ದೇಶದ ಮೊದಲ ವಿದ್ಯಾದೇವತೆˌ ಆಧುನಿಕ ಭಾರತದ ಶಿಕ್ಷಣಮಾತೆ ಸಾವಿತ್ರಿಬಾಯಿ ಫುಲೆ

ದೇಶದ ಮೊದಲ ವಿದ್ಯಾದೇವತೆˌ ಆಧುನಿಕ ಭಾರತದ ಶಿಕ್ಷಣಮಾತೆ ಸಾವಿತ್ರಿಬಾಯಿ ಫುಲೆ


( ಶೋಷಿತರ ಮೊದಲ ವಿದ್ಯಾದೇವತೆˌ ಆಧುನಿಕ ಭಾರತದ ಶಿಕ್ಷಣಮಾತೆˌ ನಿಸ್ವಾರ್ಥ ಸೇವೆಯ  ಮಾದರಿಯ ವ್ಯಕ್ತಿತ್ವ ಎಂದು ಗುರುತಿಸುವ ಸಾವಿತ್ರಿಬಾಯಿ ಫುಲೆ ಅವರ  188ನೇ ಜನ್ಮದಿನವನ್ನು ದೇಶಾದ್ಯಂತ ಜನವರಿ 3ರಂದು ಆಚರಿಸಲಾಗುತ್ತಿದೆ. ಸಾವಿತ್ರಿಬಾಯಿ ಅವರ ಸಾಧನೆ ಮನವರಿಕೆಯಾದ ಮೇಲೆ ಅವರ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಬೇಕು ಎಂದು ಬಹುಜನರು ಒತ್ತಾಯಿಸಲಾರಂಭಿಸಿದ್ದಾರೆ. 3 ಜನವರಿ 1831ರಲ್ಲಿ ಮಹಾರಾಷ್ಟದ ಸಾತಾರ ಜಿಲ್ಲೆಯ ನಯೀಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದ್ದ ಸಾವಿತ್ರಿಬಾಯಿ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ ತಾಯಿ ಎಂದೇ ಹೆಸರಾಗಿದ್ದಾರೆ.  ದೇಶಕ್ಕೆ ಫುಲೆ ದಂಪತಿಯ ಕೊಡುಗೆಯ ಬಗ್ಗೆ ಈಗ ಜಾಗೃತಿ ಮೂಡುತ್ತಿದೆ. ಇಂತಹ ತಿಳಿವಳಿಕೆ ನೀಡುವ ಕೆಲಸ ತಡವಾಗಿಯಾದರೂ ಆಗುತ್ತಿದೆ ಎನ್ನುವುದೇ ಸಮಾಧಾನ. ಸಾವಿತ್ರಿಬಾಯಿ ಕೈಗೊಂಡ ಸಾಮಾಜಿಕ ಕೆಲಸಗಳ ಬಗ್ಗೆ ತಿಳಿವಳಿಕೆ ನೀಡಲು ಈ ಪುಟ್ಟ ಬರೆಹದ ಮೂಲಕ ಪ್ರಯತ್ನಿಸಲಾಗಿದೆ. ತಮ್ಮ ಮುಕ್ತ ಅನಿಸಿಕೆಗಳಿಗೆ ಸ್ವಾಗತ )

ಕ್ರಿ.ಶ. 1800-1900ರ ಅವಧಿಯನ್ನು ಸಮಾಜದಲ್ಲಿ ಒಂದಿಷ್ಟು ತಿಳಿವಳಿಕೆ ಬಿತ್ತಿದ, ಶಿಕ್ಷಣದ ಮೂಲಕ ಸಮಾಜದ ಎಲ್ಲ ವರ್ಗಗಳಲ್ಲಿ ಅರಿವಿನ ಬೆಳಕು ಬೆಳಗಿಸಿದ ಮತ್ತು ದೇಶದ ದಿಕ್ಕು ಬದಲಿಸಿದ ಕಾಲ ಎಂದು ಗುರುತಿಸಲಾಗುತ್ತದೆ. ಆ ಅವಧಿಯಲ್ಲಿ ಸಮಾಜ  ನಂಬಿಕೊಂಡು ಬಂದ ಹಲವು ಕಟು ವಾಸ್ತವಗಳು ಪಲ್ಲಟಗೊಂಡದ್ದು ಇದಕ್ಕೆಲ್ಲ ಕಾರಣವಾಗಿದೆ.

