ಕನ್ನಡದ ಬಾನಂಗಳದಲ್ಲಿ ಮೊದಲ “ಮಿಂಚಾಗಿ ಮೂಡಿ….”ದ ಕಲಾವಿದ ರಿಯಾಜ್ ಚೌಗಲಾ


  • ಕಲಾವಿದ ರಿಯಾಜ್ ಚೌಗಲಾ ಅವರ ಕನ್ನಡದ ಮೊದಲ ಅಲ್ಬಂ ಲೋಕಾರ್ಪಣೆ

   ನಾಡಿನ ಸಿರಿ ಕಂಠದ ಗಾಯಕ ರಿಯಾಜ್ ಚೌಗಲಾ ಅವರ ಮೂರನೇ ಮತ್ತು ಕನ್ನಡ ಚಿತ್ರಗೀತೆಯ ಮೊದಲ ಅಲ್ಬಂ  “ಮಿಂಚಾಗಿ ಮೂಡಿ ಬರುವೆ”  ಸಂಗೀತ ಲೋಕದ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಡಿ.15ರಂದು  ಮಿ.ಸತೀಶ್ ಶುಗರ್ಸ್  ಕ್ಲಾಸಿಕ್-2017 ಆರಂಭೋತ್ಸವ ವೇದಿಕೆಯಲ್ಲಿ ಈ ಅಲ್ಬಂ  ಮಿಂಚಾಗಿ ಮಿನುಗಿ  ಸಂಗೀತ ರಸಿಕರ ಮನ ಗೆದ್ದಿದೆ. ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಅಧ್ಯಕ್ಷ ಮತ್ತು ಅರ್ಜುನ್ ಪ್ರಶಸ್ತಿ ವಿಜೇತ ಹೆಸರಾಂತ ಕ್ರೀಡಾಪಟು, ಕ್ರೀಡಾ ಗುರು ಪ್ರೇಮಚಂದ್ರ ಡೇಗ್ರಾ ಅವರು ಕನ್ನಡ ಹಾಡಿನ ಈ  ಅಲ್ಬಂ ಅನ್ನು ಲೋಕಾರ್ಪಣೆಗೊಳಿಸಿ, ಲಕ್ಷಾಂತರ ಸಂಗೀತ ಪ್ರೇಮಿಗಳ ಪ್ರತಿನಿಧಿಯಂತೆ ರಿಯಾಜ್ ಅವರ ಸಿರಿ ಕಂಠದ ಸಂಗೀತ ಯಾತ್ರೆಗೆ ಶುಭ ಹಾರೈಸಿದ್ದಾರೆ.

    ಗೋಕಾಕ ನಾಡಿನ ರಿಯಾಜ್ ಚೌಗಲಾ  ತಮ್ಮ ಮೊದಲ ಅಲ್ಬಂ “ಆ ಝರಾ” ಬಿಡುಗಡೆ ಮಾಡಿದಾಗಲೇ ಲಕ್ಷಾಂತರ ಸಂಗೀತ ಪ್ರೇಮಿಗಳು ಆ ಮೋಡಿಗೆ ತಲೆದೂಗಿದ್ದರು. ಈ ಸ್ಫೂರ್ತಿಯ ಅಲೆಯಲ್ಲಿ ಅವರ ಎರಡನೇ ಅಲ್ಬಂ  “ತುಮ್ಹಸೇ ಮಿಲ್ ಕರ್..’ ಬಿಡುಗಡೆಯಾಯಿತು. ಸಂಗೀತ ರಸಿಕರು ಎರಡನೇ ಅಲ್ಬಂಗೆ ತೋರಿದ ಪ್ರೀತಿ ರಿಯಾಜ್ ಅವರಲ್ಲಿ ಮತ್ತಷ್ಟು ಹುರುಪು ಮೂಡಿಸಿತು.  ಕನ್ನಡ ನಾಡಿನ ಮಣ್ಣಿನ ಮಗನಾದ ರಿಯಾಜ್ ಈ ಬಾರಿ ಭಾಷೆಯ ಟ್ರ್ಯಾಕ್ ಬದಲಿಸಿ ಕನ್ನಡದತ್ತ ವಾಲಿದರು.  ಹಿಂದಿಯ ಬದಲು ಮೂರನೇ ಅಲ್ಬಂಗೆ ಕನ್ನಡದ ಹಾಡನ್ನು ಆಯ್ದುಕೊಂಡರು. ಕನ್ನಡ ಹಾಡಿನ ಮೋಡಿಗೆ ಸಂಗೀತ  ರಸಿಕರ ಅಂಗಳದಲ್ಲಿ ಮತ್ತೊಮ್ಮೆ ಹಬ್ಬದ ಸಂಭ್ರಮ ಮೂಡಿದೆ. ಕನ್ನಡದ  ಬಾನಿನಲ್ಲಿ  ಮಿಂಚು ಮಿನುಗಿ, ಸಂಗೀತದ ಅಂಗಳದಲ್ಲಿ ಬೆಳದಿಂಗಳು ಚೆಲ್ಲಿದೆ.

