ಸಾಮಾನ್ಯ ಜನರಿಂದ ದೂರ ಸರಿಯುತ್ತಿರುವ ಕೇಂದ್ರ ಸರ್ಕಾರದ ಆರ್ಥಿಕ ನೀತಿ


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ಕುರಿತು ದೇಶಾದ್ಯಂತ ಚರ್ಚೆಯ ಅಲೆಗಳೆದ್ದಿವೆ.   ದೇಶದ ಆರ್ಥಿಕ ಸುಧಾರಣೆಗಳು ಸಾಮಾನ್ಯ ಜನರಿಗಾಗಿ ಸರಳ, ಪರಿಣಾಮಕಾರಿ ರೀತಿಯಲ್ಲಿ ಇಲ್ಲ,  ಅತ್ಯಂತ ಆಕ್ರಮಣಕಾರಿ ಸುಧಾರಣೆಗಳನ್ನು – ಬದಲಾವಣೆಗಳನ್ನು ತಡೆದುಕೊಳ್ಳುವಷ್ಟು ಶಕ್ತಿ ದೇಶಕ್ಕೆ ಇಲ್ಲ ಎಂಬ ಸರಳ ಅಂಶವನ್ನು ಮರೆತಿರುವುದು ಎಲ್ಲ ರೀತಿಯ ಟೀಕೆಗಳು, ಚರ್ಚೆಗಳಿಗೆ ಕಾರಣವಾಗಿದೆ.

ಮಾಜಿ ಹಣಕಾಸು ಸಚಿವ, ರಿಜರ್ವ ಬ್ಯಾಂಕ್ ಮಾಜಿ ಗವರ್ನರ್ ಸಹಿತ ಹಲವು ತಜ್ಞರು ತಮ್ಮ ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಕೇಂದ್ರದ ಹಣಕಾಸು ನೀತಿಯ ಕಡೆಗೆ ಬೊಟ್ಟು ಮಾಡಿದ್ದಾರೆ. ಏರುತ್ತಿರುವ ಹಣದುಬ್ಬರ, ಪೆಟ್ರೋಲ್, ಡಿಸೇಲ್ ಬೆಲೆ ನಿಗದಿಯಲ್ಲಿ  ಅನೀತಿ, ತೆರಿಗೆ ಸುಧಾರಣೆ ಹೆಸರಲ್ಲಿ  ಸಾಮಾನ್ಯ ಗ್ರಾಹಕರ ಸುಲಿಗೆ,  ಜಿಎಸ್ ಟಿ ತೆರಿಗೆಯಲ್ಲಿ ಬದಲಾವಣೆ ಮಾಡಿ ಮೃದು ಧೋರಣೆ ಹೀಗೆ ಕೇಂದ್ರ ಸರ್ಕಾರ ಹಲವು ವಿಷಯಗಳಲ್ಲಿ ಕೈಗೊಂಡ ನಿರ್ಧಾರಗಳು ಕೇಂದ್ರ ಸರ್ಕಾರದ ಬಗ್ಗೆ ಜನಸಾಮಾನ್ಯರು ಹೊಂದಿದ್ದ ವಿಶ್ವಾಸವನ್ನು ಕಸಿದುಕೊಳ್ಳತೊಡಗಿವೆ.

