ಜಿಎಸ್‍ಟಿ ಅಥವಾ ಸರಕು ಸೇವೆ ತೆರಿಗೆ : ಕೆಲವು ಟಿಪ್ಪಣಿಗಳು


ಸರಕುಸೇವೆ ಅಥವಾ ಜಿಎಸ್‍ಟಿ ಜಾರಿಗೆ ಬಂದು ದೇಶದಲ್ಲಿ ಚರ್ಚೆಯ ಅಲೆಗಳು ಎದ್ದಿವೆ. ತೆರಿಗೆ ಜಾರಿಗೊಂಡು ಎರಡು ತಿಂಗಳು ಕಳೆಯುತ್ತ ಬಂದರೂ ಗೊಂದಲುಗಳು ಬಗೆಹರಿದಿಲ್ಲ. ಕರ್ನಾಟಕದ ಪ್ರಮುಖ ಅರ್ಥಚಿಂತಕ  ಎಂ.ಚಂದ್ರ ಪೂಜಾರಿ ಈ ಜಿಎಸ್ ಟಿ ಕುರಿತು   ನಮ್ಮ ನಿಮ್ಮೆಲ್ಲರಿಗೂ  ಬಹಳ ಮುಖ್ಯವಾದ ಅಂಶಗಳನ್ನು ಅತ್ಯಂತ ಸರಳವಾಗಿ, ಆಕರ್ಷಕವಾಗಿ ತಿಳಿಸಿಕೊಟ್ಟಿದ್ದಾರೆ. ಈ ಬರೆಹವನ್ನು  ಬಿಡದೆ ಕೊನೆಯವರೆಗೂ ಓದಿದರೆ ಒಂದಿಷ್ಟು ಮಹತ್ವದ ಮಾಹಿತಿಗಳು ಸರಳವಾಗಿ ತಿಳಿಯುತ್ತವೆ.)

————————————————————————————————————————————
ಜುಲೈ ಒಂದರಿಂದ ದೇಶವ್ಯಾಪಿ ಸರಕುಸೇವೆ ಅಥವಾ ಜಿಎಸ್‍ಟಿ ಜಾರಿಗೆ ಬಂದಿದೆ. ಪೇಪರ್‍ಗಳಲ್ಲಿ, ಟೀವಿಗಳಲ್ಲಿ, ಭಾಷಣಕಾರರು ಎಲ್ಲರೂ ಜಿಎಸ್‍ಟಿಯನ್ನು ಹಾಡಿ ಹೊಗಳುವವರೇ ಹೆಚ್ಚಿದ್ದಾರೆ. ಎಲ್ಲರೂ ಜಿಎಸ್‍ಟಿಯ ಉತ್ತಮ ಗುಣಗಳನ್ನು ಪಟ್ಟಿ ಮಾಡುವುದರಿಂದ ಆ ಕುರಿತು ಹೆಚ್ಚು ಹೇಳುವ ಅಗತ್ಯವಿಲ್ಲ. ನನ್ನ ಈ ಬರೆಹದ  ಉದ್ದೇಶ ಜಿಎಸ್‍ಟಿಯ ಕೆಲವೊಂದು ನಕರಾತ್ಮಕ ಗುಣಗಳನ್ನು ಚರ್ಚಿಸುವುದು. ಮೊದಲು ಎಲ್ಲರೂ ಪಟ್ಟಿ ಮಾಡುವ ಜಿಎಸ್‍ಟಿಯ ಉತ್ತಮಗಳನ್ನು ನೋಡೋಣ. ಜಿಎಸ್‍ಟಿಯನ್ನು ಈ ಕೆಳಗಿನ ಉತ್ತಮ ಗುಣಗಳಿಗಾಗಿ ಜಾರಿಗೆ ತರಲಾಗಿದೆ.

ಅ. ಆರ್ಥಿಕ ಪ್ರಗತಿಯನ್ನು ವೃದ್ಧಿಸುತ್ತದೆ.

ಆ. ಹಣದುಬ್ಬರವನ್ನು ಕಡಿಮೆ ಮಾಡುತ್ತದೆ.

ಇ. ದೇಶವ್ಯಾಪಿ ಒಂದು ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.

ಈ. ತೆರಿಗೆ ಸಂಗ್ರಹವನ್ನು ಹೆಚ್ಚಿಸುತ್ತದೆ.