 ಮೊದಲ ಅಲ್ಬಂ ಬಿಡುಗಡೆಗೊಂಡ ನಾಲ್ಕು ದಿನಗಳಲ್ಲೇ ಜನಪ್ರೀತಿಯ ಅಲೆಯಲ್ಲಿ ತೇಲಿ ಹೋಗಿತ್ತು. ಅದೇ ಪ್ರೀತಿಯ ಮಹಾಪೂರ ಮತ್ತೊಮ್ಮೆ ಭೋರ್ಗರೆದಿದೆ.  ರಿಯಾಜ್ ಚೌಗಲಾ ಅವರ ಕನ್ನಡದ ಮೊದಲ ಅಲ್ಬಂ  “ಮಿಂಚಾಗಿ ಮೂಡಿ ಬರುವೆ”  ಸಂಗೀತ ಲೋಕದಲ್ಲಿ ರಿಂಗುಣಿಸಿ, ಪ್ರೀತಿಯ ಮಳೆ ಸುರಿಸಿದೆ.

   ಕನ್ನಡ ಹಾಡಿನ ಗಾಯನದ ಹಿನ್ನೆಲೆಯಲ್ಲಿ ವಿಡಿಯೋ ಚಿತ್ರಕ್ಕೆ  ಈ ಬಾರಿ ರಿಯಾಜ್ ಚೌಗಲಾ   ನಿಸರ್ಗದ ಮಡಿಲನ್ನು ಆಯ್ದುಕೊಂಡಿದ್ದಾರೆ. ಹಚ್ಚ ಹಸಿರಿನ ಕಾಡು, ಕಾಡಿನ ನಡುವೆ ಇರುವ ರೋಡು, ಗಂಧದ ಗುಡಿಯ ಡಾ. ರಾಜಕುಮಾರನಂತೆ ಜೀಪ್ ಡ್ರೈವ್ ಮಾಡುತ್ತ ರಿಯಾಜ್  ಕನ್ನಡದ ಹಾಡೊಂದಕ್ಕೆ ಜೀವ ತುಂಬಿದಂತೆ ವಿಡಿಯೋ ಚಿತ್ರೀಕರಿಸಲಾಗಿದೆ. ಪ್ರಕೃತಿ ಸೌಂದರ್ಯ ಲಹರಿಯಲ್ಲಿ ಕನ್ನಡಕಧಾರಿ ರಿಯಾಜ್ ಚೌಗಲಾ ಅವರು ಮಿಂಚಾಗಿ ಹರಿದಾಡಿ ಗಮನ ಸೆಳೆದಿದ್ದಾರೆ.

  ಮೊದಲ ಅಲ್ಬಂ “ಆ ಝರಾ”, ಎರಡನೇ ಅಲ್ಬಂ  “ತುಮ್ಹಸೇ ಮಿಲ್ ಕರ್..’ ನಂತೆ ರಿಯಾಜ್ ಅವರ ಮೂರನೇ ಮತ್ತು ಕನ್ನಡದ ಮೊದಲ ಅಲ್ಬಂ  “ಮಿಂಚಾಗಿ ಮೂಡಿ ಬರುವೆ” ಯಲ್ಲೂ ವಿಶೇಷತೆಗಳಿವೆ. ಹಿಂದಿನ ಎರಡೂ ಅಲ್ಬಂಗಳ ವಿಶೇಷಗಳು ಮೂರನೇ ಅಲ್ಬಂನಲ್ಲೂ ಕಾಣಿಸಿವೆ.

