರುವ ರಸ್ತೆಗೆ ಭೂತಾನ್ ವಿರೋಧಿಸುತ್ತಿದೆ ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಈ ರಸ್ತೆ ಸಹಕಾರಿಯಾಗಲಿದೆ. ಭಾರತ ವಿಶ್ವ ಸಮುದಾಯದ ಮುಂದೆ ನಾಟಕವಾಡುತ್ತಿದೆ ಎಂದು ಹೇಳಿದೆ.

ಭಾರತದಲ್ಲಿರುವ ಗಡಿ ಪ್ರದೇಶ ಡೋಕ್ಲಾಮ್ ತನ್ನದೆಂದು ವಾದಿಸುತ್ತಿರುವ ಚೀನಾಕ್ಕೆ ಅದರದ್ದೇ ರೀತಿಯಲ್ಲಿ ಉತ್ತರಿಸಲು ಮುಂದಾಗಿರುವ ಭಾರತ ವಿವಾದಿತ ಡೋಕ್ಲಾಮ್ ಗೆ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸಿದೆ. ಕಳೆದು ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಂಘರ್ಷ ಇದೀಗ ತಾರಕಕ್ಕೇರಿದೆ. ವಿವಾದಿತ ಪ್ರದೇಶದಲ್ಲಿ ಚೀನಾ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸುವುದರ ಜೊತೆಗೆ ಸಮರಾಭ್ಯಾಸಗಳನ್ನು ನಡೆಸುತ್ತಿದೆ. ಯುದ್ಧವೇ ಉತ್ತರವಾದರೆ ನಾವು ಸಿದ್ಧವಾಗಿದ್ದೇವೆ ಎಂಬ ಸಂದೇಶ ರವಾನಿಸಿದೆ. ಭಾರತ-ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿದೆ. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಹೇಳುತ್ತಿದೆ.

ಸಿಕ್ಕಿಂ ವಲಯದಲ್ಲಿ ರಸ್ತೆ ನಿರ್ಮಿಸುವ ತನ್ನ ಸೇನೆಯ ಪ್ರಯತ್ನಕ್ಕೆ ಭಾರತೀಯ ಸೇನೆ ತಡೆಯೊಡ್ಡಿರುವುದು ವಿಶ್ವಾಸದ್ರೋಹವಾಗಿದೆ. ಸಿಕ್ಕಿಂ ಗಡಿಯನ್ನು 1890ರ ಚೀನೋ-ಬ್ರಿಟಿಷ್ ಒಪ್ಪಂದದಲ್ಲಿ ಸ್ಪಷ್ಟವಾಗಿ ಗುರುತು ಹಾಕಲಾಗಿದೆ. 1959ರಲ್ಲಿ ಭಾರತದ ಪ್ರಧಾನಿ ನೆಹರು ಒಪ್ಪಂದ ದೃಢೀಕರಿಸಿ ಪತ್ರ ಬರೆದಿದ್ದಾರೆ. ಆ ನಿಲುವಿಗೆ ಭಾರತ ಸರ್ಕಾರ ವಂಚನೆ ಮಾಡಿದೆ. ಕೂಡಲೇ ತನ್ನ ಸೇನಾ ಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಅವರು ನಮಗೆ 1962ರ ಭಾರತ ಬೇರೆ 2017ರ ಭಾರತ ಬೇರೆ ಎಂದು ನೆನಪು ಮಾಡಿಕೊಡುವುದಾದರೆ, 1962ರ ಚೀನಾವೇ ಬೇರೆ ಈಗಿನ ಚೀನಾವೇ ಬೇರೆ ಎಂಬುದನ್ನೂ ತೋರಿಸಬೇಕಾಗುತ್ತದೆ ಎಂದಿದೆ ಚೀನಾ. 1962ರ ಯುದ್ಧದಲ್ಲಿ ಭಾರತದ 4383 ಯೋಧರು ಹಾಗೂ ಚೀನಾದ 722 ಯೋಧರು ಮೃತಪಟ್ಟಿದ್ದರು. ಈಗ ನಡೆಯುವ ಯುದ್ಧ ಅಂದಿಗಿಂತ ಹೆಚ್ಚು ಅಪಾಯಕಾರಿಯಾಗುವುದು ಅತ್ಯಂತ ಸ್ಪಷ್ಟ.

