ಟೆಸ್ಟ್ ಸರಣಿ: ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡಿ ಹೊಸ ದಾಖಲೆ ನಿರ್ಮಿಸಿದ ಭಾರತ ತಂಡ


ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರಿ ಜಯದೊಂದಿಗೆ ಭಾರತ ತಂಡ ಲಂಕಾ  ತಂಡವನ್ನು ವೈಟ್ ವಾಷ್ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. 
 
ಪಲ್ಲೆಕಿಲೆ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ನೀಡಿದ್ದ 487ರನ್‌ಗಳ ಬೃಹತ್‌ ಮೊತ್ತವನ್ನು ಹಿಂಬಾಲಿಸುವಲ್ಲಿ ವಿಫಲವಾದ ಆತಿಥೇಯ ಶ್ರೀಲಂಕಾ ತಂಡ ಇನ್ನಿಂಗ್ಸ್‌ ಹಾಗೂ 171ರನ್‌ಗಳ ಸೋಲು ಕಂಡಿದೆ. ಆ ಮೂಲಕ ವಿದೇಶಿ ನೆಲದಲ್ಲಿ ಭಾರತ ತನ್ನ  ಟೆಸ್ಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 487 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಬ್ಯಾಟಿಂಗ್ ವೈಫಲ್ಯದಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 135ಕ್ಕೆ ಆಲೌಟ್ ಆಗಿತ್ತು. ಇದರೊಂದಿಗೆ ಫಾಲೋ ಆನ್ ಗೆ ಒಳಪಟ್ಟ ಶ್ರೀಲಂಕಾ ಮತ್ತೆ ದ್ವಿತೀಯ ಇನ್ನಿಂಗ್ಸ್ ಪ್ರಾರಂಭಿಸಿತ್ತು. ಇಲ್ಲಿಯೂ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು 181 ರನ್ ಗಳಿಗೆ ಸರ್ವಪತನ ಕಂಡಿತು.
 
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಶಿಖರ್ ಧವನ್ 119, ರಾಹುಲ್ 85, ಅಜಿಂಕ್ಯಾ ರಹಾನೆ 16, ಚೇತೇಶ್ವರ ಪೂಜಾರ 8, ವಿರಾಟ್‌ ಕೊಹ್ಲಿ 42, ಹಾರ್ದಿಕ್ ಪಾಂಡ್ಯಾ 108, ಆರ್.ಅಶ್ವಿನ್ 31, ಕುಲದೀಪ್ ಯಾದವ್ 26, ವೃದ್ಧಿಮಾನ್ ಸಾಹ 16, ಮೊಹಮ್ಮದ್ ಶಮಿ 8, ಉಮೇಶ್ ಯಾದವ್ ಔಟಾಗದೆ 3 ರನ್ ದಾಖಲಿಸಿದರು.
 
ದ್ವಿತೀಯ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಪರ ಕರುಣರತ್ನೆ 16, ಚಾಂಡಿಮಲ್ 36, ಮ್ಯಾಥ್ಯೂಸ್ 35 ಮತ್ತು ಡಿಕ್ವೇಲ್ಲಾ 41 ರನ್ ಗಳಿಸಿದ್ದಾರೆ.
 
ಟೀಂ ಇಂಡಿಯಾ ಆರ್ ಅಶ್ವಿನ್ 4, ಮೊಹಮ್ಮದ್ ಶಮಿ 3, ಉಮೇಶ್ ಯಾದವ್ 2 ವಿಕೆಟ್ ಪಡೆದಿದ್ದಾರೆ.
 

 

Leave a Reply

Your email address will not be published.