  ತನ್ನ ನಿಲುವುಗಳಲ್ಲಿ ಖಚಿತತೆ ಇಲ್ಲದ ಸರ್ಕಾರ ಮತ್ತುಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ದುರ್ಬಲಗೊಳಿಸುತ್ತಿದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ. ಸುಧಾರಣೆ ಹೆಸರಲ್ಲಿ ಕೈಗೊಂಡ ಕ್ರಮಗಳಿಂದ    ವಿಶ್ವಾಸಾರ್ಹತೆ ಕುಸಿಯುತ್ತಿದೆ.  ಕೇಂದ್ರ ಸರ್ಕಾರ ಮತ್ತೆ ಮತ್ತೆ ತನ್ನ ಆರ್ಥಿಕ ನೀತಿಗಳಲ್ಲಿ ಎಡವುತ್ತಿದೆಯೇ ಅನ್ನೋ  ಸಂಶಯ ಎಲ್ಲೆಡೆಯೂ ವ್ಯಕ್ತವಾಗುತ್ತಿದೆ. ಸಾಮಾನ್ಯ ಜನರನ್ನು ಕೇಂದ್ರ ಸರ್ಕಾರ ದುರಂತದೆಡೆಗೆ ತಳ್ಳುತ್ತಿದೆಯಾ ಎಂದು ಆರ್ಥಿಕ ತಜ್ಞರೇ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಅತ್ಯಂತ ಆಕ್ರಮಣಕಾರಿ ಸುಧಾರಣೆಗಳನ್ನು – ಬದಲಾವಣೆಗಳನ್ನು ತಡೆದುಕೊಳ್ಳುವ ಶಕ್ತಿ ನಮ್ಮ ದೇಶಕ್ಕೆ ಇಲ್ಲ ಎಂಬ ಸರಳ ಅಂಶ ಮರೆತು ದಾಪುಗಾಲು ಇಡುತ್ತಿರುವ ಸರ್ಕಾರದ ನೀತಿ ಈಗ ದೇಶಕ್ಕೆ ದೊಡ್ಡ ತಲೆ ನೋವಾಗಿ ಕಾಡುತ್ತಿದೆ.   ದೇಶದ ಶೇ. 40 ರಷ್ಟು ಅನಕ್ಷರಸ್ಥರು,  ಹಣಕಾಸಿನ ವಿಷಯದಲ್ಲಿ ಯಾವ ಸ್ವಾತಂತ್ರ್ಯವನ್ನೂ ಹೊಂದಿರದ ಬಹುತೇಕ ಮಹಿಳೆಯರು,  ಬ್ಯಾಂಕುಗಳೆಂದರೆ ಸಾಲ ಕೊಡುವ ಸಂಸ್ಥೆಗಳು ಎಂದೇ ಭಾವಿಸಿರುವ ಗ್ರಾಮೀಣ ಜನರು, ಆದಾಯ ತೆರಿಗೆ, ಕಪ್ಪು ಹಣ, ಅಂತರ್ಜಾಲ ಹಣಕಾಸು ವ್ಯವಹಾರ ಎಂದರೆ ಏನು ಎಂಬುದನ್ನೇ  ಅರಿಯದ ಮುಗ್ಧರು,  ತಮ್ಮ ಮೊಬೈಲ್ ಕರೆನ್ಸಿ ರಿಚಾರ್ಜ್ ಮಾಡಲೂ ಬೇರೆಯವರ ಸಹಾಯ ಪಡೆಯುವ ಜನರು,  ಬ್ಯಾಂಕ್ ಚಲನ್ ಗಳನ್ನು ಭರ್ತಿ ಮಾಡಲೂ ತಲೆ ಕೆಡಿಸಿಕೊಳ್ಳುವ ಜನರು ಇರುವ ದೇಶದಲ್ಲಿ  ಇದು ದುಬಾರಿ ಆರ್ಥಿಕ ಸುಧಾರಣೆಯಂತೆ ಕಾಣುತ್ತಿದೆ.   ಸರಳ ಹಾಗೂ ಪರಿಣಾಮಕಾರಿ ಸುಧಾರಣೆಗಳನ್ನು ಯೋಚಿಸದೆ ಅತ್ಯಂತ ವಿದ್ಯಾವಂತ ಮತ್ತು ಮುಂದುವರಿದ ದೇಶಗಳ ಮಾದರಿಯನ್ನು ಅನುಸರಿಸಿದರೆ ಅದರ ದುಷ್ಪರಿಣಾಮ ತೀರಾ ಗಂಭೀರವಾಗಿರುತ್ತದೆ.