ಈ ಗಡಿ ವಿವಾದಕ್ಕೆ ಮುಖ್ಯ ಕಾರಣವೇನೆಂದರೆ, ಭಾರತ ಮತ್ತು ಚೀನಾ ನಡುವೆ 3,488 ಕಿಲೋಮೀಟರ್ ಉದ್ದ ಗಡಿ ಇದೆ. ಎಲ್ಲ ಭಾಗಗಳಲ್ಲಿ ಗಡಿ ಗುರುತಿಸುವಿಕೆ ಆಗಿಲ್ಲ. ಈ ಗಡಿಯನ್ನು ಹದಿನಾಲ್ಕುವಿಭಾಗಗಳಾಗಿ ವಿಂಗಡಿಸಲಾಗಿದೆ. ಲಡಾಖ್ನ ಅಕ್ಸೈಚಿನ್ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ವಾಸ್ತವ ನಿಯಂತ್ರಣ ರೇಖೆ ಇದೆ. 1962ರಲ್ಲಿ ನಿಯಂತ್ರಣಕ್ಕೆ ಪಡೆದ ಅರುಣಾಚಲ ಪ್ರದೇಶದ ತೊಂಭತ್ತು ಸಾವಿರ ಚದರ ಕಿಲೋಮೀಟರ್ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಹಕ್ಕು ಸಾಧಿಸುತ್ತಿದೆ. ಈ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದೇ ಚೀನಾ ಗುರುತಿಸುತ್ತಿದೆ. ಪೂರ್ವ ಮತ್ತು ಪಶ್ಚಿಮ ವಿಭಾಗಗಳಲ್ಲದೆ ಉತ್ತರಾಖಂಡದ ಮಧ್ಯ ವಿಭಾಗದಲ್ಲಿಯೂ ಗಡಿ ವಿವಾದ ಇದೆ. ಇಲ್ಲಿ ಹತ್ತು ಸಾವಿರ ಚದರ ಕಿಲೋಮೀಟರ್ ಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. 1986ರ ನಂತರ ಗಡಿ ವಿವಾದ ಪರಿಹಾರಕ್ಕೆ ಹಲವು ಸುತ್ತು ಮಾತುಕತೆಗಳು ನಡೆದಿವೆ. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಪ್ರಸ್ತುತ ಸಂದರ್ಭದಲ್ಲಿ ಯುದ್ಧದ ಚರ್ಚೆ ಮಾಡುವುದಾದರೆ, ಎರಡೂ ದೇಶಗಳ ಸೇನಾ ಸಾಮರ್ಥ್ಯವನ್ನು ವಿಶ್ಲೇಷಿಸಬೇಕು. `ಮರ್ಯಾದೆಯಿಂದ ಜಾಗ ಖಾಲಿಮಾಡಿ, ಇಲ್ಲವೆಂದರೆ ಬಲವಂತದಿಂದ ಹೊರಗೆ ದಬ್ಬಬೇಕಾಗುತ್ತದೆ’ ಎಂದು ಭಾರತೀಯ ಯೋಧರಿಗೆ ಚೀನೀ ಡ್ರ್ಯಾಗನ್ ಎಚ್ಚರಿಕೆ ಹೇಳಿದೆ.

