ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ಡಿ.6ರಂದು ವೈಚಾರಿಕ ಜಾಗೃತಿ ಅಭಿಯಾನ


  • ಡಾ.ಅಂಬೇಡ್ಕರ ಆಶಯ ಸಾಕಾರಕ್ಕೆ ಮೂಢನಂಬಿಕೆ ವಿರೋಧಿ ಸಂಕಲ್ಪ ದಿನಾಚರಣೆ
  • ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ವೈಚಾರಿಕ ಪ್ರಜ್ಞೆ ಮೂಡಿಸಲು ಸಂಕಲ್ಪ
  • ಶೋಷಿತರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಸಬಲತೆಗೆ ಜಾಗೃತಿ

ಮಾನವ ಬಂಧುತ್ವ ವೇದಿಕೆಯು ಕಳೆದ ನಾಲ್ಕು ವರ್ಷಗಳಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ  “ಮಹಾಪರಿನಿರ್ವಾಣ ದಿನ”ವನ್ನು “ಮೂಢನಂಬಿಕೆ ವಿರೋಧಿ ಸಂಕಲ್ಪ ದಿನ”ವಾಗಿ ಆಚರಿಸುತ್ತಿದೆ. ಈ ವರ್ಷವೂ   ಡಿಸೆಂಬರ್ 6ರಂದು ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ಬೆಳಗ್ಗೆ 7 ಗಂಟೆಯಿಂದ  ಸತತ  24 ಗಂಟೆ  ವೈಚಾರಿಕ ಜಾಗೃತಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ.  ನಾಡಿನ  ಪ್ರಗತಿಪರ ಚಿಂತಕರು, ವಿಚಾರವಾದಿಗಳು ಭಾಗವಹಿಸಲಿರುವ ಈ ಬಾರಿಯ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ 30 ಜಿಲ್ಲೆಗಳಿಂದ ಜನ ಸಾಗರ ಹರಿದು ಬರಲಿದೆ.  ಸುಮಾರು 50 ಸಾವಿರ ಜನರು ಈ ವೈಚಾರಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳುವ ನಿರೀಕ್ಷೆಯಿದೆ.

 ಧರ್ಮ, ದೇವರು, ಜಾತಿಗಳು, ಜೀವ ವಿರೋಧಿ ಮೌಢ್ಯಗಳು ಮತ್ತು ಕಂದಾಚಾರಗಳ ಬಲೆ ಬೀಸಿ ಮುಗ್ಧ ಜನರ ಶೋಷಣೆ ಮುಂದುವರಿಸಿರುವ  ಶಕ್ತಿಗಳನ್ನು ತಡೆಯಲು, ಆ ಮೂಲಕ   ಶೋಷಿತ ಸಮುದಾಯಗಳನ್ನು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗಿಸಲು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಾಪಿತ ಶಕ್ತಿಗಳ ಮೋಸದಿಂದ ಶೋಷಿತ ಸಮುದಾಯಗಳನ್ನು  ಹೊರತರಬೇಕು ಎಂಬ ಉದ್ದೇಶದಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ  “ಮಹಾಪರಿನಿರ್ವಾಣ ದಿನ”ವನ್ನು “ಮೂಢನಂಬಿಕೆ ವಿರೋಧಿ ಸಂಕಲ್ಪ ದಿನ”ವಾಗಿ ಆಚರಿಸಲಾಗುತ್ತಿದೆ.  ಶೋಷಿತರ ಕಲ್ಯಾಣವನ್ನೇ ಕೊನೆ ಉಸಿರಾಗಿಸಿಕೊಂಡಿದ್ದ ಡಾ.ಅಂಬೇಡ್ಕರ್ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯನ್ನು ಅರ್ಥಪೂರ್ಣವಾಗಿಸಲು ಪ್ರತಿವರ್ಷ ಡಿ.6ರಂದು “ಮೂಢನಂಬಿಕೆ ವಿರೋಧಿ ಸಂಕಲ್ಪ ದಿನ” ವಾಗಿ ಆಚರಿಸಲಾಗುತ್ತಿದೆ.  ಶೋಷಿತ ಸಮುದಾಯಗಳಲ್ಲಿ   ಸ್ವಾಭಿಮಾನ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸುವುದು ಈ ದಿನಾಚರಣೆಯ ವಿಶೇಷವಾಗಿದೆ.

