ಧಾರವಾಡದಲ್ಲಿ ಕೇವಲ ಮೂರು ದಿನದಲ್ಲೇ ನಿರ್ಮಾಣವಾಯಿತು ಇಂದಿರಾ ಕ್ಯಾಂಟೀನ್..!


ಧಾರವಾಡ: ಇಲ್ಲಿನ ಮಿನಿವಿಧಾನಸೌಧದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕೇವಲ ಮೂರು ದಿನಗಳಲ್ಲೇ ಪೂರ್ಣಗೊಂಡಿದ್ದು, ಇದರ ತಂತ್ರಜ್ಞಾನ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಪ್ರೀಕಾಸ್ಟ್ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ ಈ ಕ್ಯಾಂಟೀನಿಗೆ ಕಾರ್ಖಾನೆಯಲ್ಲಿ ಮೊದಲೇ ನಿರ್ಮಾಣಗೊಂಡ ಗೋಡೆ , ಚಾವಣಿ ಹಾಗೂ ನೆಲಹಾಸು ಬಳಸಲಾಗಿದೆ.

ಜ.15 ರಂದು ಪ್ರಾರಂಭವಾದ ಈ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಕೇವಲ ಮೂರು ದಿನಗಳಲ್ಲಿ ಪೂರ್ಣಗೊಂಡಿದೆ. ಇದ್ದಕ್ಕಿದ್ದಂತೆ ಎದ್ದು ನಿಂತಿರುವ ಕಟ್ಟಡ ಹಾಗೂ ತಂತ್ರಜ್ಞಾನವನ್ನು ಅಲ್ಲಿರುವ ಸರ್ಕಾರಿ ಕಚೇರಿಗಳ ನೌಕರರು ವೀಕ್ಷಿಸಲು ಬರುತ್ತಿರುವುದು ಸಾಮಾನ್ಯವಾಗಿದೆ.

ಕಟ್ಟಡ ನಿರ್ಮಾಣದ ತಂತ್ರಜ್ಞಾನ ಕುರಿತು ಮಾಹಿತಿ ನೀಡಿದ ಕೆಇಎಫ್ ಸಂಸ್ಥೆಯ ರಮೇಶ ಪರೇಕ್, ತಮಿಳುನಾಡಿನ ಕೃಷ್ಣಗಿರಿಮಠದಲ್ಲಿರುವ ಸಂಸ್ಥೆಯ ಕಾರ್ಖಾನೆಯಲ್ಲಿ ಮನೆಯ ಬಿಡಿ ಭಾಗಗಳು ತಯಾರಾಗಿವೆ. 40*40 ಅಡಿ ವಿಸ್ತೀರ್ಣದ ಈ ಕಟ್ಟಡ ಕೇವಲ ಎರಡು ದಿನಗಳಲ್ಲೇ ನಿರ್ಮಾಣ ಮಾಡಬಹುದು. ಇಲ್ಲಿ ಒಂದು ದಿನ ಹೆಚ್ಚಾಗಿದೆ ಎಂದರು.

ಕೇವಲ ಐದು ಮಂದಿ ಕಾರ್ಮಿಕರು ಕಟ್ಟಡ ನಿರ್ಮಿಸಲಿದ್ದಾರೆ. 80 ಟನ್ ಕ್ರೇನ್ ಸಹಾಯದಿಂದ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ನಿಲ್ಲಿಸಲಾಗಿದೆ. ತಳಪಾಯಕ್ಕೆ 18 ಬೃಹತ್ ಸ್ಲ್ಯಾಬ್ ಗಳನ್ನು ಬಳಸಲಾಗಿದೆ. 120 ಮಿ.ಮೀ. ದಪ್ಪದಾದ ಗೋಡೆಗಳಿಗೆ 15 ಸ್ಲ್ಯಾಬ್ ಗಳನ್ನು ಬಳಸಲಾಗಿದೆ. ಒಂದು ಪ್ರಮುಖ ಬೀಮ್ ಇದೆ. 10*3 ಮೀ ವಿಸ್ತೀರ್ಣದ ದೊಡ್ಡದಾದ ಮೂರು ಕಾಂಕ್ರೀಟ್ ಹಾಸುಗಳನ್ನು ಚಾವಣಿಗೆ ಹಾಸಲಾಗಿದೆ. ಇವೆಲ್ಲವುಗಳನ್ನು ಇಂಟರ್ ಕಾಲಿಂಗ್ ಮೂಲಕ ಜೋಡಿಸಲಾಗಿದೆ ಎಂದರು.

ಕ್ಯಾಂಟೀನ್ ಬಳಕೆಗೆ ನೀರು ಶೇಖರಿಸಲು ಎರಡು ಬೃಹತ್ ತೊಟ್ಟಿಗಳನ್ನೂ ಅಲ್ಲಿಯೇ ನಿರ್ಮಾಣ ಮಾಡಿಕೊಂಡು ಬರಲಾಗಿದೆ. ಹೊರ ಹಾಗೂ ಒಳ ಭಾಗದಲ್ಲಿ 12 ಪ್ರೀಕಾಸ್ಟ್ ಟೇಬಲ್ ಗಳನ್ನು ಹಾಕಲಾಗಿದೆ. ಅವಳಿನಗರದಲ್ಲಿ ಇನ್ನೂ 12 ಇಂಥದ್ದೇ ಕ್ಯಾಂಟೀನ್ ಗಳು ನಿರ್ಮಾಣವಾಗಲಿವೆ. ಎರಡು ಅಡುಗೆ ಕೋಣೆ ನಿರ್ಮಿಸಲಾಗಿದೆ. ಇಲ್ಲಿಂದಲೇ ಎಲ್ಲ ಕ್ಯಾಂಟೀನ್ ಗಳಿಗೆ ಸಿದ್ಧ ಆಹಾರ ಪೂರೈಕೆಯಾಗಲಿದೆ ಎಂದು ರಮೇಶ ತಿಳಿಸಿದರು.

ಕಟ್ಟಿಸಿದ ಮನೆಯಷ್ಟೇ ಬಾಳಿಕೆ ಬರುವ ಈ ಕಟ್ಟಡಕ್ಕೆ ನೀರು ಹಾಯಿಸಿ ಕ್ಯೂರಿಂಗ್ ಮಾಡುವ ಗೋಜು ಇಲ್ಲ. ವರ್ಷಗಟ್ಟಲೇ ಕಾಯುವ ಅಗತ್ಯವೂ ಇಲ್ಲ ಎಂದರು.

 

Leave a Reply

Your email address will not be published.