ಉ. ತೆರಿಗೆ ಮೇಲೆ ತೆರಿಗೆ ನೀಡುವುದನ್ನು ತಪ್ಪಿಸುತ್ತದೆ.

ಊ. ರಾಜ್ಯ ಮತ್ತು ಕೇಂದ್ರ ಎರಡೂ ಸರಕಾರಗಳಿಗೂ ಅನುಕೂಲ ಮಾಡುತ್ತದೆ.

ಎ. ಉತ್ಪಾದಕರು ಮತ್ತು ಗ್ರಾಹಕರು ಇಬ್ಬರಿಗೂ ಲಾಭದಾಯಕ.

ಏ. ತೆರಿಗೆ ಕಟ್ಟುವವರಿಗೆ ಮತ್ತು ತೆರಿಗೆ ಸಂಗ್ರಹಸುವವರಿಗೆ ಸುಲಭದಾಯಕ.

ಮಾಧ್ಯಮಗಳು ಮತ್ತು ಜನನಾಯಕರು ಪಟ್ಟಿ ಮಾಡುವ ಉತ್ತಮ ಗುಣಗಳನ್ನು ವಿಮರ್ಶಿಸುವ ಮುನ್ನ ತೆರಿಗೆ ಕುರಿತು ಕೆಲವು ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮವಾದುದು.

1. ತೆರಿಗೆ ಸ್ವರೂಪ ಮತ್ತು ಸಂಗ್ರಹ : ನಮ್ಮ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ತೆರಿಗೆಯಿಂದ ಬರುವ ಆದಾಯ ಕೇವಲ ಶೇ.16.5 ಮಾತ್ರ. ಇದರಲ್ಲೂ ಶೇ.11ರಷ್ಟು ಪರೋಕ್ಷ ತೆರಿಗೆಯಿಂದ ಬಂದರೆ ಶೇ.5.5ರಷ್ಟು ನೇರ ತೆರಿಗೆಯಿಂದ ಬರುತ್ತಿದೆ.

2. ಕೇಂದ್ರ ಸರಕಾರಕ್ಕೆ ನೇರ ತೆರಿಗೆಯಿಂದ ಆದಾಯ ಬಂದರೆ ರಾಜ್ಯ ಸರಕಾರಗಳ ಶೇ.80ರಷ್ಟು ತೆರಿಗೆ ಆದಾಯ ಪರೋಕ್ಷ ತೆರಿಗೆಯಿಂದ ಬರುತ್ತಿದೆ. ಕೇಂದ್ರ ಸರಕಾರ ಸಂಗ್ರಹಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಶೇ.46ರಷ್ಟು ಕೇಂದ್ರಕ್ಕೆ ಹೋದರೆ ಶೇ.54 ಮಾತ್ರ ರಾಜ್ಯಗಳಿಗೆ ಬರುತ್ತಿದೆ. ರಾಜ್ಯಗಳ ಖರ್ಚುವೆಚ್ಚಗಳಲ್ಲಿ ಬದಲಾಗುವುದಿಲ್ಲ, ಜೊತೆಗೆ ನೇರ ತೆರಿಗೆ ಕೇಂದ್ರಕ್ಕೆ ಹೋಗುವುದು ತಪ್ಪುವುದಿಲ್ಲ.

3. ನಮ್ಮ ದೇಶ ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ಶೇ.35ರಷ್ಟು ನೇರ ತೆರಿಗೆಯಿಂದ ಅಥವಾ ಅನುಕೂಲಸ್ಥರಿಂದ ಬಂದರೆ ಶೇ.65ರಷ್ಟು ಪರೋಕ್ಷ ತೆರಿಗೆಯಿಂದ ಅಥವಾ ಅನಾನುಕೂಲಸ್ಥರಿಂದ ಬರುತ್ತಿದೆ.

4. ಜಿಎಸ್‍ಟಿಯೊಂದು ಪರೋಕ್ಷ ತೆರಿಗೆ – ಜಿಎಸ್‍ಟಿ ಜಾರಿಗೆ ತರುವ ಮೂಲಕ ಸರಕಾರಗಳು ಬಡವರ ಮೇಲಿನ ತೆರಿಗೆ ಹೊರೆಯನ್ನು ಹೆಚ್ಚಿಸುತ್ತಿದ್ದಾರೆ. ನಮ್ಮಲ್ಲಿ ನೇರ ತೆರಿಗೆ ಸಂಗ್ರಹ ಈಗಾಗಲೇ ಕಡಿಮೆ ಇದೆ. ಅದನ್ನು ಹೆಚ್ಚಿಸುವ ಕ್ರಮಗಳು ಕಾಣುತ್ತಿಲ್ಲ. ಹೆಚ್ಚಿಸುವ ಬದಲು ಕಡಿಮೆ ಮಾಡಲಾಗುತ್ತಿದೆ. ಅದರ ಬದಲು ಪರೋಕ್ಷ ತೆರಿಗೆಯನ್ನು ಹೆಚ್ಚಿಸಲಾಗುತ್ತಿದೆ.