  ವೈಚಾರಿಕ ಪ್ರಜ್ಞೆಯ ರಾಜಕಾರಣಿ ಎಂದೇ ಜನರು ಗುರುತಿಸುವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಈ ವರ್ಷವೂ ಮೂಢನಂಬಿಕೆ ವಿರೋಧಿ ಸಂಕಲ್ಪ ದಿನಾಚರಣೆ  ಸಂಘಟಿಸಲಾಗಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಹೊಸದಿಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ  ಡಾ. ಪುರುಷೋತ್ತಮ ಬಿಳಿಮಲೆ, ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ,ಅಥಣಿ ಮೊಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ರಾಜ್ಯ ಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್, ಪ್ರಗತಿಪರ ಚಿಂತಕ, ಶಾಸಕ ವೈಎಸ್ ವಿ ದತ್ತಾ, ರೈತ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಹೆಸರಾಂತ ವಿಚಾರವಾದಿ ಡಾ.ಸುಷ್ಮಾ ಅಂದಾರೆ, ಸಾಹಿತಿ, ಜನಪರ ಹೋರಾಟಗಾರ್ತಿ ಕೆ.ನೀಲಾ ಸೇರಿ,  ನಾಡಿನ ಅನೇಕ ಪ್ರಗತಿಪರ ಚಿಂತಕರು, ವಿಚಾರವಾದಿಗಳು ಪಾಲ್ಗೊಳ್ಳಲಿದ್ದಾರೆ. ನಾಡಿನ ಹೆಸರಾಂತ ಕಲಾತಂಡಗಳಿಂದ ಗಾಯನ, ವಾದ್ಯಮೇಳ, ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಸಜ್ಜುಗೊಂಡಿದೆ. ನೂರಾರು ಕಾರ್ಯಕರ್ತರೊಂದಿಗೆ ಸತೀಶ ಜಾರಕಿಹೊಳಿ ಅವರು ಇಡೀ ರಾತ್ರಿ ಸ್ಮಶಾನದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಮೂಢನಂಬಿಕೆ ವಿರೋಧಿ ಸಂಕಲ್ಪ ದಿನಾಚರಣೆಯ ಪೂರ್ವಭಾವಿಯಾಗಿ ರಾಜ್ಯದ 5 ಕೇಂದ್ರಗಳಿಂದ ನ.22ರಿಂದ ಹೊರಟಿರುವ ಮೌಢ್ಯ ವಿರೋಧಿ ಜಾಗೃತಿ ಜಾಥಾಗಳು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಗಳನ್ನು ಹಾದು ಡಿ.5ರಂದು ಬೆಳಗಾವಿ ತಲುಪಲಿವೆ. ಬೀದರ್ ನಿಂದ ಬಸವ ಕಲಾ ತಂಡ, ರಾಮನಗರದಿಂದ ಡಾ.ಅಂಬೇಡ್ಕರ್ ಕಲಾ ತಂಡ, ಕೋಲಾರದಿಂದ ಪೆರಿಯಾರ್ ಕಲಾ ತಂಡ, ಮೈಸೂರಿನಿಂದ ನಾರಾಯಣಗುರು ಕಲಾ ತಂಡ, ಬೆಳಗಾವಿ ಜಿಲ್ಲೆ ಅಥಣಿಯಿಂದ ಬುದ್ಧ ಕಲಾ ತಂಡಗಳು 7 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 1000ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರಿಗೆ ಮೂಢ್ಯ ವಿರೋಧಿ ಸಂದೇಶ ತಲುಪಿಸಲು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿವೆ.