ಚೀನಾದ ಮಹತ್ವಾಕಾಂಕ್ಷೆಗಿರುವ ತಾಕತ್ತು ಸಣ್ಣದಲ್ಲ. ಭಾರತ ಸೇನಾ ಸಾಮರ್ಥ್ಯ ಹದಿಮೂರು ಲಕ್ಷದ ಇಪ್ಪತ್ತೈದು ಸಾವಿರವಿದ್ದರೆ, ಚೀನಾದ ಸೇನಾ ಬಲ ಇಪ್ಪತ್ಮೂರು ಲಕ್ಷದ ಮೂವತ್ತೈದು ಸಾವಿರವಿದೆ. ಭಾರತದ ರಕ್ಷಣಾ ಬಜೆಟ್ ಐವತ್ತೊಂದು ಶತಕೋಟಿ ಡಾಲರ್ ಆದರೆ, ಚೀನಾದ ಬಜೆಟ್ ನೂರೈವತ್ತೊಂದು ಶತಕೋಟಿ ಡಾಲರ್ ಆಗಿದೆ. ಭಾರತದ ಸೇನೆಯಲ್ಲಿರುವ ಒಟ್ಟು ಯುದ್ಧ ವಿಮಾನಗಳು ಎರಡು ಸಾವಿರದ ನೂರ ಎರಡು, ಚೀನಾದ ಬಳಿ ಎರಡು ಸಾವಿರದ ಒಂಬೈನೂರ ಐವತ್ತೈದಿದೆ. ಭಾರತದ ಬಳಿ ಆರು ನೂರ ಎಪ್ಪತ್ತಾರು ಫೈಟರ್ ಜೆಟ್, ಇಂಟರ್ಸೆಪ್ಟರ್ ಇದ್ದರೆ, ಚೀನಾದ ಬಳಿ ಸಾವಿರದ ಇನ್ನೂರ ಎಪ್ಪತ್ತೊಂದಿದೆ. ಭಾರತದಲ್ಲಿರುವ ದಾಳಿ ವಿಮಾನಗಳ ಸಂಖ್ಯೆ ಎಂಟುನೂರ ಒಂಭತ್ತು. ಚೀನಾದ ಬಳಿ ಸಾವಿರದ ಮುನ್ನೂರ ಎಂಭತ್ತೈದಿದೆ. ಭಾರತದ ಬಳಿ ಹದಿನಾರು ದಾಳಿ ಹೆಲಿಕಾಪ್ಟರ್ ಇವೆ. ಚೀನಾದ ಬಳಿ ಇನ್ನೂರ ಆರಿವೆ. ಆದರೆ ಸಶಸ್ತ್ರ ಯುದ್ಧ ವಾಹನಗಳು ಚೀನಾಕ್ಕಿಂತ ಹೆಚ್ಚು ಭಾರತದ ಬಳಿಯಿದೆ. ಭಾರತದ ಬಳಿ ಆರು ಸಾವಿರದ ಏಳುನೂರ ನಾಲ್ಕು ಸಶಸ್ತ್ರ ಯುದ್ಧ ವಾಹನಗಳಿದ್ದರೆ, ಚೀನಾದ ಬಳಿ ನಾಲ್ಕು ಸಾವಿರದ ಏಳುನೂರ ಎಂಭತ್ತೆಂಟಿದೆ.

