ಕಲಾವಿದ ರಿಯಾಜ್ ಚೌಗಲಾ ಮೊದಲ ಅಲ್ಬಂ “ಆ ಝರಾ” ಆವಾಜ್ ಮೋಡಿ


ತಮ್ಮ ಸಿರಿ ಕಂಠದ ಮೂಲಕ  ರಾಜ್ಯ, ರಾಷ್ಟ್ರ ಮಟ್ಟದಲ್ಲಿ  ಹೆಸರಾಗಿರುವ ಗೋಕಾಕ ಮೂಲದ  ರಿಯಾಜ್ ಚೌಗಲಾ ಅವರ ಮೊದಲ ಅಲ್ಬಂ “ಆ ಝರಾ” ಬಿಡುಗಡೆಗೊಂಡ ನಾಲ್ಕು ದಿನಗಳಲ್ಲೇ ಸಂಗೀತ ರಸಿಕರ ಅಂಗಳದಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ. ಟ್ರ್ಯಾಕ್ ಇಲ್ಲದೆ  ಲೈವ್ ಸಂಗೀತ ಬಳಸಿ  ಈ ಅಲ್ಬಂನಲ್ಲಿ   ಚಿತ್ರಗೀತೆಗಳನ್ನು ಮರು ಸೃಷ್ಟಿಸಿರುವುದು  ವಿಶೇಷ. ಸತೀಶ ಶುಗರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ  ಬಹುಮಾನ ಪಡೆದ ರಾಜ್ಯ, ರಾಷ್ಟ್ರದ ಪ್ರತಿಭಾವಂತ ಕಲಾವಿದರ ವಾದ್ಯ ಸಹಕಾರ, ಸಂಗೀತ ಸಂಯೋಜನೆಯಲ್ಲಿ ಜನಪ್ರಿಯ ಗಾಯಕರ ಕಂಠ ಸಿರಿಯ  ಹಳೆಯ ಹಾಡುಗಳನ್ನು ಹೊಚ್ಚ ಹೊಸ ಹಾಡುಗಳಾಗಿ ಪರಿಚಯಿಸಲಾಗಿದೆ. ರಿಯಾಜ್ ಚೌಗಲಾ ಅವರ ಸಿರಿಕಂಠದಲ್ಲಿ ಹಳೆಯ ಹಾಡುಗಳು ಹೊಸ ರೂಪದಲ್ಲಿ ಮೈ ದಳೆದಿವೆ.  ಹೆಸರಾಂತ ಹಿನ್ನಲೆ ಗಾಯಕರಾದ ಮಹ್ಮದ್ ರಫಿ,  ಕಿಶೋರಕುಮಾರ, ಮುಕೇಶ್,  ಎಸ್.ಪಿ.ಬಾಲಸುಬ್ರಮಣ್ಯಂ ಸೇರಿ ಹಲವರ ಹಾಡುಗಳನ್ನು ಇಲ್ಲಿ ಮರು ಸೃಷ್ಟಿಸಲಾಗಿದೆ.  ಸತೀಶ ಶುಗರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ಪ್ರತಿಭಾವಂತ ಕಲಾವಿದರು ತಮ್ಮ ಗುರು ಮತ್ತು ಸತೀಶ ಶುಗರ್ಸ್ ಅವಾರ್ಡ್ ಕಾರ್ಯಕ್ರಮದ ಸಂಘಟಕ ರಿಯಾಜ್ ಚೌಗಲಾ ಅವರ ಪ್ರತಿಭೆಯನ್ನು ಸಂಗೀತ  ರಸಿಕರ ಮುಂದೆ ಬಿಚ್ಚಿಟ್ಟಿದ್ದಾರೆ. ಗೋಕಾಕ ನಗರದ ಮಹಮ್ಮದ್ ರಫಿ ಎಂದೇ ಹೆಸರಾದ ರಿಯಾಜ್ “ಆ ಝರಾ ಮೇರೆ ಹಮ್ಮನಶಿ” ಹಾಡಿನ ಮೂಲಕ  ಸಾಮಾಜಿಕ ಜಾಲ ತಾಣಗಳಲ್ಲೂ ಸಂಗೀತ ರಸಿಕರ ನಶೆ ಏರಿಸಿದ್ದಾರೆ.