5. ಜಿಎಸ್‍ಟಿ ಅನುಭೋಗದ ಮೇಲಿನ ತೆರಿಗೆ : ಇದು ವ್ಯಕ್ತಿ ಅನುಭೋಗದ ಮೇಲೆ ನಿಂತಿದೆ. ಅನುಭೋಗ ಹೆಚ್ಚಿದಂತೆ ತೆರಿಗೆ ಸಂದಾಯ ಹೆಚ್ಚುತ್ತದೆ. ಅನುಭೋಗಕ್ಕೆ ಬಡವರು ತಮ್ಮ ಸ್ವಂತ ದುಡಿಮೆಯನ್ನು ಅವಲಂಬಿಸಿದರೆ ಅನುಕೂಲಸ್ಥರು ತಮ್ಮ ಕಟ್ಟಡಗಳ ಮೇಲಿನ ಬಾಡಿಗೆಯಿಂದ ಅನುಭೋಗಿಸಬಹುದು ಅಥವಾ ತಾವು ಬ್ಯಾಂಕ್‍ಲ್ಲಿ ಇಟ್ಟಿರುವ ಡಿಪಾಸಿಟ್ ಮೇಲಿನ ಬಡ್ಡಿಯಿಂದ ಅನುಭೋಗಿಸಬಹುದು ಅಥವಾ ಸಂಘಟಿತ ವಲಯದಲ್ಲಿ ದುಡಿಯುವವರು ಹಣದುಬ್ಬರಕ್ಕೆ ಅನುಸಾರ ಏರಿಕೆಯಿಂದ ಅನುಭೋಗಿಸಬಹುದು. ಆದರೆ ಬಡವರ ಆದಾಯ ಅವರ ದುಡಿಮೆ ಮೇಲೆ ನಿಂತಿದೆ ಮತ್ತು ಅದು ಕನಿಷ್ಠ ಪ್ರಮಾಣದಲ್ಲಿರುವುದರಿಂದ ಜಿಎಸ್‍ಟಿಯಿಂದ ಆಗುವ ಹೆಚ್ಚುವರಿ ತೆರಿಗೆಯ ಬಹುಪಾಲನ್ನು ಅವರ ದುಡಿಮೆಯಿಂದ ಬರುವ ಕನಿಷ್ಠ ಸಂಬಳದಿಂದಲೇ ಭರಿಸಬೇಕಾಗುತ್ತದೆ

ವಿಮರ್ಶೆ :

1. ಒಂದು ತೆರಿಗೆ ಮತ್ತು ಒಂದು ದರ : ಒಂದೇ ತೆರಿಗೆ ಜಾರಿಗೆ ಬಂದ ಕೂಡಲೇ ಸರಕು ಅಥವಾ ಸೇವೆಯ ದರ ದೇಶವ್ಯಾಪಿ ಒಂದೇ ಇರುವುದಿಲ್ಲ. ಏಕೆಂದರೆ ಸರಕಿನ ದರ ಕೇವಲ ತೆರಿಗೆ ಮೇಲೆ ನಿಂತಿಲ್ಲ. ಸರಕಿನ ದರ ನಿರ್ಣಯಿಸುವಲ್ಲಿ ತೆರಿಗೆಗಿಂತ ಹೆಚ್ಚು ಕಚ್ಚಾ ಸಾಮಾಗ್ರಿಗಳ ಬೆಲೆ, ದುಡಿಯುವವರ ಸಂಬಳ, ಭೂಮಿ ಬೆಲೆ, ಮಶಿನರಿ ಬೆಲೆ, ಬ್ಯಾಂಕ್ ಸಾಲದ ಮೇಲಿನ ಬಡ್ಡಿ, ಸಾಗಣಿಕೆ ವೆಚ್ಚ, ಜಾಹೀರಾತು ವೆಚ್ಚ ಇವೆಲ್ಲ ಸರಕಿನ ಬೆಲೆಯನ್ನು ತೀರ್ಮಾನಿಸುತ್ತವೆ. ಆದುದರಿಂದ ಒಂದು ಸರಕಿನ ಬೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಇರುತ್ತದೆ ಜೊತೆಗೆ ಪೇಟೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಇರುತ್ತದೆ