ಸ್ವರಕ್ಷಣೆಯ ಪದಾತಿದಳ ಭಾರತ ಬಳಿ ಇನ್ನೂರ ತೊಂಭತ್ತಿದೆ. ಚೀನಾದ ಬಳಿ ಸಾವಿರದ ಏಳುನೂರ ಹತ್ತಿರ ಇದೆ. ಟ್ಯಾಂಕ್ ಬಲ ಭಾರತದ ಬಳಿ ನಾಲ್ಕು ಸಾವಿರದ ನಾಲ್ಕುನೂರ ಇಪ್ಪತ್ತಾರಿದ್ದರೆ, ಚೀನಾದ ಬಳಿ ಆರು ಸಾವಿರದ ನಾಲ್ಕುನೂರ ಐವತ್ತೇಳಿದೆ. ರಾಕೆಟ್ ಪ್ರೊಜೆಕ್ಟರ್ ಭಾರತದ ಬಳಿ ಇನ್ನೂರ ತೊಂಭತ್ತೆರಡಿದೆ. ಚೀನಾದ ಬಳಿ ಸಾವಿರದ ಏಳುನೂರ ಎಪ್ಪತ್ತಿದೆ. ಭಾರತದ ಬಳಿಯಿರುವ ಒಟ್ಟು ನೌಕಾ ದಳದ ಸಂಖ್ಯೆ ಇನ್ನೂರ ತೊಂಭತ್ತೈದು. ಚೀನಾದ ಬಳಿ ಏಳುನೂರ ಹದಿನಾಲ್ಕಿದೆ. ಹದಿನೈದು ಜಲಾಂತರ್ಗಾಮಿ ಭಾರತದ ಶಕ್ತಿಯಾದರೆ, ಅರವತ್ತೆಂಟು ಜಲಾಂತರ್ಗಾಮಿ ಚೀನಾದ ಶಕ್ತಿಯಾಗಿದೆ. ಭಾರತದ ಬಳಿ ಹದಿನಾಲ್ಕು ಫ್ರೀಗೇಟ್ ಇದೆ. ಚೀನಾದ ಬಳಿ ಐವತ್ತೊಂದಿದೆ. ಇನ್ನು ಪರಮಾಣುಗಳ ಅಂಕಿ ಅಂಶಗಳು ಸಿಕ್ಕಿಲ್ಲ. ಇಲ್ಲಿಗಿಂತ ಅಲ್ಲಿ ದುಪ್ಪಟ್ಟಿದ್ದರೆ ಅಚ್ಚರಿಯಿಲ್ಲ. ಇವೆಲ್ಲ ಅಂಶಗಳು ಭಾರತಕ್ಕಿಂತ ಚೀನಾ ಎಷ್ಟು ಬಲಿಷ್ಠಟವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಯುದ್ಧ ಬೇಕೆನ್ನುವವರು ಈ ಅಂಕಿ-ಅಂಶಗಳನ್ನು ಓದಿಕೊಳ್ಳಬೇಕು.

ಭಾರತ ಮತ್ತು ಕಮ್ಯುನಿಸ್ಟ್ ಚೀನಾ ನಡುವೆ ಉತ್ತಮ ಸಂಬಂಧ ಎಂದೂ ಇರಲಿಲ್ಲ. ಆದರೆ 1962ರ ಯುದ್ಧ ಮತ್ತು 1967ರ ಸಂಘರ್ಷ ಬಿಟ್ಟರೆ ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯೂ ಇರಲಿಲ್ಲ. ಆದರೆ ಪಾಕಿಸ್ತಾನ, ಭಯೋತ್ಪಾದನೆ, ಎನ್ಎಸ್ಜಿ ಸದಸ್ಯತ್ವ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವದಂತಹ ಹಲವು ವಿಚಾರಗಳಿಂದಾಗಿ ಸಂಬಂಧ ಇತ್ತೀಚೆಗೆ ಹೆಚ್ಚು ಹದಗೆಟ್ಟಿದೆ. ಏಷ್ಯಾದ ದೊಡ್ಡ ಆರ್ಥಿಕ ಶಕ್ತಿಗಳಾದ ಚೀನಾ ಮತ್ತು ಭಾರತ 1984ರಲ್ಲಿ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ, ಅತ್ಯಂತ ನೆಚ್ಚಿನ ರಾಷ್ಟ್ರಗಳು ಎಂದು ಪರಸ್ಪರ ಗುರುತಿಸಿಕೊಂಡಿದ್ದವು. 1994ರಲ್ಲಿ ಎರಡು ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸುವ ಒಪ್ಪಂದ ಮಾಡಿಕೊಂಡವು. 2006ರ ನಂತರ ಎರಡೂ ರಾಷ್ಟ್ರಗಳ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಯಿತು. ಚೀನಾದ ಸ್ವಾಯತ್ತ ಪ್ರದೇಶವಾದ ಟಿಬೆಟ್ ಮತ್ತು ಭಾರತದ ನಡುವೆ ಗಡಿ ವ್ಯಾಪಾರ ಆರಂಭಿಸಲು ನಲವತ್ತು ವರ್ಷಗಳ ಬಳಿಕ ನಾಥೂಲಾ ಮಾರ್ಗವನ್ನು ತೆರೆಯಲಾಗಿತ್ತು. ಬ್ರಹ್ಮಪುತ್ರ ನದಿ ವಿವಾದ, ಪಿಓಕೆ ಕಾರಿಡಾರ್, ಟಿಬೆಟ್ ಅರಾಜಕತೆ, ಗಡಿ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಿದ್ದರೂ, ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ವಹಿವಾಟಿಗೆ ಧಕ್ಕೆಯಾಗಿಲ್ಲ.