“ಆ ಝರಾ” ಅಲ್ಬಂಗೆ ಕೊಲ್ಲಾಪುರದ ಕೀಬೋರ್ಡ್ ಕಲಾವಿದ ವಿಕ್ರಮ ಪಾಟೀಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಗೋಕಾಕ ಎಲ್ ಡಿಎಸ್ ಮಾಲೀಕ ಶಂಕರ ಯಮಕನಮರಡಿ ಹಾಡಿನ ಸಂಗೀತ ದೃಶ್ಯಗಳನ್ನು ಸಂಕಲನ ಮಾಡಿದ್ದಾರೆ. ನ್ಯೂ ಸ್ಪರ್ಧಾ ರೆಕಾರ್ಡಿಂಗ್ ನ ಮಾಲೀಕರಾದ ಶಿವಾಜಿ ಪಾಟೀಲ ಅವರು ಹಾಡಿನ ಧ್ವನಿಮುದ್ರಣದಲ್ಲಿ ಅದ್ಭುತವೆನಿಸುವ ಚಳಕ ತೋರಿದ್ದಾರೆ. ಹಲವು ಯುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿದ ಫಲವಾಗಿ, ಪ್ರತಿಭೆ ಇಲ್ಲಿ ಅನಾಮತ್ತಾಗಿ ಅನಾವರಣಗೊಂಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ  “ಈ ಝರಾ”  ಮೋಡಿ ಮಾಡುತ್ತಿದೆ.

“ಆ ಝರಾ” ಅಲ್ಬಂ ಮೋಡಿಯಿಂದ ಪ್ರೇರಣೆಗೊಂಡಿರುವ ಕಲಾವಿದ ರಿಯಾಜ್ ಈಗ ತಿಂಗಳಿಗೊಂದು ಅಲ್ಬಂ ಹೊರತರಲು ಯೋಜನೆ ರೂಪಿಸಿದ್ದಾರೆ.  ಸೆಪ್ಟೆಂಬರ್ ನಿಂದ ಪ್ರತಿ ತಿಂಗಳು ಪ್ರತಿಭಾವಂತ ಕಲಾವಿದರ ಸಂಗೀತ ಅಲ್ಬಂ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಸತೀಶ ಶುಗರ್ಸ್ ಅವಾರ್ಡ ಕಾರ್ಯಕ್ರಮ ಆರಂಭವಾಗಿ 17 ವರ್ಷ ಕಳೆದಿವೆ. ಈ ಕಾರ್ಯಕ್ರಮದ ಸಂಘಟನೆಯಲ್ಲಿರುವ ಶಿಸ್ತು, ಅಚ್ಚುಕಟ್ಟುತನ ಮನ ಸೆಳೆಯುವಂಥವು. ಈ ಕಾರ್ಯಕ್ರಮಕ್ಕೆ ಫಿಲ್ಮಫೇರ್ ಅವಾಡ್ರ್ಸ್ ಕಾರ್ಯಕ್ರಮವೇ ಮಾದರಿಯಾಗಿದೆ. “ಯುವ ಕಲಾವಿದರನ್ನು ಗುರುತಿಸುತ್ತೇವೆ, ಭವಿಷ್ಯವನ್ನು ರೂಪಿಸುತ್ತೇವೆ” ಎನ್ನುವುದು ಸತೀಶ ಶುಗರ್ಸ್ ಅವಾರ್ಡ್ಸ ಯೋಜನೆಯ ಘೋಷ ವಾಕ್ಯ. ಸಂಗೀತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮಕ್ಕೆ ಸಂಗೀತರ ರಸಿಕರ ಮಹಾಪೂರವೇ ಹರಿದು ಬರುತ್ತಿದೆ.

 ಸತೀಶ ಶುಗರ್ಸ್ ಅವಾರ್ಡ್ ಕಾರ್ಯಕ್ರಮದ ಈ ಬಗೆಯ ಯಶಸ್ಸಿನ ಗುಟ್ಟನ್ನು ಶೋಧಿಸುತ್ತ ಹೋದರೆ, ಅದರ ಹಿಂದಿರುವ ದೊಡ್ಡ ಸೂತ್ರ  ಶಾಸಕ ಸತೀಶ ಜಾರಕಿಹೊಳಿ ಅವರು ಅನ್ನೋದು ಗೊತ್ತಾಗುತ್ತದೆ. ಜೊತೆಗೆ ಸಂಗೀತ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಸಂಘಟಿಸುವಲ್ಲಿ ಕಲಾವಿದ ರಿಯಾಜ್ ಚೌಗಲಾ ತೋರಿರುವ ಆಸಕ್ತಿ, ಮತ್ತೊಂದು ಬಗೆಯ ಶಕ್ತಿ ಎಂಬುದು ತಿಳಿದು ಯಶಸ್ಸಿನ ಗುಟ್ಟು ಬಯಲಾಗುತ್ತದೆ.

