ಎಡ, ಬಲ ಮಾರ್ಗ ಜಾಲ ಮತ್ತು ಮಧ್ಯಮ ಮಾರ್ಗಿಗಳ ಅಹಂ


ಡಾ.ಎಂ. ಎಂ. ಕಲಬುರ್ಗಿ ಅವರ ಹತ್ಯೆಯ ನಂತರ ಧಾರವಾಡದ ಸಾಹಿತ್ಯ ಸಂಭ್ರಮ ಸಮಾವೇಶ ಹೆಸರಿನ ಕಾರ್ಪೊರೇಟ್ ಸಂಘಟನೆ ಕೋಮುವಾದಿ ಚಿಂತನೆಗೆ ವೇದಿಕೆ ಕಲ್ಪಿಸಿತು. ಮಧ್ಯಮಮಾರ್ಗ ಎಂಬ ಹಳೆಯ ಆದರೆ ಪ್ರತಿಗಾಮಿ ಚಿಂತನೆಗಳಿಗೆ ಸೂಕ್ಷ್ಮ ಸ್ತರದಲ್ಲಿ ಬೆಂಬಲಿಸುವ ಚಿಂತನಾ ಕ್ರಮವನ್ನು ನವೀಕರಿಸಿತು. ಆಳದಲ್ಲಿ ಅಂಥ ಚಿಂತನೆಯನ್ನು ಉಸಿರಾಡುತ್ತಿದ್ದ ಹಲವರು ಭಾರೀ ಹುರುಪಿನಿಂದ ಕ್ರಿಯಾಶೀಲರಾಗಿದ್ದಾರೆ. ಕೊಲ್ಲುವವರನ್ನೂ ಸಾಯುವವರನ್ನೂ , ಗೋಡ್ಸೆಯನ್ನೂ ಗಾಂಧಿಯನ್ನೂ , ಸಾವರ್ಕರ್ ಅವರನ್ನೂ ಅಂಬೇಡ್ಕರ್ ಅವರನ್ನೂ , ಎಡಪಂಥೀಯರನ್ನೂ ಬಲಪಂಥೀಯರನ್ನೂ ಒಂದೇ ತಕ್ಕಡಿಯ ಎರಡು ಪರಡಿಗಳಲ್ಲಿ ಕೂಡ್ರಿಸಿ ಅವರ ಲೋಪದೋಷಗಳನ್ನು ಚರ್ಚಿಸುತ್ತ ತಾವು ಮಾತ್ರ ಸರಿಯಾದ ಮಧ್ಯಮ ಮಾರ್ಗದಲ್ಲಿದ್ದೇವೆಂಬ ಅಹಂಕಾರದಿಂದ ಬೀಗುತ್ತಿದ್ದಾರೆ.

ಎಡಪಂಥೀಯರು ಮತ್ತು  ಬಲಪಂಥೀಯರು ಈ ಎರಡೂ ಮಾರ್ಗಗಳ ಗುಣಾವಗುಣಗಳ ಬಗ್ಗೆ ಚರ್ಚೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಆತ್ಯಂತಿಕವಾಗಿ ಜನಸಮುದಾಯದ ಹಿತಕ್ಕೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಆ ಚರ್ಚೆ ಎಷ್ಟು ಪ್ರಯೋಜನಕಾರಿ ಎಂಬ ವಿವೇಕ ಅದರ ಮೌಲ್ಯವನ್ನು ನಿರ್ಧರಿಸುತ್ತದೆ ಅಲ್ಲವೆ ? ಮಧ್ಯಮಮಾರ್ಗಿಗಳೆಂದು ಸ್ವಯಂಘೋಷಿಸಿಕೊಂಡವರು ಏನೇ ಬರೆಯಲಿ ಉಘೇ ಉಘೇ ಎನ್ನಲು ‘ಭಟ್ಟಂಗಿ’ಗಳ ಗುಂಪೊಂದು ಸದಾ ಸಿದ್ಧವಿರುತ್ತದೆ.ಅವರ ಬರಹಗಳ ಬಗ್ಗೆ ಸಣ್ಣ ಕಮೆಂಟ್ ಮಾಡಿದರೂ ಗಾಂಧಿಯನ್ನು ಕೊಂದ ಬಂದೂಕು ಇವರ ಬಾಯಿಗೆ ಮತ್ತು ಪೆನ್ನಿಗೆ ಇಳಿದು ಬರುತ್ತದೆ. ಇಂತಹ ಲೇಖನವೊಂದನ್ನು ಓದಿ ಪ್ರತಿಕ್ರಿಯಿಸಬೇಕೆನ್ನಿಸಿತು.