ಜಿಎಸ್ ಟಿ ಎಂಬ ಉತ್ತಮ ತೆರಿಗೆ ಸುಧಾರಣೆಯನ್ನು ಅತಿಹೆಚ್ಚು ಹಣ ಗಳಿಸುವ ದುರಾಸೆ ಮತ್ತು ಆತುರಕ್ಕೆ ಬಿದ್ದು ದುಬಾರಿ ತೆರಿಗೆ ವಿಧಿಸಸಲಾಯಿತು.  ಈಗ ಎರಡೇ ತಿಂಗಳಲ್ಲಿ ಅದನ್ನು ಮತ್ತೆ ಮಾರ್ಪಾಡು ಮಾಡುವ ಅವಸರ  ಪ್ರದರ್ಶಿಸಲಾಗಿದೆ.  ಸರ್ಕಾರದ ನಿರ್ಧಾರಗಳು ದೂರದೃಷ್ಟಿಯ ಸೂಕ್ಷ್ಮತೆ ಹೊಂದಿರಬೇಕು ಮತ್ತು ಜಾರಿ ನಿರ್ಧಾರ  ಕ್ರಮ ಕೈಗೊಳ್ಳುವ ಮೊದಲು ಸಮಗ್ರ ದೃಷ್ಟಿಕೋನದಿಂದ ಯೋಚಿಸಬೇಕು ಎಂಬ ಸರಳ ಸತ್ಯವೂ ಆಡಳಿತ ನಡೆಸುವವರಿಗೆ ಗೊತ್ತಾಗುತ್ತಿಲ್ಲ.
ತನ್ನ ಹಿರೋ ಇಮೇಜ್ ವೃದ್ದಿಸಿಕೊಳ್ಳಲು ಈ ನೆಲದ ಸಂಸ್ಕೃತಿಗೆ ವಿರುದ್ಧವಾದ ತೀರ್ಮಾನಗಳನ್ನು ತೆಗೆದುಕೊಂಡು ಮೇಲ್ನೋಟದ ಆಡಂಬರಕ್ಕೆ ಹೆಚ್ಚು ಒತ್ತುಕೊಟ್ಟು ಕೆಳ ಮಧ್ಯಮವರ್ಗವನ್ನು ಹೀನಾಯ ಸ್ಥಿತಿಗೆ ತಂದಿರುವ ಕೇಂದ್ರ ಸರ್ಕಾರ ಇಡೀ ಆರ್ಥಿಕತೆಯ ಅಮೂಲಾಗ್ರ ಬದಲಾವಣೆಗೆ ಪ್ರಯತ್ನಿಸಬೇಕೇ ಹೊರತು ಮತ್ತೆ ತೇಪೆ ಹಾಕುವ ಅಪ್ರಬುದ್ದ ತೀರ್ಮಾನ ಕೈಗೊಳ್ಳಬಾರದು ಎಂದು ಜನಸಾಮಾನ್ಯರೆಲ್ಲ ಮಾತನಾಡಲಾರಂಭಿಸಿದ್ದಾರೆ.
ಆರ್ಥಿಕ ಹರಿವು ತಡೆದು, ಈಗ ಯಾವ ಸುಧಾರಣೆ ಮಾಡಿದರೂ, ಯಾವ ತೆರಿಗೆ ಕಡಿಮೆ ಮಾಡಿದರೂ, ಯಾವ ಪ್ಯಾಕೇಜ್ ಘೋಷಿಸಿದರೂ, ಎಷ್ಡೇ ಬಡ್ಡಿ ಕಡಿಮೆ ಮಾಡಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅದೇ ಸತ್ಯ.
ಜನರ ನಿಜವಾದ ಸಾಮರ್ಥ್ಯ ಗುರುತಿಸಿ ಹಣದ ಹರಿವು ಹೆಚ್ಚಿಸಿ ಜನರನ್ನು ಕಳ್ಳರಂತೆ ನೋಡದೆ ಒಂದಷ್ಟು ವಿಶ್ವಾಸದಿಂದ ನಡೆದುಕೊಂಡರೆ ಮಾತ್ರ ಏನಾದರೂ ಚೇತರಿಕೆ ಕಂಡು ಬರಬಹುದು. ಬ್ಯಾಂಕಿನಲ್ಲಿ ತಮ್ಮ ಹಣದ ಮೇಲಿನ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಿದರೆ ಮತ್ತು ಮೋಸಗಾರರ ಮೇಲೆ ನಿರ್ದಿಷ್ಟ ಕ್ರಮ ಕೈಗೊಂಡರೆ ವಿಶ್ವಾಸ ಗಳಿಸಬಹುದು. ಅದು ಬಿಟ್ಟು ಜನಸಾಮಾನ್ಯರನ್ನೆಲ್ಲ ಕಳ್ಳರ ಸಾಲಿನಲ್ಲಿ ನಿಲ್ಲಿಸಿ ಅನುಮಾನದಿಂದ ನೋಡಿದರೆ ಆರ್ಥಿಕ ಸುಧಾರಣೆ ಎನ್ನುವುದು ಹಳ್ಳ ಹಿಡಿಯುವುದು ಖಚಿತ.