2. ತೆರಿಗೆ ಸಂಗ್ರಹ ಹೆಚ್ಚಳ : ಇದು ತೆರಿಗೆ ಆಡಳಿತ, ತೆರಿಗೆ ಬಗೆಗಿನ ಮಾಹಿತಿ ಮತ್ತು ಭ್ರಷ್ಟಾಚಾರಗಳ ಮೇಲೆ ನಿಂತಿದೆ. ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಅಸಂಘಟಿತ ವಲಯ ಇದೆ. ಇಲ್ಲಿನ ಆರ್ಥಿಕ ಚಟುವಟಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ತೆರಿಗೆ ಆಡಳಿತದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಇದೆ. ಜಿಎಸ್‍ಟಿ ಬಂದ ಕೂಡಲೇ ಭ್ರಷ್ಟಾಚಾರ ಕಡಿಮೆ ಆಗುವುದಿಲ್ಲ.

3. ಜಿಎಸ್‍ಟಿಗೂ ಆರ್ಥಿಕ ಅಭಿವೃದ್ಧಿಗೂ ಸಂಬಂಧ ಇಲ್ಲ: ಆರ್ಥಿಕ ಪ್ರಗತಿ ಉಳಿತಾಯ, ವಿನಿಯೋಜನೆಗಳ ಜೊತೆಗೆ ಉತ್ತಮ ರಾಜಕೀಯ ಪರಿಸರ, ಸಾಮಾಜಿಕ ಪರಿಸರಗಳ ಮೇಲೆ ನಿಂತಿದೆ.

4. ದೇಶವ್ಯಾಪಿ ಒಂದು ಮಾರುಕಟ್ಟೆ: ಮಾರುಕಟ್ಟೆ ರೂಪಿಸಲು ಫಿಸಿಕಲ್ ಕನೆಕ್ಟಿವಿಟಿ, ಸೋಶಿಯಲ್ ಮತ್ತು ಪೊಲಿಟಿಕಲ್ ಕನೆಕ್ಟವಿಟಿ ಕೂಡ ಮುಖ್ಯ. ಒಂದು ಮಾರುಕಟ್ಟೆ ರೂಪಿಸಲು ತೆರಿಗೆ ಮಾತ್ರ ಕೆಲಸ ಮಾಡುವುದಲ್ಲ. ದೇಶವ್ಯಾಪಿ ಸಾರಿಗೆ ಸಂಪರ್ಕಗಳು ಬೇಕು. ಇಂದು ಕೂಡ ಸರ್ವ ಋತು ರಸ್ತೆಗಳಲ್ಲಿದ, ವಿದ್ಯುತ್ ಸಂಪರ್ಕ ಇಲ್ಲದ, ನೀರಾವರಿ ಇಲ್ಲದ, ಬ್ಯಾಂಕ್ ಬ್ರಾಂಚ್‍ಗಳಿಲ್ಲದ, ಎಟಿಮ್‍ಗಳಿಲ್ಲದ ಹಳ್ಳಿಗಳು ದೊಡ್ಡ ಪ್ರಮಾಣದಲ್ಲಿ ಇವೆ. ಜಿಎಸ್‍ಟಿ ಬಂದ ಕೂಡಲೇ ಇವೆಲ್ಲವೂ ಬರುವುದಿಲ್ಲ. ಇವೆಲ್ಲ ಪೇಟೆಪಟ್ಟಣಗಳ ಪ್ರಮಾಣದಲ್ಲಿ ಬೆಳೆಯದಿದ್ದರೆ ಗ್ರಾಮೀಣ ಜನರು ಮಾರುಕಟ್ಟೆಯಲ್ಲಿ ವ್ಯವಹರಿಸಲಾಗುವುದಿಲ್ಲ. ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆ ತಂದು ಮಾರಲು ಸಾಧ್ಯವಾಗುವುದಿಲ್ಲ. ತಮ್ಮ ಉತ್ಪಾದನೆಗೆ ಬೇಕಾಗಿರುವ ರಸಗೊಬ್ಬರ, ಬಿತ್ತನೆ ಬೀಜ, ಮೆಶಿನರಿಗಳನ್ನು ಸಾಗಿಸಲು ಆಗುವುದಿಲ್ಲ. ಫಿಸಿಕಲ್ ಕನೆಕ್ಟಿವಿಟಿ ಜೊತೆಗೆ ಸೋಶಿಯಲ್ ಮತ್ತು ಪೊಲಿಟಿಲ್ ಕನೆಕ್ಟವಿಟಿ ಕೂಡ ಬೇಕು. ಮಾರುಕಟ್ಟೆಯಲ್ಲಿ ದುಡ್ಡು ಬಿಟ್ಟರೆ ಬೇರೇನೂ ಅಂದರೆ ಜಾತಿ, ಧರ್ಮ, ಲಿಂಗಗಳು ಕೆಲಸ ಮಾಡುವುದಿಲ್ಲ. ಆದರೆ ವ್ಯಕ್ತಿಯೊಬ್ಬರ ಖರೀದಿಸುವ ಶಕ್ತಿಗೂ ಜಾತಿ, ಧರ್ಮ, ಲಿಂಗಗಳಿಗೂ ಸಂಬಂಧ ಇದೆ.