ಚೀನಾವು ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ. ಆದರೆ, ಎರಡೂ ರಾಷ್ಟ್ರಗಳ ವ್ಯಾಪಾರ ಸಂಬಂಧದಲ್ಲಿ ಭಾರಿ ಅಸಮತೋಲನ ಇದೆ. 2007ರ ನಂತರ ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ವಾರ್ಷಿಕವಾಗಿ ಶೇಕಡಾ ಹದಿನೈದರಷ್ಟು ಹೆಚ್ಚಾಗುತ್ತಿದ್ದರೂ, ಭಾರತವು ಚೀನಾದೊಂದಿಗೆ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ. 2016ರ ಆರ್ಥಿಕ ವರ್ಷದಲ್ಲಿ ಭಾರತವು ಒಂಬೈನೂರು ಕೋಟಿ ಡಾಲರ್, ಅಂದಾಜು 58,500 ಕೋಟಿ ಮೌಲ್ಯದ ವಸ್ತುಗಳನ್ನು ಚೀನಾಕ್ಕೆ ರಫ್ತು ಮಾಡಿದೆ. ಆದರೆ, ಇದೇ ಅವಧಿಯಲ್ಲಿ ಚೀನಾದಿಂದ 6,170 ಕೋಟಿ ಡಾಲರ್, ಅಂದಾಜು 4 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಭಾರತದಿಂದ ಚೀನಾಕ್ಕೆ ಇಷ್ಟು ಪ್ರಮಾಣದ ಲಾಭವಿದ್ದರೂ ಚೀನಾದ ಒಳಮರ್ಮಗಳು ಅನರ್ಥವಾಗಿವೆ. ಭಾರತದ ವಿಶ್ವಮಟ್ಟದ ಏಳ್ಗೆಗೆ ತಮ್ಮ ಸಾಥ್ ಅನಿವಾರ್ಯವಾದಾಗೆಲ್ಲ ಚೀನಾ ಅಡ್ಡಗಾಲು ಹಾಕುತ್ತದೆ. ಎನ್ಎಸ್ಜಿ ಸದಸ್ಯತ್ವದ ವಿಚಾರದಲ್ಲಿ ನಲವತ್ತೆಂಟು ದೇಶಗಳ ಗುಂಪಿನಲ್ಲಿ ಸದಸ್ಯತ್ವ ಹೊಂದಿರುವ ಚೀನಾ, ಭಾರತದ ಪ್ರವೇಶಕ್ಕೆ ಒಂದಲ್ಲ ಒಂದು ಕಾರಣ ಮುಂದೊಡ್ಡಿ ಅಡ್ಡಿಪಡಿಸುತ್ತಲೇ ಇದೆ. ಭಾರತದ ಸದಸ್ಯತ್ವಕ್ಕೆ ಅಡ್ಡಿಪಡಿಸುವ ಮೂಲಕ ಪಾಕಿಸ್ತಾನಕ್ಕೂ ಸದಸ್ಯತ್ವ ದೊರಕಿಸಿಕೊಡುವುದು ಚೀನಾದ ಉದ್ದೇಶವಾಗಿದೆ. ಪಾಕ್ ಪಿತೂರಿಯ ಹಿಂದೆಯೂ ಚೀನಾದ ಮಹತ್ವಾಕಾಂಕ್ಷೆಗಳು ಅಡಕವಾಗಿರುವುದೇನು ಗುಟ್ಟಾಗಿ ಉಳಿದಿಲ್ಲ. ಭಯೋತ್ಪಾಧನೆಯ ವಿಚಾರದಲ್ಲೂ ಚೀನಾ ಭಾರತ ವಿರೋಧಿ ನಿಲುವನ್ನು ಹೊಂದಿದೆ.

