ಮಹದಾಯಿ ಪ್ರದೇಶಕ್ಕೆ ಗೋವಾ ತಂಡ ಕದ್ದು, ಮುಚ್ಚಿ ಬರುವ ಅಗತ್ಯವಿರಲಿಲ್ಲ: ಶಾಸಕ ಸತೀಶ ಜಾರಕಿಹೊಳಿ

 


* ಎಲ್ಲ ಪಕ್ಷಗಳಲ್ಲಿ ಟಿಕೇಟ್ ಆಕಾಂಕ್ಷಿಗಳು ಇದ್ದಾರೆ.

* ಎಲ್ಲ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಲಿದೆ.

* ಕುಟುಂಬ ರಾಜಕಾರಣ ಕುರಿತು ಪಕ್ಷದ ತೀರ್ಮಾನವೇ ಅಂತಿಮ.

* ಧಾರವಾಡದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ.

ಧಾರವಾಡ: ಮಹದಾಯಿ ಹಾಗೂ ಕಳಸಾ, ಬಂಡೂರಿ ಪ್ರದೇಶಕ್ಕೆ ಭೇಟಿ ನೀಡಿರುವ ಗೋವಾ ಸ್ಪೀಕರ್ ನೇತೃತ್ವದ ತಂಡದವರು ನಮಗೂ ತಿಳಿಸಿ ಅಲ್ಲಿಗೆ ಭೇಟಿ ನೀಡಬೇಕಿತ್ತು. ಅದಕ್ಕೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ನಾವೇ ಮಾಡುತ್ತಿದ್ದೆವು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಪ್ರದೇಶಕ್ಕೆ ಭೇಟಿ ನೀಡಲು ಬರುವವರಿಗೆ ತೊಂದರೆ ಇಲ್ಲ. ಅದನ್ನು ನೋಡಲು ಮುಕ್ತ ಅವಕಾಶವಿದೆ. ಆದರೆ, ಅವರು ಬರುವಾಗ ನಮಗೂ ವಿಷಯ ತಿಳಿಸಿ ಬರಬೇಕಿತ್ತು. ಹೀಗೆ ಕದ್ದು ಮುಚ್ಚಿ ಬರುವ ಅವಶ್ಯಕತೆ ಇರಲಿಲ್ಲ ಎಂದರು.

ನಮ್ಮ ರಾಜ್ಯ ಸರ್ಕಾರ ಯಾವುದೇ ಆದೇಶವನ್ನು ಉಲ್ಲಂಘಿಸಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಅಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪ್ಯಾಲೇಕರ್ ಅವರು ನಮ್ಮ ರಾಜ್ಯಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿರುವ ಹೇಳಿಕೆಗೆ ರಾಜ್ಯದ ಬಿಜೆಪಿ ಮುಖಂಡರೇ ಉತ್ತರ ನೀಡಬೇಕು ಎಂದರು.

ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿಯೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಪುನರುಚ್ಛರಿಸಿದ ಅವರು, ಯಮಕನಮರಡಿ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡಲಿದ್ದು, ನನ್ನ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ ಎಂದರು.

 

Leave a Reply

Your email address will not be published.