 ಬುದ್ದ, ಬಸವಣ್ಣ, ಅಂಬೇಡ್ಕರ ಕನಸಿನ ಸಮಾನತೆಯ ಸಮಾಜ ನಿರ್ಮಾಣದ ಸಾಕಾರಕ್ಕಾಗಿ  ಸತೀಶ ಜಾರಕಿಹೊಳಿ ಅವರು ಹುಟ್ಟು ಹಾಕಿರುವ ಮಾನವ ಬಂಧುತ್ವ ವೇದಿಕೆ ನಾಡಿನಲ್ಲಿ ವೈಚಾರಿಕ ಪ್ರಜ್ಞೆಯ ಜಾಗೃತಿಯ ಜೊತೆಗೆ ಸಾಮಾಜಿಕ ಆಂದೋಲನವಾಗಿ ಬೆಳೆದಿದೆ.    ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎನ್ನುವ  ಬದ್ಧತೆಯಿಂದಾಗಿ 2014ರ ನವೆಂಬರ್ ತಿಂಗಳಲ್ಲಿ ಆರಂಭಗೊಂಡ ಮಾನವ ಬಂಧುತ್ವ ವೇದಿಕೆ ಇದೀಗ ರಾಜ್ಯದ 30 ಜಿಲ್ಲೆಗಳ ಮತ್ತು ಎಲ್ಲ ತಾಲ್ಲೂಕಗಳಿಗೆ ವಿಸ್ತರಣೆಗೊಂಡು ಬೃಹತ್ ಶಕ್ತಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ವೇದಿಕೆಯು ಸಂಘಟಿಸುತ್ತಿರುವ ಹತ್ತು ಹಲವು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ನಾಡಿನ ಪ್ರಗತಿಪರ, ಜಾತ್ಯಾತೀತ ಶಕ್ತಿಗಳನ್ನು ಒಂದುಗೂಡಿಸುವ ಜೊತೆಗೆ ಶೋಷಿತ ಸಮುದಾಯಗಳಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತಿರುವುದು ಗಮನಾರ್ಹವಾಗಿದೆ.             ಡಾ. ಬಿ.ಆರ್. ಅಂಬೇಡ್ಕರ ಅವರು ದೇಶದ ಶೋಷಿತ ಸಮುದಾಯಗಳು, ಬಡವರು, ಮಹಿಳೆಯರ ಬದುಕಿನಲ್ಲಿ ಸ್ವಾಭಿಮಾನದ ಬೆಳಕು ತುಂಬಿದವರು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ದೇಶವನ್ನು ಮುನ್ನಡೆಬಲ್ಲ ಅತ್ಯುತ್ತಮ  ಸಂವಿಧಾನ ಕೊಟ್ಟವರು.    ಸ್ವಾತಂತ್ರ್ಯ, ಸಮಾನತೆ, ಸಹೋಧರತೆ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳ ಮೂಲಕ ಸದೃಢ ಭಾರತ ನಿರ್ಮಾಣದ ಕನಸು ಕಂಡವರು. ಅದಕ್ಕಾಗಿ “ಮಾನವೀಯತೆಯೇ ನಮ್ಮ ಧರ್ಮ
ಸಂವಿಧಾನವೇ ನಮ್ಮ ಧರ್ಮ ಗ್ರಂಥ” ಎಂಬುದು ಈ ಆಂದೋಲನದ ಘೋಷ ವಾಕ್ಯವಾಗಿದೆ.

 ಸಹಸ್ರಾರು ವರ್ಷಗಳ ಗುಲಾಮಗಿರಿಯ ಆಡಳಿತದಿಂದ ಮುಕ್ತರಾಗಿ ಪ್ರಜಾಪ್ರಭುತ್ವದ ಭರವಸೆಯೊಂದಿಗೆ ಸಮಾನತೆಯ ಬದುಕು ಕಟ್ಟಿಕೊಳ್ಳುವ  ಧ್ಯೇಯಗಳೊಂದಿಗೆ ಮಾನವ ಬಂಧುತ್ವ ವೇದಿಕೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದೆ. ಯುವಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಅನಿವಾರ್ಯತೆಯನ್ನು ಸಂಘಟನೆ ಮನಗಂಡಿದೆ. ಅದಕ್ಕಾಗಿ ಸಮಾಜವನ್ನು ಪರಿವರ್ತನೆಯ ಕಡೆಗೆ ಮುನ್ನಡೆಸುವ  ಪೂರಕ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ವೈಚಾರಿಕ ಚಳುವಳಿಯೊಂದು ಸಾಮಾಜಿಕ ಚಳುವಳಿಯಾಗಿ ವಿಸ್ತಾರಗೊಳ್ಳುತ್ತಿದೆ.  ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣ ಮತ್ತಿತರ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ರಾಜಕೀಯ ಪರಿವರ್ತನೆಗೂ ಈ ಚಳುವಳಿ ನಾಂದಿ ಹಾಡಲಿದೆ.

Leave a Reply

Your email address will not be published.