ದೃಶ್ಯ ಮಾಧ್ಯಮಗಳೇ…. ಒಂದಿಷ್ಟು ಕೇಳಿ…..


(ಮಾಧ್ಯಮ ಕ್ಷೇತ್ರ ಬದಲಾಗಿದೆ. ಅಷ್ಟೇ ವಿಸ್ತಾರವೂ, ವೈವಿಧ್ಯವೂ ಆಗುತ್ತಿದೆ. ಮಾಧ್ಯಮಗಳ ಉದ್ದೇಶ ಈಗ ಮಾಹಿತಿ,ಮನರಂಜನೆ, ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಜನರಿಗೆ ಬೇಕಾದುದನ್ನು ಪೂರೈಸುವುದಷ್ಟೇ ಮಾಧ್ಯಮಗಳ ಕೆಲಸ ಅಂದುಕೊಳ್ಳುವ ಸ್ಥಿತಿಯೂ ಈಗಿಲ್ಲ. ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ  ನಿಜವೆಂದು ನಂಬಿಸಲು ಹೊರಟರೆ ಜನರಿಗೆ ಅದೂ ಗೊತ್ತಾಗುತ್ತದೆ. ಇದು ಜಾಹೀರಾತು ಯುಗ, ಉತ್ಪನ್ನ ಮಾರಾಟವಾಗಲು ಇಷ್ಟು ಸಮರ್ಥನೆ ಬೇಕು ಎಂದು ನಂಬಿಸಲು ಹೊರಟರೆ ಅದೂ ಸಂಶಯಕ್ಕೆ ಕಾರಣವಾಗುತ್ತದೆ. ಒಟ್ಟಾರೆ ನಂಬಿಸುವ ಕೆಲಸಕ್ಕೆ ಇಳಿದರೆ ಸಂಶಯ ಶುರುವಾಗುತ್ತದೆ. ಅದು ಹಾಗಲ್ಲ, ಹೀಗೆ ಎಂದು ಹೇಳುತ್ತ ಸಮರ್ಥಿಸಿಕೊಳ್ಳುವುದನ್ನು ಜನರು ಪ್ರಶ್ನಿಸಲು ಶುರು ಮಾಡುತ್ತಾರೆ. ಒಂದು ವಿಷಯವನ್ನು ಎಲ್ಲ ದಿಕ್ಕುಗಳಿಂದಲೂ ನೋಡುವ ಜನರು ಎಲ್ಲ ಕಡೆಗೂ ಇದ್ದಾರೆ, ನಮ್ಮ ನಡೆ, ನುಡಿಗಳನ್ನು ಅವರು ಗಮನಿಸುತ್ತಾರೆ ಅನ್ನೋದಕ್ಕೆ ಇದು ಸಾಕ್ಷಿ. ಮಾಧ್ಯಮಗಳನ್ನು ತೆರೆದ ಕಣ್ಣುಗಳಿಂದ ನೋಡಿದವರೊಬ್ಬರು ತಮ್ಮ ಮುಕ್ತ  ಅಭಿಪ್ರಾಯಗಳನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. )

  ‘ನಾವು ಮಾರಾಟಕ್ಕಿಲ್ಲ’
ಹೊಸ ಟಿವಿ ನ್ಯೂಸ್ ಚಾನಲ್ ನವರ ಟ್ಯಾಗ್ ಲೈನ್

‘ಇದು ಯಾರ ಆಸ್ತಿಯೂ ಅಲ್ಲ’

ಇದು ಇನ್ನೊಂದು ಚಾನಲ್ ನ ಘೋಷವಾಕ್ಯ

‘ನಾವು ಸುಳ್ಳು ಹೇಳುವುದಿಲ್ಲ’
ಮತ್ತೊಂದು ಚಾನಲ್ ನ ಶೀರ್ಷಿಕೆ

‘ಇದು ಭರವಸೆಯ ಬೆಳಕು’
ಮಗದೊಂದು ಚಾನಲ್  ಉದ್ಘೋಷ.

‘ನೇರ ದಿಟ್ಟ ನಿರಂತರ..’
ಇದು ಮತ್ತೊಂದು ಚಾನಲ್ ನ ಘೋಷ ವಾಕ್ಯ.

‘ಇದು ನಿಮ್ಮ ಚಾನಲ್’                                                                                                                                                                          ಒಂದು ಚಾನಲ್ ಹೇಳಿಕೊಳ್ಳುವುದು.

ಸೂಕ್ಷ್ಮವಾಗಿ ಗಮನಿಸಿದರೆ ಈ ಟ್ಯಾಗ್ ಲೈನ್  ಘೋಷಣೆಗಳೇ ಇಂದಿನ ಟಿವಿ ನ್ಯೂಸ್ ಮಾಧ್ಯಮಗಳು ತಲುಪಿರುವ ಅಧೋಗತಿ- ಮಾಧ್ಯಮಗಳ ಬಗ್ಗೆ ಜನರಲ್ಲಿ ಇರುವ ಅಪನಂಬಿಕೆಯನ್ನು ಸೂಚಿಸುತ್ತದೆ.