ಚೀನಾ ಹದಿನಾಲ್ಕು ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಗಡಿ ಗುರುತಿಸುವಿಕೆ ವಿಚಾರದಲ್ಲಿ ಬಹುತೇಕ ಎಲ್ಲ ನೆರೆ ರಾಷ್ಟ್ರಗಳ ಜತೆ ಅದು ಸಂಘರ್ಷಕ್ಕೆ ಇಳಿದಿದೆ. ಅಫ್ಗಾನಿಸ್ತಾನ, ಕಜಾಕಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್, ರಷ್ಯಾ ಮತ್ತು ತಾಜಿಕಿಸ್ತಾನಗಳೊಂದಿಗಿನ ಗಡಿ ವಿವಾದಗಳನ್ನು ಅದು ಬಗೆಹರಿಸಿಕೊಂಡಿದೆ. ಜಲಗಡಿ ವಿಚಾರವಾಗಿಯೂ ಚೀನಾ ನೆರೆ ರಾಷ್ಟ್ರಗಳೊಂದಿಗೆ ವೈಮನಸ್ಸು ಕಟ್ಟಿಕೊಂಡಿದೆ. ಅದು ಜಪಾನ್, ದಕ್ಷಿಣ ಕೊರಿಯ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪ್ಪೀನ್ಸ್ಗಳೊಂದಿಗೆ ಜಲ ಗಡಿ ಹಂಚಿಕೊಂಡಿದ್ದು, ಎಲ್ಲ ಗಡಿಗಳೂ ವಿವಾದದಲ್ಲಿವೆ. ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ವಿಶ್ವವೇ ಚೀನಾವನ್ನು ದೂರ ಸರಿಯುವುದಕ್ಕೆ ಹೇಳಿದೆ. ಚೀನಾ ಸೌತ್ ಚೀನಾ ಸೀಗಾಗಿ ಯುದ್ಧಕ್ಕೂ ಸಿದ್ದವೆಂದಿದೆ.

ಭಾರತದ ಜಲಗಡಿಗಳ ಸುತ್ತಲೂ ತನ್ನ ನೆಲೆ ಸ್ಥಾಪಿಸುವುದು ಚೀನಾದ ಅಘೋಷಿತ ನೀತಿ. ಹಿಂದೂ ಮಹಾಸಾಗರದಲ್ಲಿ ಬಹಳ ಹಿಂದಿನಿಂದಲೂ ಚೀನಾದ ಉಪಸ್ಥಿತಿ ಇದೆ. ಈಗ ಮ್ಯಾನ್ಮಾರ್ನ ಕೊಕೋಸ್ ದ್ವೀಪ, ಬಾಂಗ್ಲಾದೇಶದ ಚಿತ್ತಗಾಂಗ್, ಶ್ರೀಲಂಕಾದ ಹಂಬಂತೋಟ, ಮಾಲ್ಡೀವ್ಸ್ನ ಮರಾವೊ ಅಟಾಲ್, ಪಾಕಿಸ್ತಾನದ ಗ್ವಾದರ್ಗಳಲ್ಲಿ ಚೀನಾ ನೌಕಾ ನೆಲೆಗಳನ್ನು ಹೊಂದಿದೆ. ಮಾಲಿಯಲ್ಲಿ ಸಂಪೂರ್ಣ ಸಕ್ರಿಯವಾಗಿರುವ ರಾಯಭಾರ ಕಚೇರಿಗಳನ್ನು ಹೊಂದಿರುವ ದೇಶಗಳು ಭಾರತ ಮತ್ತು ಚೀನಾ ಮಾತ್ರ. ಆದರೆ ಚೀನಾದ ಸುತ್ತಲಿನ ದೇಶಗಳ ಜತೆ ಉತ್ತಮ ಸಂಬಂಧ ಹೊಂದುವ ನೀತಿಯನ್ನು ಭಾರತ ಅನುಸರಿಸುತ್ತಿದೆ. ಜಪಾನ್, ದಕ್ಷಿಣ ಕೊರಿಯ ಮತ್ತು ವಿಯೆಟ್ನಾಂ ಜತೆಗೆ ಭಾರತ ಒಳ್ಳೆಯ ಬಾಂಧವ್ಯ ಹೊಂದಿದೆ. ಅದಲ್ಲದೆ, ಚೀನಾದ ಮಧ್ಯ ಏಷ್ಯಾದ ನೆರೆ ದೇಶಗಳಾದ ಅಫ್ಗಾನಿಸ್ತಾನ, ಕಜಾಕಿಸ್ತಾನ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ, ತಾಜಿಕಿಸ್ತಾನ, ತುರ್ಕಮೆನಿಸ್ತಾನದ ಜೊತೆ ಉತ್ತಮ ಸಂಬಂಧ ಹೊಂದಿದೆ. ಚೀನಾ ಇಂತಹ ಹಲವು ದೇಶಗಳಿಗೆ ಆರ್ಥಿಕ ಬಲ ನೀಡಿ, ಕೀಲುಗೊಂಬೆಯಾಗಿಸಿದೆ.

