ಧರ್ಮಸ್ಥಳ ದೇವಸ್ಥಾನ ಶೈವ ದೇವರು, ಶೂದ್ರ ದೈವ, ಜೈನ ಆಡಳಿತದ ಸಮ್ಮಿಳನ !


ಸಿದ್ದರಾಮಯ್ಯ ಅವರು  ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋದ ಪ್ರಕರಣ ವಾದ ಪ್ರತಿವಾದಗಳಿಗೆ ಆಸ್ಪದ ಒದಗಿಸಿತ್ತು.  ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಯವರು ಸ್ಪಷ್ಟೀಕರಣವನ್ನೂ ನೀಡಬೇಕಾಗಿ ಬಂತು.  ‘ಮೀನು ಮಾಂಸ ತಿಂದು ದೇವಸ್ಥಾನ ಪ್ರವೇಶಿಸಬಾರದು ಎಂಬ ನಿಯಮ ಇಲ್ಲ’ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ನೀಡಿದ ಸ್ಪಷ್ಟೀಕರಣ ಸಕಾರಣವಾಗಿಯೇ ಇತ್ತು.

 ಧರ್ಮಸ್ಥಳದ ದೇವಸ್ಥಾನ  ಮೂಲದಲ್ಲಿ ಹಲವು ದೈವಗಳನ್ನುಳ್ಳ ಒಂದು ದೈವದ ಮನೆಯಾಗಿತ್ತು. ಅಣ್ಣಪ್ಪ ಪಂಜುರ್ಲಿ ಮೂಲ ದೈವ ಅಥವಾ ರಾಜದೈವವಾಗಿತ್ತು. ಪಂಜುರ್ಲಿ ತುಳು ಬಿಲ್ಲವರ ಕುಲದೈವ. ತುಳುವಿನಲ್ಲಿ ಇದು ಪಂಜಿದ ಕುರ್ಲಿ ಅಂದರೆ ಹಂದಿ ಮರಿ ಎಂದರ್ಥ.

 ಮೊದಲಿನಿಂದಲೂ ಧರ್ಮಸ್ಥಳ ದೇವಸ್ಥಾನದ ಎಲ್ಲಾ ಕಾರುಬಾರುಗಳಿಗೆ ಕಾರಣರಾದವರು  ಅಣ್ಣಪ್ಪ ಪಂಜುರ್ಲಿ. ಮಂಜುನಾಥ ದೇವರು ಪೂಜೆಗಷ್ಟೇ. ಆದರೆ ಈಗ ಅಣ್ಣಪ್ಪನಿಂದ ಪಂಜುರ್ಲಿಯನ್ನು ಮರೆ ಮಾಡಿಸಿ ಅವನನ್ನು ವೈದಿಕ ಪುರುಷ ಗಣವಾಗಿ ರೂಪ ಬದಲಾಯಿಸುವ ಪ್ರಯತ್ನ ನಡೆಯುತ್ತಿರುವಂತಿದೆ.

 ಒಂದು ಕಥೆಯ ಪ್ರಕಾರ ವಾದಿರಾಜರು ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಅವರು ತಾನು ದೈವದ ಮನೆಗಳಲ್ಲಿ ಆತಿಥ್ಯ ಸ್ವೀಕರಿಸುವುದಿಲ್ಲ , ದೇವಸ್ಥಾನಗಳಲ್ಲಿ ಮಾತ್ರವೇ ಆತಿಥ್ಯ ಸ್ವೀಕರಿಸುತ್ತೇನೆ ಎಂದು ಹೇಳಿದ್ದರಂತೆ.  ಹೆಗ್ಗಡ್ತಿಯವರ ಇಚ್ಛೆಯ ಮೇರೆಗೆ ಅಣ್ಣಪ್ಪ ಪಂಜುರ್ಲಿ ಕದ್ರಿ ದೇವಸ್ಥಾನದಿಂದ ಮಂಜುನಾಥನನ್ನು ಹಾರಿಸಿ ತಂದು ಪ್ರತಿಷ್ಠಾಪನೆ ಮಾಡುತ್ತದೆ. ಆದರೆ ವೈಷ್ಣವರಾದ ವಾದಿರಾಜರು ಶೈವ ದೇವಸ್ಥಾನವೊಂದರ ನಿರ್ಮಾಣಕ್ಕೆ ಏಕೆ, ಹೇಗೆ ಕಾರಣರಾಗುತ್ತಾರೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಧರ್ಮಸ್ಥಳದ ಮಂಜುನಾಥ ಶೈವ ಮಂಜುನಾಥನಲ್ಲ. ಅವನು ಬೌದ್ಧ ಧರ್ಮದ ಮಂಜುಶ್ರೀ ಎಂಬ ವಾದವೂ ಇದೆ. ಇವೆಲ್ಲ ಏನೇ ಇದ್ದರೂ ಧರ್ಮಸ್ಥಳದ ಮಂಜುನಾಥನನ್ನು ಬಹುಸಂಖ್ಯಾತ ಭಕ್ತರು ಶಿವನೆಂದೇ ಭಾವಿಸುತ್ತಾರೆ. ಶಿವ ಹೇಗಿದ್ದರೂ ಅವೈದಿಕ. ಅವನೇನೂ ವೆಜಿಟೇರಿಯನ್ ಅಲ್ಲ.

ಇನ್ನು ಭೂತಾರಾಧಕರಲ್ಲದ ಜೈನ ಹೆಗ್ಗಡೆ ಅವರು  ತುಳುನಾಡಿನ ದೈವಸ್ಥಾನವೊಂದರ ಆಡಳಿತದಾರರು ಹೇಗಾದರು ಎಂಬುದು ಬೇರೆಯೇ ವಿಚಾರ. ಶೈವ ದೇವರು, ಶೂದ್ರ ದೈವ ಮತ್ತು ಜೈನ ಆಡಳಿತ ಹೀಗಿದೆ ಧರ್ಮಸ್ಥಳದಲ್ಲಿ ಸಮ್ಮಿಳನ.  ಕರಾವಳಿಯ ಬುದ್ಧಿವಂತರಿಗೆ ಇದೊಂದು ಹೇಳಿ  ಮಾಡಿಸಿದಂತಹ ಒಂದು ವ್ಯವಹಾರ ಮಾದರಿ. ಮಂಜುನಾಥ ದೇವರು ನಂಬಿದವರ ಪಾಲಿಗೆ ದೈವ.

((ಪಂಜು ಗಂಗೂಲಿ)

Leave a Reply

Your email address will not be published.