  ನಾವು ಸರ್ಕಾರ ಮತ್ತು ಬ್ಯಾಂಕುಗಳನ್ನು ವಿಶ್ವಾಸದಿಂದ ನೋಡುತ್ತೇವೆ.ಅವರು ನಮ್ಮನ್ನು ಕಳ್ಳರೆಂದು ಗತಿ ಇಲ್ಲದವರೆಂಬಂತೆ ಭಾವಿಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುವಂತಾದರೆ ಕೇಂದ್ರ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಜನ ದೂರ ತಳ್ಳುತ್ತಾರೆ.
ಹಟ ಮಾಡಿ ಕೇವಲ ಭಾಷಣಗಳಿಂದ ಜನರನ್ನು ಮರುಳು ಮಾಡುತ್ತಾ ಸಾಗಿದರೆ ದೇಶ ಅಧೋಗತಿಗೆ ಇಳಿಯುತ್ತದೆ. ಭ್ರಷ್ಟಾಚಾರ ಮುಕ್ತ ಪ್ರಾಮಾಣಿಕತೆ ಒಂದು ಅರ್ಹತೆಯೇ ಹೊರತು ಅದು ದಕ್ಷತೆಯ ಮಾನದಂಡವಲ್ಲ‌. ಅದಕ್ಕಾಗಿ ದುರಹಂಕಾರ ಪಡಬೇಕಾಗಿಲ್ಲ. ಮಾನವೀಯ ಕಾಳಜಿ ಮತ್ತು ವಿನಯವಂತ ನಡವಳಿಕೆ ಅತಿಮುಖ್ಯವಾದ ಅಸ್ತ್ರ. ಎಲ್ಲಾ ಜನರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.
ಈಗಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತಿಯಾಗಿ ಇಷ್ಡಪಡುವ ಗೆಳೆಯರಿಗೆ ಒಂದು ಮಾತು ಹೇಳಬೇಕಾಗುತ್ತದ.ೆ ಒಬ್ಬ ವ್ಯಕ್ತಿಗಿಂತ ದೇಶ ಮುಖ್ಯ ಮತ್ತು ದೇಶಕ್ಕಿಂತ ನಮ್ಮ ಜನ ಮುಖ್ಯ ಎಂಬುದು ಈ ದೇಶ ವಾಸಿಗಳಾದ ನಿಮಗೆಲ್ಲ ನೆನಪಿರಲಿ.
ಅಂಕಿಅಂಶಗಳ ಮುಖಾಂತರ ವಿತಂಡವಾದಗಳ ಮೂಲಕ ಎಲ್ಲವನ್ನೂ ಸಮರ್ಥಿಸಿಕೊಳ್ಳಬಹುದು. ಆದರೆ ನಮ್ಮ ಸಾಮಾನ್ಯ ಜನರ ವಾಸ್ತವ ತಿಳಿದಾಗ ಮಾತ್ರ ಸತ್ಯ ತಿಳಿದಂತೆ. ಯಾವ ಆರ್ಥಿಕ ತಜ್ಞರ ಅಭಿಪ್ರಾಯಗಳಿಗಿಂತಲೂ ನಮ್ಮ ಸುತ್ತಮುತ್ತಲಿನ ಜನರ ಪರಿಸ್ಥಿತಿ ನಮಗೇನೆ ಚೆನ್ನಾಗಿ ಗೊತ್ತಿರುತ್ತದೆ.
ಆದಷ್ಟೂ ಬೇಗ ದೇಶದ ಆರ್ಥಿಕ ಸ್ಥಿತಿ ಸಹಜ ಸ್ಥಿತಿಗೆ ಮರಳಲಿ ಮತ್ತು ಜನರ ಮುಖದಲ್ಲಿ ಒಂದಷ್ಟು ಸಂತಸ ಅರಳಲಿ ಎಂದು ಎಂಬುದು ಎಲ್ಲರ ಆಶಯ.

 photo courtesy: google

Leave a Reply

Your email address will not be published.