ದೇಹಕ್ಕೆ ಕೊಲೆಸ್ಟ್ರಾಲ್ ಎಷ್ಟು ಅಗತ್ಯ, ಇದು ಅಪಾಯಕಾರಿಯೇ?


(ತಮ್ಮ ವೈದ್ಯಕೀಯ ಅನುಭವ ಮತ್ತು  ಬರೆಹಗಳಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ.ಬಿ.ಎಂ.ಹೆಗ್ಡೆ ಜನಸಾಮಾನ್ಯರಿಗೆ  ವೈದ್ಯ ಲೋಕದ ರಹಸ್ಯಗಳನ್ನು ಮುಟ್ಟಿಸುವಲ್ಲೂ  ಸಿದ್ಧಹಸ್ತರು. ನಮ್ಮ ದೇಹದ ಕೊಬ್ಬು ಪದಾರ್ಥದ ಬಗ್ಗೆ ನಾವು ಹೊಂದಿರುವ ತಿಳಿವಳಿಕೆಗಳಿಗಿಂತ ಭಿನ್ನವಾದ ಅಂಶಗಳನ್ನು ಡಾ. ಬಿ.ಎಂ.ಹೆಗ್ಡೆ ಈ ಬರೆಹದಲ್ಲಿ ದಾಖಲಿಸಿದ್ದಾರೆ. ಡಾ.ಹೆಗ್ಡೆ ಅವರ ಅನುಭವದ ನುಡಿಗಡಣ ನಮ್ಮ ಓದುಗರಿಗಾಗಿ ಇಗೋ ಇಲ್ಲಿದೆ.)

  ಕೊಲೆಸ್ಟ್ರಾಲ್ ಅಂದರೆ ಫ್ಯಾಟ್. ಇದು ದೇಹದ ಮೂಲಭೂತ ಅಗತ್ಯ. ನಾವು ತಿನ್ನುವ ಆಹಾರದಲ್ಲಿ ಶೇಕಡ 10 ರಷ್ಟು ಆಹಾರ ಕೊಲೆಸ್ಟ್ರಾಲ್ ಆಗುತ್ತದೆ. ಉಳಿದಂತೆ ನಮ್ಮ ದೇಹ ತನಗೆ ಬೇಕಾದಷ್ಟು ಕೊಲೆಸ್ಟ್ರಾಲ್ ನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ನಮ್ಮ ದೇಹಕ್ಕೆ ಆಹಾರ ನೀರಿಗಿಂತ ಕೊಲೆಸ್ಟ್ರಾಲ್  ಹೆಚ್ಚು ಅಗತ್ಯ. ಇದು ಇಲ್ಲವಾದರೆ ಮನುಷ್ಯ ಸತ್ತೇ ಹೋಗುತ್ತಾನೆ.

   ದೇಹದಲ್ಲಿ ೧೨೦ ಟ್ರಿಲಿಯನ್ ಕಣಗಳಿವೆ. ಕೆಲವು ಮಿಲಿಯ ಕಣಗಳು ಆಯುಷ್ಯ ಮುಗಿದು ಪ್ರತಿದಿನ ಸಾಯುತ್ತವೆ. ಪ್ರತಿ ಕಣ ಹುಟ್ಟಬೇಕಾದರೆ, ಆ ಕಣದ ಆರೋಗ್ಯ ರಕ್ಷಣೆ ಆಗಬೇಕಾದರೆ ಕೊಲೆಸ್ಟ್ರಾಲ್ ಬೇಕು. ಲಿವರ್ ನಲ್ಲಿ ಕೊಲೆಸ್ಟ್ರಾಲ್ ಸೃಷ್ಟಿಯಾಗುತ್ತದೆ. ಒತ್ತಡ ಹೆಚ್ಚಿದಾಗ ಅದರ ನಿವಾರಣೆಗೆ ಕೊಲೆಸ್ಟ್ರಾಲ್ ಬೇಕು. ದೇಹದ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡಬೇಕೆಂದರೂ ಕೊಲೆಸ್ಟ್ರಾಲ್ ಬೇಕೇ ಬೇಕು.
ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್ ಎಂಬುದಿಲ್ಲ. ಮನುಷ್ಯ ಹುಟ್ಟಿಸಿದ ಜಾತಿಯಂತೆ ಇದು ಕೂಡ ಕೃತಕ. ಔಷಧ ಕಂಪನಿಗಳು ಹಣ ಮಾಡಲು ಹುಟ್ಟಿಸಿದ ನಂಬಿಕೆ ಇದು. ರಕ್ತದಲ್ಲಿರುವ ಕೊಲೆಸ್ಟ್ರಾಲ್ ನಾವು ತಿಂದ ಆಹಾರದಿಂದ ಬಂದಿರುವುದಿಲ್ಲ. ಶೇ ೧೦ ರಷ್ಟು ಮಾತ್ರ ತಿಂದ ಆಹಾರದಿಂದ ಬರುತ್ತದೆ. ೩೦೦ ಮಿ.ಗ್ರಾಂ ಕೊಲೆಸ್ಟ್ರಾಲ್ ಇದ್ದರೆ ಅದನ್ನು ಕಡಿಮೆ ಮಾಡಬೇಕೆಂದು ನೀವು ಹುಲ್ಲು ತಿಂದರೂ ೨೭೫ ಕ್ಕಿಂತ ಕಡಿಮೆಯಾಗುವುದಿಲ್ಲ. ಕೊಲೆಸ್ಟ್ರಾಲ್ ಶತ್ರುವಲ್ಲ ಮಿತ್ರ. ಇದು ಕಾಯಿಲೆಯೂ ಅಲ್ಲ. ನಾನಿದನ್ನು ೪೫ ವರುಷಗಳಿಂದ ಹೇಳುತ್ತಲೇ ಬಂದಿದ್ದೇನೆ. ಈಗ ಆಮೇರಿಕಾದವರು ಇದನ್ನು ಒಪ್ಪಿಕೊಂಡಿದ್ದಾರೆ.