ಅಂದರೆ ಪರೋಕ್ಷವಾಗಿ ಜಾತಿ, ಧರ್ಮ, ಲಿಂಗಗಳು ಮಾರುಕಟ್ಟೆಯಲ್ಲಿ ವ್ಯಕ್ತಿ ವ್ಯವಹರಿಸುವ ಸಾಮರ್ಥ್ಯವನ್ನು ಪ್ರಭಾವಿಸುತ್ತಿದೆ. ಇವನ್ನು ಮೊದಲು ಸರಿಪಡಿಸಬೇಕಾಗಿದೆ. ಇವುಗಳ ಜೊತೆಗೆ ಸಮೀಪ ದೃಷ್ಟಿಯ ರಾಜಕೀಯ ಲಾಭಕ್ಕಾಗಿ ಮಾಡುವ ನಿಷೇಧಗಳಿಂದ ಮಾರುಕಟ್ಟೆಯ ಮೇಲೆ ಪರಿಣಾಮಗಳಾಗುತ್ತವೆ.   ಅದನ್ನು ತಿನ್ನಬಾರದು ಇದನ್ನು ತಿನ್ನಬಾರದು, ಇದನ್ನು ಉಡಬಾರದು ಇತ್ಯಾದಿಗಳು ಜನರ ಮಾರುಕಟ್ಟೆ ಬದುಕನ್ನು ಗಾಢವಾಗಿ ಪ್ರಭಾವಿಸುತ್ತವೆ. ಆದುದರಿಂದ ಒಂದು ತೆರಿಗೆ ತಂದ ಕೂಡಲೇ ಒಂದು ಮಾರುಕಟ್ಟೆ ನಿರ್ಮಾಣವಾಗುವುದಿಲ್ಲ. ಒಂದು ತೆರಿಗೆ ಜೊತೆಗೆ ಫಿಸಿಕಲ್, ಸೋಶಿಯಲ್ ಮತ್ತು ಪೊಲಿಟಿಕಲ್ ಕನೆಕ್ಟಿವಿಟಿ ಕೂಡ ಮುಖ್ಯ. ಆದರೆ ಇವುಗಳನ್ನು ಮಾಡದೇ ಜಿಎಸ್‍ಟಿ ಮೂಲಕ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಮುಂದಾಗುವುದು ಜನಸಾಮಾನ್ಯರ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ.