  ಟ್ರ್ಯಾಕ್ ಇಲ್ಲದೆ  ಲೈವ್ ಸಂಗೀತ ಬಳಸಿ  ಮೂರನೇ ಅಲ್ಬಂನಲ್ಲೂ   ಚಿತ್ರಗೀತೆಯನ್ನು ಯಥಾವತ್ ಮರು ಸೃಷ್ಟಿಸಲಾಗಿದೆ. ರಿಯಾಜ್ ಮೂರನೇ ಅಲ್ಬಂಗೆ ಆಯ್ದುಕೊಂಡ ಹಾಡನ್ನು ಕನ್ನಡದಲ್ಲಿ ಹೆಸರಾಂತ ಹಿನ್ನೆಲೆ ಗಾಯಕ ಸೋನು ನಿಗಮ್ ಹಾಡಿದ್ದರು. ಆದರೆ ಹಿನ್ನೆಲೆ ಗಾಯಕ ಸೋನು ನಿಗಮ್ ಅವರನ್ನು ಮೈಯಲ್ಲಿ ಆಹ್ವಾನಿಸಿಕೊಂಡು ರಿಯಾಜ್ ಚೌಗಲಾ ಈ ಹಾಡು ಹಾಡಿದ್ದಾರೆ.   ಈ ಹಾಡು ಕೇಳಿದವರು ಮೂಲ ಯಾವುದು, ಮರುಸೃಷ್ಟಿ ಯಾವುದು ಎಂಬ ಗೊಂದಲಕ್ಕೆ ಬೀಳುವುದು ಖಚಿತ ಎಂದು ಸಂಗೀತ ರಸಿಕರು ಹೇಳುತ್ತಿದ್ದಾರೆ. ಸತೀಶ ಶುಗರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ  ಬಹುಮಾನ ಪಡೆದ ರಾಜ್ಯ, ರಾಷ್ಟ್ರದ ಪ್ರತಿಭಾವಂತ ಕಲಾವಿದರ ವಾದ್ಯ ಸಹಕಾರ, ಸಂಗೀತ ಸಂಯೋಜನೆಯಲ್ಲಿ ಜನಪ್ರಿಯ ಹಾಡೊಂದು ಜುಳು ಜುಳು ನದಿಯಾಗಿ ಹರಿದು ಲಕ್ಷಾಂತರ ಸಂಗೀತ ರಸಿಕರ ಸಂಗೀತ ದಾಹವನ್ನು ತಣಿಸಲು ಹೊರಬಂದಂತಿದೆ. ಹಳೆಯ ಹಾಡೊಂದು ಹೊಸ ಉಡುಪು ಧರಿಸಿ ಸಂಗೀತ ರಸಿಕರ ಎದುರು ತೆರೆದುಕೊಂಡ ರೀತಿ ಅಚ್ಚರಿ ಮೂಡಿಸುವಂತಿದೆ.

  ಮೂರನೇ ಅಲ್ಬಂಗೆ ಕೊಲ್ಲಾಪುರದ ಕೀಬೋರ್ಡ್ ಕಲಾವಿದ ವಿಕ್ರಮ ಪಾಟೀಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಗೋಕಾಕ ಎಲ್ ಡಿಎಸ್ ಮಾಲೀಕ ಶಂಕರ ಯಮಕನಮರಡಿ ಹಾಡಿನ ಸಂಗೀತ ದೃಶ್ಯಗಳನ್ನು ಸಂಕಲನ ಮಾಡಿದ್ದಾರೆ. ನ್ಯೂ ಸ್ಪರ್ಧಾ ರೆಕಾರ್ಡಿಂಗ್ ನ ಮಾಲೀಕರಾದ ಶಿವಾಜಿ ಪಾಟೀಲ ಅವರು ಹಾಡಿನ ಧ್ವನಿಮುದ್ರಣದಲ್ಲಿ ಮತ್ತೊಮ್ಮೆ ಅದ್ಭುತ ಪ್ರತಿಭೆ ಮೆರೆದಿದ್ದಾರೆ.

 ಸಾಮಾಜಿಕ ಜಾಲ ತಾಣಗಳಲ್ಲಿ  “ಮಿಂಚಾಗಿ ಮೂಡಿ ಬರುವೆ” ಅಲ್ಬಂ  ಮೋಡಿ ಮಾಡುತ್ತಿದೆ. ಮೆಲೋಡಿ ಆರ್ಕೆಸ್ಟ್ರಾ ಮೂಲಕ ಕಲಾವಿದ ರಿಯಾಜ್ ಚೌಗಲಾ ಮತ್ತು ಅವರ  ಶಿಷ್ಯ ಬಳಗದ ಶ್ರಮ ಮತ್ತೊಮ್ಮೆ ಸಾರ್ಥಕವಾಗಿದೆ.

 ಕಲಾವಿದ  ರಿಯಾಜ್ ಚೌಗಲಾ  ಅವರನ್ನು ಮೊ-  94481 10461 ನಲ್ಲಿ ಸಂಪರ್ಕಿಸಬಹುದು.

 ರಿಯಾಜ್ ಚೌಗಲಾ  ಅವರ ಸಿರಿಕಂಠದಲ್ಲಿಮಿಂಚಾಗಿ ಮೂಡಿ ಬರುವೆಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ.  ತಮ್ಮ ಮುಕ್ತಅಭಿಪ್ರಾಯ ದಾಖಲಿಸಲು ವೋಟ್ ಮಾಡಿ.

Leave a Reply

Your email address will not be published.