ಸಿಟ್ಟು, ಆಕ್ರೋಶ, ದ್ವೇಷ ಹೆಚ್ಚಿದ್ದಾಗ ಸ್ಟಿರಾಯ್ಡ್ ಲೆವೆಲ್ ಹೆಚ್ಚಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸರೀ ತಿನ್ನಬೇಕು. ಧರ್ಮಕ್ಕೆ ಸಿಕ್ಕಿದರೆ ಮತ್ತೂ ತಿನ್ನಬೇಕು ಎಂಬ ವಾಂಛೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ದ್ವೇಷಿಸದೇ ಇರುವುದನ್ನು ರೂಢಿ ಮಾಡಿಕೊಳ್ಳಬೇಕು. ವ್ಯಾಯಾಮ ಮಾಡಬೇಕು. ಪ್ರತಿ ದಿನ ವಾಕ್ ಮಾಡಬೇಕು.

ಕೊಲೆಸ್ಟ್ರಾಲ್ ಗೆ ಮದ್ದು ತೆಗೆದುಕೊಂಡರೆ ಲಿವರ್ ನಲ್ಲಿ ಆಗುವ ಯಾವ ಕೆಲಸವೂ ನಡೆಯುವುದಿಲ್ಲ. ಇಡೀ ದೇಹದ ವ್ಯವಸ್ಥೆ ಹಾಳಾಗುತ್ತದೆ. ಇದಕ್ಕೆ ಔಷಧ ಪಡೆಯುವುದು ಮೂರ್ಖತನ. ಆದರೆ ವೈದ್ಯರು ಕೊಲೆಸ್ಟ್ರಾಲ್ ಇದೆ ಎಂದಾಕ್ಷಣ ಮದ್ದು ಬರೆದು ಕೊಡುತ್ತಾರೆ. ಇದಕ್ಕೆ ಕಾರಣ ಔಷಧ ಕಂಪನಿಗಳು. ರೋಗಿಗೆ ಇದೇ ಮದ್ದು ನೀಡಬೇಕು ಎಂದು ಬರೆಸುವುದು ಕೂಡಾ ಇದೇ ಔಷಧ ಕಂಪನಿಗಳ ಮಾಫಿಯಾ.

ಪ್ಯಾರೀಸ್ ನಲ್ಲಿ ಇತ್ತೀಚೆಗೆ  ಒಂದು ಸಮೀಕ್ಷೆ ನಡೆಯಿತು. ವೃದ್ಧಾಶ್ರಮವೊಂದರ ೮೦, ೯೦ ವಯಸ್ಸಿನ ವೃದ್ಧರಲ್ಲಿದ್ದ ಕೊಲೆಸ್ಟ್ರಾಲ್ ಪರಿಶೀಲನೆ ಮಾಡಿದಾಗ ೮೦೦, ೯೦೦ ಮಿ.ಗ್ರಾಂ ಇತ್ತು. ಸತ್ಯವೇನೆಂದರೆ ಅಷ್ಟು ಕೊಲೆಸ್ಟ್ರಾಲ್ ಇದ್ದ ಕಾರಣಕ್ಕೇ ಅವರು ಅಷ್ಟು ವರ್ಷ ಬದುಕಿದ್ದರು.

 ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ೧೫೦ ರಿಂದ ೨೦೦ ಮಿ.ಗ್ರಾಂ ಇರಬೇಕು. ಆದರೆ ಈಗ ಮಿತಿಯನ್ನು ೧೮೦ ಕ್ಕೆ ವೈದ್ಯರೇ ಇಳಿಸಿದ್ದಾರೆ. ಇದರಿಂದಾಗಿ ವಿಶ್ವದಲ್ಲಿ ಕೋಟ್ಯಾಂತರ ಮಂದಿ ರೋಗಿಗಳ ಪಟ್ಟಿಗೆ ಸೇರುತ್ತಾರೆ. ಇದರಿಂದ ಮದ್ದು ಮಾರಾಟ ಹೆಚ್ಚಾಗುತ್ತದೆ. ಇದರ ಲಾಭ ಔಷಧ ಕಂಪನಿಗಳಿಗೇ. ಇದರಿಂದಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧ ತಯಾರಿಸುವ ಕಂಪನಿಗಳಿಗೆ ವಾರ್ಷಿಕ ಲಾಭ ೧೩ ಬಿಲಿಯ ಡಾಲರ್ ಬಂದಿದೆ.

ಹಾರ್ಟ್ ಅಟ್ಯಾಕ್ ಗೂ ಕೊಲೆಸ್ಟ್ರಾಲ್ ಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ. ಕೊಲೆಸ್ಟ್ರಾಲ್ ಕಡಿಮೆಯಾದರೆ ಕ್ಯಾನ್ಸರ್, ಮಾನಸಿಕ ರೋಗ, ಆತ್ಮಹತ್ಯೆಗಳ ಸಾಧ್ಯತೆ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾದರೆ ಆರೋಗ್ಯ ಹಾಳು.

ಮಾತ್ರೆಗಳಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಿದರೆ ಲಿವರ್ ಗೆ ಹಾನಿಯಾಗುತ್ತದೆ. ಹಾರ್ಮೋನ್ ಗಳ ಉತ್ಪಾದನೆ ನಿಲ್ಲುತ್ತದೆ. ದೇಹದ ಕಣಗಳ ರಕ್ಷಾ ಕವಚ ಹಾಳಾಗುತ್ತದೆ. ಇದು ಡಯಾಬಿಟಿಸ್ ಗೆ ಕಾರಣವಾಗುತ್ತದೆ. ಇದಕ್ಕಾಗಿಯೇ ಕೊಲೆಸ್ಟ್ರಾಲ್ ಔಷಧ ನೀಡಿದ ಬಳಿಕ ಆಗಾಗ ಲಿವರ್ ಪರೀಕ್ಷೆ ಮಾಡಿಸುತ್ತಾರೆ.

ಕೆಲಸ ಮಾಡಲು ಲವಲವಿಕೆ ಇದ್ದರೆ ಅದುವೇ ಆರೋಗ್ಯ. ಲವಲವಿಕೆ ಇಲ್ಲದಿದ್ದರೆ ಅನಾರೋಗ್ಯ. ಆರೋಗ್ಯಕ್ಕೆ ದೇಸಿ ಹಾಲು ಶ್ರೇಷ್ಠ. ಹಾಲಿಗಿಂತಲೂ ತುಪ್ಪ ಶ್ರೇಷ್ಠ.

ಅಂತಿಮವಾಗಿ ನೀವು ತಿಂದದ್ದು ನಿಮ್ಮನ್ನು ಕೊಲ್ಲುವುದಿಲ್ಲ. ನಿಮ್ಮ ತಲೆಯನ್ನು ತಿನ್ನುವುದೇ ನಿಮ್ಮನ್ನು ಕೊಲ್ಲುತ್ತದೆ. ನಮ್ಮಲ್ಲಿ ಹುಟ್ಟುವ ದ್ವೇಷ, ಕ್ರೋಧ ಮೊದಲಾದ ಕೆಟ್ಟ ಚಿಂತನೆಗಳು ನಮ್ಮನ್ನು ಕೊಲ್ಲುತ್ತವೆ. ಪ್ರಪಂಚದಲ್ಲಿ ಅತೀ ಹೆಚ್ಚು ಸಾವು ಉಂಟಾಗುತ್ತಿರುವುದು ಔಷಧಗಳ ಅಡ್ಡಪರಿಣಾಮದಿಂದ.

ಡಾ.ಬಿ.ಎಂ.ಹೆಗ್ಡೆ,  ಪ್ರಾಧ್ಯಾಪಕರು, ಮೆಡಿಕಲ್ ಕಾಲೇಜು ಪ್ರಾಚಾರ್ಯರು.

Leave a Reply

Your email address will not be published.