ಸಿರಿ ಕಂಠದ ರಿಯಾಜ್ ಚೌಗಲಾ ಸಂಗೀತ ಕಲಾವಿದರಾಗಿ ಅಷ್ಟೇ ಅಲ್ಲ. ಕಲಾವಿದರನ್ನು ಗುರುತಿಸುವಲ್ಲಿ, ಬೆಳೆಸುವುದಲ್ಲೂ  ಒಳ್ಳೆಯ ಕೆಲಸ ಮಾಡಿದ್ದಾರೆ. ಎರಡೂವರೆ ದಶಕಗಳ ನಿರಂತರ ಸಂಗೀತ ಪಯಣದಲ್ಲಿ ಹಲವು ಪ್ರತಿಭಾವಂತರನ್ನು ಬೆಳಕಿಗೆ ತಂದಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ.ಗೋಕಾಕದಲ್ಲಿ ಮಾಡರ್ನ್ ಮೆಲೋಡಿ ಆರ್ಕೆಸ್ಟ್ರಾ  ಹೆಸರಿನಲ್ಲಿ 17 ಕಲಾವಿದರ ತಂಡ ಕಟ್ಟಿದ್ದಾರೆ.  ಅಖಂಡ 25 ವರ್ಷ ದೇಶ, ರಾಜ್ಯ, ನಗರ ಪಟ್ಟಣ ಸುತ್ತಿ ಹಲವಾರು ಕಡೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.  ಹೋದಲ್ಲಿ ಬಂದಲ್ಲಿ ಗೋಕಾಕ ನಗರ ಮತ್ತು ಬೆಳಗಾವಿ ಜಿಲ್ಲೆಯ ಹೆಸರನ್ನು ಬೆಳಗಿಸಿದ್ದಾರೆ. ಗೋವಾ, ಹೈದರಾಬಾದ್, ಪೂನಾ ಸೇರಿ ದೇಶದ ಹಲವೆಡೆ ಮತ್ತು ರಾಜ್ಯದ ನಾನಾ ಕಡೆ ರಿಯಾಜ್ ಚೌಗಲಾ ನೀಡಿರುವ ಮೆಲೋಡಿ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಅವರ ಇಮೇಜ್ ಬೆಳೆಸಿವೆ. ಅವರಿಗೆ ಅಪಾರ ಶಿಷ್ಯ ಬಳಗವನ್ನು ಸೃಷ್ಟಿಸಿವೆ.
ಸತೀಶ ಶುಗರ್ಸ್ ಅವಾರ್ಡ್ ಮೂಲಕ ಬೆಳಕು ಕಂಡ ಕಲಾವಿದರ ಪೈಕಿ ಹಲವರು ಈಗ ಕನ್ನಡ, ಹಿಂದಿ, ಮರಾಠಿ ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವಾದ್ಯ ಕಲಾವಿದರಾಗಿ, ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದ್ದಾರೆ. ಬೆಂಗಳೂರು, ಮೈಸೂರು ಸೇರಿ ರಾಜ್ಯದ ಮಹಾನಗರಗಳು ಮತ್ತು ದೇಶದ ಹಲವೆಡೆ ನೆಲೆಸಿರುವ ಈ ಕಲಾವಿದರಿಂದ ಅವಾರ್ಡ್ ಕಾರ್ಯಕ್ರಮದ ಕೀರ್ತಿ ಪ್ರಭೆ ಎಲ್ಲೆಡೆಯೂ ಬೆಳಗಿದೆ. ಸಂಗೀತ ಲೋಕದಲ್ಲಿ ಹೊಸ ಹುರುಪು ಮೂಡಿದೆ.

 ಕಲಾವಿದ ರಿಯಾಜ್ ಚೌಗಲಾ  ಅವರನ್ನು ಮೊ-  94481 10461 ನಲ್ಲಿ ಸಂಪರ್ಕಿಸಬಹುದು.

‘ಆ ಝರಾ’ ರೀಯಾಜ್ ಅವರ ಸಿರಿಕಂಠದಲ್ಲಿ ಕೇಳಲು ಇಲ್ಲಿ ಕ್ಲಿಕ್ ಮಾಡಿ

-ಮೃತ್ಯುಂಜಯ ಯಲ್ಲಾಪುರಮಠ

3 Responses to "ಕಲಾವಿದ ರಿಯಾಜ್ ಚೌಗಲಾ ಮೊದಲ ಅಲ್ಬಂ “ಆ ಝರಾ” ಆವಾಜ್ ಮೋಡಿ"

 1. vital waladavar   August 5, 2017 at 8:25 pm

  very nice

  Reply
 2. Rustum   August 6, 2017 at 11:41 am

  Very nice

  Reply
 3. Samira Bagewadi   August 6, 2017 at 1:50 pm

  ???Congrats Riyaz sir. Weldone. Very nice performance.
  We all want to hear ur songs mre n more .So best of luck for next songs.

  Reply

Leave a Reply

Your email address will not be published.