ನಾನು ಮೊನ್ನೆ ತಾನೆ ಫೇಸ್‌ಬುಕ್ಕಿಗೆ ಎಂಟ್ರಿ ಕೊಟ್ಟು ಕೆಲವು ಲೇಖನಗಳನ್ನು ಓದುತ್ತಿದ್ದೆ. ನಾನು ಹೇಳಿದ್ದು ಇಷ್ಟೇ – ” ನಿಮ್ಮ ಗೊಂದಲಗಳು ಹಾಗೂ ಚಿಂತನೆಗಳು ಆತ್ಯಂತಿಕವಾಗಿ ಯಾರ ಪರವಾಗಿರುತ್ತವೆ ಎನ್ನುವುದು ನೀವು ನಿಂತ ನೆಲೆಯನ್ನು ಸೂಚಿಸುತ್ತದೆ. ಮಧ್ಯಮ ಮಾರ್ಗವೆನ್ನುವುದೂ … ” ನಾನು ಹೇಳ ಹೊರಟಿದ್ದು ಅವರ ಚಿಂತನೆಯ ನೆಲೆಯ ಬಗ್ಗೆ. ಅವರು ತಕ್ಷಣ ಪ್ರತಿಕ್ರಿಯಿಸಿದ್ದು ” ನಾನು ಮಧ್ಯಮ ಮಾರ್ಗಿ ಎಂದುಕೊಳ್ಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ.” ನಾನು ತಕ್ಷಣ ಪ್ರತಿಕ್ರಿಯಿಸಿದೆ – ” ದೊಣ್ಣೆನಾಯಕನಿಗೆ ಧನ್ಯವಾದ.”

ಈ ಮಧ್ಯಮಮಾರ್ಗಿ ತನ್ನ ಬರಹದಲ್ಲಿ ಏನೂ ಮರುಯೋಚಿಸಬಹುದಾದದ್ದು  ಇದ್ದಿರಬಹುದು ಎಂದುಕೊಳ್ಳದೆ ಎಷ್ಟು ಅಹಂಕಾರದಿಂದ ‌ಪ್ರತಿಕ್ರಿಯಿಸಿದ್ದರು. ಅವರ ಪ್ರತಿಕ್ರಿಯೆ ಥೇಟ್ ಫ್ಯಾಸಿಸ್ಟರ ಹಾಗೆ. ಪೆನ್ನಿಗೆ ಮೆಲ್ಲಗೆ ಲಾಠಿ ಇಳಿದು ಬಂತು. ಇನ್ನೊಬ್ಬರ ಬಗ್ಗೆ ವಿಮರ್ಶೆ ಮಾಡುವಾಗ ತನ್ನನ್ನು ವಿಮರ್ಶಿಸುವವರಿರಬಹುದು, ಅದಕ್ಕೂ ಸಮಾಧಾನದಿಂದ ಪರಿಶೀಲಿಸಬೇಕೆಂಬ ಕನಿಷ್ಠ ಪ್ರಜಾಸತ್ತಾತ್ಮಕವಾದ ಸೌಜನ್ಯವನ್ನು ಒಳಗೊಳ್ಳದ ಈ ಮಧ್ಯಮ ಆಳದಲ್ಲಿ ತಾನು ಬಲದ ಅಂತರಂಗ ಎಂಬ ದನಿಯಿತ್ತು, ಅದನ್ನು ಅವರು  ಸಾಬೀತುಪಡಿಸಿದರು.

“ಯಾರ್ರಿ  ನೀವು. ಏನೋ ಫ್ರೆಂಡ್ಸ್‌ ರಿಕ್ವೆಸ್ಟ್ ಕಳಿಸಿದ್ದೀರಿ ಎಂದು ಸ್ವೀಕರಿಸಿದ್ದೆ. ನನ್ನ ಚಿಂತನೆಯ ಬಗ್ಗೆ ಏನೂ ಪ್ರತಿಕ್ರಿಯಿಸದೆ ನನ್ನ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದೀರಿ.ಬೇಕಾದರೆ ಇರಿ ಬೇಡವಾದರೆ ನನ್ನ ಫೋರಮ್ಮಿನಿಂದ ಗೆಟ್ ಔಟ್ ! ” ಅಂದಿದ್ದರು.  ನಿಂತ ನಿಲುವು ಅನ್ನೋದು ವ್ಯಕ್ತಿತ್ವವೊ, ವೈಚಾರಿಕ ನೆಲೆಗಟ್ಟೊ ನನಗೆ ತಿಳಿಯದಾಯಿತು. ಮೋಹನ ಭಾಗವತ್ ಅವರು ಕೂಡ ಹೀಗೆ ಪ್ರತಿಕ್ರಿಯಿಸುತ್ತಿರಲಿಲ್ಲವೇನೋ. ಪ್ರಮೋದ ಮುತಾಲಿಕ್ ಅವರನ್ನು ಗೌರವದಿಂದ ನೆನಪಿಸಿಕೊಂಡೆ. ” ಗೆಟ್ ಲಾಸ್ಟ್ ” ಎಂದು ಶರಾ ಬರೆದೆ. ಮಧ್ಯಮ ಮಾರ್ಗಿಗಳ ಚಿಂತನೆಗೆ ಒಂದು ಒಳ್ಳೆಯ ರೂಪಕವನ್ನು ಕಂಡುಕೊಂಡೆ. ಆ ಸ್ನೇಹಿತರಿಗೆ ಧನ್ಯವಾದ. ಇವರ ಹೆಸರು ಹೇಳಬೇಕಾಗಿಲ್ಲ. ಇದೊಂದು ರೂಪಕ.

-ಎಂ.ಡಿ.ವಕ್ಕುಂದ, ಪ್ರಾಧ್ಯಾಪಕರು

photo courtesy: google

Leave a Reply

Your email address will not be published.