ಚೀನಾಕ್ಕೆ ವಿಶ್ವವನ್ನು ಗೆಲ್ಲುವ ಮರ್ಜಿಯಿದೆ. ಅದಕ್ಕೆ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಬೇಕು. ಸಣ್ಣಪುಟ್ಟ ದೇಶಗಳನ್ನು ಕಾಸು ಕೊಟ್ಟು ಹಂಗಿನಲ್ಲಿ ಬೀಳಿಸಿಯಾಗಿದೆ. ಭಾರತ ಮಾತ್ರ ಬಗ್ಗುವುದಕ್ಕೆ ರೆಡಿಯಿಲ್ಲ. ಜಪಾನ್ ಹತ್ತಿರವೂ ಸುಳಿಯುವುದಿಲ್ಲ. ರಷ್ಯಾ ಮೇಲೆ ಅಧಿಕಾರ ಚಲಾಯಿಸುವುದು ದೂರದ ಮಾತು. ಭಾರತ ಸೇರಿದಂತೆ ಒಂದೆರಡು ರಾಷ್ಟ್ರಗಳಷ್ಟೇ ಚೀನಾಕ್ಕೆ ಏಷ್ಯಾದಲ್ಲಿ ಸವಾಲಾಗಿದೆ. ಅದರಲ್ಲೂ ಹತ್ತಿರದಲ್ಲಿರುವ ಭಾರತದ ಡೋಂಟ್ಕೇರ್ ಮನೋಭಾವ ಸಹಿಸಲಾಗುತ್ತಿಲ್ಲ.

ಯುದ್ಧಕ್ಕೆ ಸರಿಯಾದ ಕಾರಣ ಬೇಕು. ಅದನ್ನು ಚೀನಾ ಹುಡುಕುತ್ತದೆ. ಕಾಲು ಕೆರೆದು ಜಗಳಕ್ಕೆ ಬೀಳುತ್ತದೆ. ಮೆಚ್ಚುವ ವಿಚಾರವೇನೆಂದರೆ ಬಲಿಷ್ಠ ಚೀನಾದ ವಿರುದ್ಧ ಭಾರತೀಯ ಯೋಧರು ಕಲ್ಲುಮನಸ್ಸಿನಿಂದ ನೆಲಕಚ್ಚಿ ನಿಂತಿದ್ದಾರೆ. ಅವರಿಗೆ ಕೋಟಿ ಸಲಾಂ..!

– Ra Chintan

( ವಿಶ್ವಾರಾಧ್ಯ ಸತ್ಯಂಪೇಟೆ )

Leave a Reply

Your email address will not be published.