ನಿಮ್ಮನ್ನು ಯಾರು ಕೇಳಿದರು ಸ್ವಾಮಿ,
ಇದು ಯಾರ ಆಸ್ತಿ, ನೀವು ಮಾರಾಟಕ್ಕಿಲ್ಲ, ನೀವು ಸುಳ್ಳು ಹೇಳುತ್ತೀರಿ, ನಿಮ್ಮ ಬಗ್ಗೆ ಭರವಸೆ ಇಲ್ಲ, ನಿಮ್ಮದು ದಿಟ್ಟತನ ಇಲ್ಲದ ಸುದ್ದಿ ಎಂದು. ಏಕೆ ನಿಮಗೆ  ಅನುಮಾನ ಶುರುವಾಗಿದೆ ?

ಅಷ್ಟಕ್ಕೂ ಪತ್ರಿಕಾ ಧರ್ಮ ಅಂದರೆ ಏನು? ಪ್ರಾಮಾಣಿಕತೆ, ನಿಷ್ಪಕ್ಷಪಾತವಾಗಿರುವುದು,  ಅಭಿವ್ಯಕ್ತಿ ಸ್ವಾತಂತ್ರ್ಯ, ನ್ಯಾಯ, ಸತ್ಯ, ವೈಚಾರಿಕತೆ ಪರವಾಗಿರುವುದು ಪತ್ರಿಕಾ ಧರ್ಮದ ಕರ್ತವ್ಯಗಳು. ಪತ್ರಿಕೆ ಧರ್ಮ, ಪಾರದರ್ಶಕತೆಯ ಇಂತಹ ನಡವಳಿಕೆ ಒಂದೇ ಆಗಿದೆ.  ಅದನ್ನು ಈಗ ಮತ್ತೆ ಮತ್ತೆ ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿ ಏಕೆ ಉಂಟಾಗಿದೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

 ಸುಳ್ಳು, ವಿಕೃತ, ವಿವೇಚನೆ ಇಲ್ಲದ ಸಣ್ಣ ಹುಡುಗರ ಬುದ್ಧಿ ನಿಮ್ಮದು.
ದೇಶದ ಈ ವರ್ಷದ ಆರ್ಥಿಕ ಸ್ಥಿತಿಗತಿಗಳನ್ನು ಜ್ಯೋತಿಷಿಗಳ ಮುಖಾಂತರ ನೀವು ನಿರ್ಧರಿಸುತ್ತೀರಿ,
ರಾಜಕೀಯ ಆಗುಹೋಗುಗಳನ್ನು ಸಂಖ್ಯಾಶಾಸ್ತ್ರದವರಿಂದ ಹೇಳಿಸುವಿರಿ.
ನೈಸರ್ಗಿಕ ವಿಕೋಪಗಳನ್ನು ಕವಡೆ ಶಾಸ್ತ್ರದವರಿಗೆ ಕೇಳುವಿರಿ.
ಮತೀಯ ಕೊಲೆಗಳನ್ನು ಚರ್ಚಿಸಲು ರಕ್ತದ ಕಲೆಗಳನ್ನು ಕೈಗೆ ಅಂಟಿಸಿಕೊಂಡಿರುವ ಧರ್ಮಾಂಧ  ಮತಾಂಧ ಭಯೋತ್ಪಾದಕರನ್ನೇ ಕರೆಸಿ ತಮ್ಮ ಅಮಾನವೀಯ ಕಾರ್ಯಗಳನ್ನು ಸಮರ್ಥಿಸಿಕೊಳ್ಳುವಂತೆ ವೇದಿಕೆ ಕೊಡುವಿರಿ.

ಒಂದೇ – ಎರಡೇ ನಿಮ್ಮ ಹುಚ್ಚಾಟಗಳು.
ಮುಗ್ಧ ಮೂರ್ಖ ಜನರ ಶಾಂತ ಸ್ವಭಾವ ಅಸಹನೆಯಿಂದ ಕುದಿಯುವಂತೆ ರಾಜಕಾರಣಿಗಳು ಮಾಡಿದರೆ,
ಅದಕ್ಕೆ ತುಪ್ಪ ಸುರಿಯುವ ಕೆಲಸ

ಮತಾಂಧರು ಮಾಡಿದರೆ,
ಅದಕ್ಕೆ ಬೆಂಕಿ ಹಚ್ಚುವ ಕೆಲಸ ನೀವು ಮಾಡುತ್ತಿರುವಿರಿ.
ನರಳಿ ಸುಡುತ್ತಿರುವುದು ಮಾತ್ರ ಹೆತ್ತ ತಾಯಿಯ ಕರುಳು.
ಸೂಕ್ಷ್ಮ ಮನಸ್ಸುಗಳ ನಿಮಗೆ ಇದಕ್ಕಿಂತ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ.
ಮಾಧ್ಯಮಗಳ ಚರ್ಚೆಗೆ ಹೊಸ ದಿಕ್ಕನ್ನು ಸೂಚಿಸುವ ಸಮಷ್ಟಿ ಪ್ರಜ್ಞೆಯ ಮಾರ್ಗ ಶೀಘ್ರ ಗೋಚರಿಸಲಿ ಎಂಬ ಆಶಯದೊಂದಿಗೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

(-ವಿವೇಕಾನಂದ. ಹೆಚ್.ಕೆ.)

Leave a Reply

Your email address will not be published.