ದುರಾಚಾರಿ ಗುರುವಲ್ಲ, ಗುರುವಿನ ಗುಲಾಮ ಅನ್ನೋದು ಶೋಷಣೆ


ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು ಇಂದಿಗೂ ಹೇಳಲಾಗುತ್ತದೆ.  ಬಸವಾದಿ ಶರಣರ ಕಾಲಕ್ಕಿಂತ ಮೊದಲು ಈ ಮಾತಿಗೆ ಎದುರು ಆಡುವವರು ಇರಲಿಲ್ಲ. ವ್ಯಕ್ತಿ ಗುಲಾಮನಾಗಿರಬೇಕಾದ ವ್ಯವಸ್ಥೆಯನ್ನು ಪ್ರಶ್ನಿಸುವವರು ಇರಲಿಲ್ಲ.  ಶಿಷ್ಯನೆಂದರೆ ಆತ ಖಾಯಂ ಶಿಷ್ಯ ಮಾತ್ರ. ಆ ಗುರುವನ್ನು ಮೀರಿ ಬೆಳೆಯುವುದು ಸಾಧ್ಯವಿಲ್ಲ ಎಂಬ ನಂಬುಗೆಗಗಳು ಪ್ರಬಲವಾಗಿದ್ದವು. ನದಿ ಮೂಲ ಮತ್ತು ಋಷಿ ಮೂಲ ನೋಡಬಾರದು ಎಂಬ ನಾಣ್ಣುಡಿಯ ಮೂಲಕ ಅವರ ಇತಿಹಾಸ ಕೆದಕಬಾರದು ಎಂದು ಸಾರಿಕೊಂಡು ಬಂದಿತ್ತು ಒಂದು ವರ್ಗ.

ಇಂಥ ವಿಪರೀತ ಗೌರವಾರ್ಹ ಘನತೆ ಹೊಂದಿದ  ಗುರು ಹಲವಾರು ಸಲ ಶೋಷಕನೂ ಆಗಿದ್ದ. ಏಕಲವ್ಯನ ಹೆಬ್ಬೆರಳು ಬಲಿಯಾಗಿ ಪಡೆದ ದ್ರೋಣಾಚಾರ್ಯ ನನ್ನ ಮಾತಿಗೆ ಸಾಕ್ಷಿಯಾಗಿದ್ದಾನೆ. ಗುರುವಿಗಾಗಿ ತನ್ನ ಹೆಂಡತಿ ಮಕ್ಕಳನ್ನು ಬಲಿಕೊಟ್ಟ ಪುಣ್ಯಾತ್ಮ ಶಿಷ್ಯರೂ ಉಂಟು.

ಇಂಥ ಅಸಹಜ ಗುರುವನ್ನು ಶರಣರು ಒಪ್ಪಿಕೊಳ್ಳಲಿಲ್ಲ.  ಜ್ಯೋತಿ ಮುಟ್ಟಿ ಜ್ಯೋತಿಯಂತಾಗುವ ಪರಿಯನ್ನವರು ಹೇಳಿಕೊಟ್ಟರು. ಅರಿವಿಂಗೆ ಹಿರಿದು ಕಿರಿದುಂಟೆ ? ಎಂದು ಪ್ರಶ್ನಿಸಿ,  ಶತಮಾನಗಳಿಂದ ನಡೆದು ಬಂದ ಹಾದಿಯನ್ನು ಬದಲಿಸಿದರು. ಕಾವಿ ಕಾಷಾಂಭರ ಹೊದ್ದು ತಿರುಗುವ ಗಾವಿಲರ ಮುಖ ನೋಡಲಾಗದು ಎಂದು ನಿಂತು ಹೋಗಿದ್ದ ವ್ಯವಸ್ಥೆಗೆ ಚಲನೆಯನ್ನು ನೀಡಿದರು.

ಗುರುವಾದರೂ ಆಚಾರ ಭ್ರಷ್ಟನಾದಡೆ ಅನುಸರಿಸಲಾಗದು
ಲಿಂಗವಾದಡೂ ಆಚಾರ ಭ್ರಷ್ಟನಾದಡೆ ಪೂಜಿಸಲಾಗದು
ಜಂಗಮವಾದಡೂ ಆಚಾರ ಭ್ರಷ್ಟನಾದಡೆ ಕೂಡಲಾಗದು
ಆಚಾರವೆ ವಸ್ತು, ವ್ರತವೇ ಪ್ರಾಣ,ಕ್ರಿಯೆಯೇ ಜ್ಞಾನ,ಜ್ಞಾನವೇ ಆಚಾರ. ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗವು ತಾನೆ

ಇದು ಒಂದು  ಅಕ್ಕಮ್ಮನ ವಚನ. ಅದು ಬಸವಣ್ಣ ಮತ್ತು ಶರಣರ ನಿಲುವು.

ಗುರು,ಲಿಂಗ,ಜಂಗಮವಾದಡೂ ಅದು ಆಚಾರ ಸಂಪನ್ನವಾಗಿರಬೇಕು. ಮೌಲ್ಯ ಉಳ್ಳದ್ದಾಗಿರಬೇಕು. ಅನುಕರಣೀಯವಾಗಿರಬೇಕು. ಲಿಂಗಸಂಪನ್ನನಾಗಿ ಲಿಂಗ ಗುಣಗಳನ್ನು ಅಳವಡಿಸಿಕೊಂಡವ ಗುರುವಾಗುತ್ತಾನೆ. ದುರಾಚಾರಿ,ದುರ್ವ್ಯಸನಿ ಗುರು ಆಗಲಾರ.

ಆದರೆ ಇಂದು ಇಂಥ ಗುರುಗಳು ಇದ್ದಾರೆಯೆ ?

  • ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published.