5. ಹಲವು ತೆರಿಗೆಗಳ ಬದಲು ಒಂದು ತೆರಿಗೆ ಬಂದರೆ ಜನರ ಮೇಲಿನ ತೆರಿಗೆ ಹೊರೆ ಕಡಿಮೆಯಾಗುವುದಿಲ್ಲ.  ಏಕೆಂದರೆ ದೇಶದ ಒಟ್ಟು ಆದಾಯದಲ್ಲಿ ತೆರಿಗೆಯಿಂದ ಬರುವ ಆದಾಯ ಶೇ.16.5 ಎಂದು ಈಗಾಗಲೇ ನೋಡಿದ್ದೇವೆ. ಇದರಲ್ಲಿ ಶೇ.5.5 ನೇರ ತೆರಿಗೆಯಿಂದ ಬಂದರೆ ಶೇ.11ರಷ್ಟು ಪರೋಕ್ಷ ತೆರಿಗೆಯಿಂದ ಬರುತ್ತಿದೆ. ಜಿಎಸ್‍ಟಿ ಜಾರಿಗೆ ತರುವ ಉದ್ದೇಶ ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದು. ನೇರ ತೆರಿಗೆ ಏರಿಸಲು ಅನುಕೂಲಸ್ಥರು ಬಿಡುವುದಿಲ್ಲ. ಅವರ ಸಂಖ್ಯೆ ಕಡಿಮೆಯಾದರೂ ಅವರು ಆಯಾಕಟ್ಟಿನ ಜಾಗದಲ್ಲಿ ಇದ್ದಾರೆ. ಟಿವಿಯಲ್ಲಿ, ಪೇಪರ್‍ಗಳಲ್ಲಿ, ಜನಪ್ರತಿನಿಧಿಗಳ ನೇರ ಸಂಪರ್ಕದಲ್ಲಿ ಅವರಿದ್ದಾರೆ. ಅವರ ಸಮಸ್ಯೆಯನ್ನು ಎಲ್ಲರ ಸಮಸ್ಯೆ ಮಾಡುವ ಶಕ್ತಿ ಅವರಿದೆ. ಆದುದರಿಂದ ನೇರ ತೆರಿಗೆ ಏರಿಸುವ ಪ್ರಶ್ನೆ ಬಿಡಿ ಇಳಿಸಬೇಕೆನ್ನುವ ಒತ್ತಾಯ ಇದೆ.

ಇನ್ನು ಉಳಿದಿರುವುದು ಪರೋಕ್ಷ ತೆರಿಗೆ ಸಂಗ್ರಹ. ಇಲ್ಲಿ ಬಹುತೇಕರು ತಳಸ್ತರಕ್ಕೆ ಸೇರಿದ ಜನರು. ಅವರಿಗೆ ಜಾತಿ, ಧರ್ಮದ ಅನಸ್ತೇಶಿಯಾ ನೀಡಿ ಆಪರೇಶನ್ ಮಾಡಿದರೆ ಏನೇನೂ ಗೊತ್ತಾಗುವುದಿಲ್ಲ. ಆದುದರಿಂದ ಹಲವು ತೆರಿಗೆ ಬದಲು ಒಂದೇ ತೆರಿಗೆಯಲ್ಲಿ ಹಲವು ತೆರಿಗೆಗಳನ್ನು ಸೇರಿಸಿ ಸಂಗ್ರಹಿಸಲಾಗುವುದು.

6. ರಾಜ್ಯ ಸರಕಾರಗಳ ಸ್ವಾಯತ್ತತೆಯ ಪ್ರಶ್ನೆ: ರಾಜ್ಯ ಸರಕಾರ ಸ್ಥಳೀಯ ಸರಕಾರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಇದಕ್ಕೆ ಹಣಕಾಸು, ಆಳಿತ ಹಾಗು ಸಾಂಸ್ಥಿಕ ಸ್ವಾತಂತ್ರ್ಯ ಬೇಕು. ಜನರ ಬೇಕು ಬೇಡಗಳಿಗೆ ಅನುಸಾರ ಸರಕಾರ ನಡೆಸಬೇಕಾದರೆ ಇವೆಲ್ಲ ಬೇಕು. ಆದರೆ ಜಿಎಸ್‍ಟಿ ಜಾರಿಗೆ ಬಂದ ನಂತರ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ತೆರಿಗೆ ವಿಧಿಸುವ ಸಾಧ್ಯತೆ ಇಲ್ಲ. ಹಣಕಾಸು ಹೊಂದಾಣಿಗೆ ಮಾಡಲು ಸಾಧ್ಯವಿಲ್ಲದ ಸರಕಾರ ತನ್ನ ಬಡ ಜನರಿಗೆ ಕಡಿಮೆ ಬೆಲೆ ಅಕ್ಕಿ ಕೊಡುವುದು ಅಥವಾ ಉಚಿತ ಶಿಕ್ಷಣ ಆರೋಗ್ಯಗಳನ್ನು ಕೊಡುವುದು ಕಷ್ಟವಾಗಬಹುದು.

Leave a Reply

Your email address will not be published.