  ಶಿಕ್ಷಣ ಒಂದು ವರ್ಗದ ಸ್ವತ್ತು ಎಂದು ಬಹುಜನರು ಒಪ್ಪಿಕೊಂಡ ಸತ್ಯವನ್ನು ಅಲುಗಾಡಿಸಿದ ಕಾಲ ಅದಾಗಿತ್ತು. ಒಂದು ವರ್ಗಕ್ಕೆ ಎಲ್ಲದರಲ್ಲೂ ಹೆಚ್ಚು ಪಾಲು ಸಿಗುವುದೇ ಸಾಮಾಜಿಕ ನ್ಯಾಯ ಎಂದು ಶತ ಶತಮಾನಗಳ ನಂಬಿಕೆಗೆ ಅದೇ ಕಾಲದಲ್ಲಿ ಕಲ್ಲು ಬಿತ್ತು.  ಅಸ್ಪೃಶ್ಯತೆ, ಶೋಷಣೆ, ತಾರತಮ್ಯದ ವಿರುದ್ಧ ಸಿಡಿದೆದ್ದು  ಸಮಾನತೆ, ಸ್ವಾತಂತ್ರ್ಯ, ಮಹಿಳೆಯರಿಗೆ ಶಿಕ್ಷಣ ನೀಡಲು ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ ಅವರು ಮೊಟ್ಟಮೊದಲು ದನಿ ಎತ್ತಿದ್ದು ಇದೇ ಕಾಲದಲ್ಲಿ.

   ಇದೇ ಕಾರಣದಿಂದ  ಸಾವಿತ್ರಿಬಾಯಿ ಅವರನ್ನು  ಶೋಷಿತರ ಮೊದಲ ವಿದ್ಯಾದೇವತೆˌ ಆಧುನಿಕ ಭಾರತದ ಶಿಕ್ಷಣಮಾತೆˌ ನಿಸ್ವಾರ್ಥ ಸೇವೆಗೆ ಅನುಕರಣನೀಯ ಮಾದರಿಯ ವ್ಯಕ್ತಿತ್ವ ಎಂದು ಗುರುತಿಸಲಾಗುತ್ತದೆ.

  ಮಾತೆ ಸಾವಿತ್ರಿ ಬಾ ಫುಲೆ ಅವರು ಪ್ರಜಾರಾಜ್ಯಕ್ಕೆ ಹೋರಾಡಿದ, ಸಾಮಾಜಿಕ ಪರಿವರ್ತನೆ ಚಳವಳಿಯ ರೂವಾರಿ ಜ್ಯೋತಿ ಬಾ ಫುಲೆ ಅವರ ಮಡದಿ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲ ತಾಲೂಕಿನ ನಯಿಂಗಾವ್ ಎಂಬ ಪುಟ್ಟ ಹಳ್ಳಿಯಲ್ಲಿ 3 ಜನವರಿ 1831ರಲ್ಲಿ ಸಾವಿತ್ರಿಬಾಯಿ  ಜನಿಸಿದರು. ತಂದೆ ಖಾಂಡೋಜಿ ನೇವಸೆ ಪಾಟೀಲ,  ತಾಯಿ ಲಕ್ಷ್ಮಿಬಾಯಿ. ಒಂಭತ್ತನೆಯ ವಯಸ್ಸಿನಲ್ಲಿಯೇ 14 ವರ್ಷದ ಜ್ಯೋತಿ ಬಾ ಫುಲೆ  ಅವರೊಂದಿಗೆ ಸಾವಿತ್ರಿಬಾಯಿ ಅವರ ವಿವಾಹವಾಯಿತು. 1840 ರಲ್ಲಿ ಅವರು ದಾಂಪತ್ಯ ಜೀವನ ಪ್ರವೇಶಿಸಿದರು.

ಓದುವ ಅದಮ್ಯ ಆಸೆಯಿದ್ದ ಸಾವಿತ್ರಿಬಾಯಿಯು ಮದುವೆಯಾದ ನಂತರ ತನಗೆ ಮಿಶನರಿ ನೀಡಿದ್ದ ಪುಸ್ತಕವನ್ನು ಹಿಡಿದು ಗಂಡನ ಮನೆಗೆ ಬರುತ್ತಾರೆ. ತನ್ನ ಕೈಹಿಡಿದ ಹೆಣ್ಣುಮಗಳಿಗೆ ಇರುವ ವಿದ್ಯಾಕಾಂಕ್ಷೆ ತಿಳಿದ ಜ್ಯೋತಿ ಬಾ ಫುಲೆ ಅವರು ತುಂಬಾ ಸಂತೋಷ ಪಡುತ್ತಾರೆ. ಹಾಗೆಯೇ ಓದು ಬರಹ ತಿಳಿಯದ ಸಾವಿತ್ರಿಬಾಯಿ ಅವರಿಗೆ  ಓದಿನ ಬಗ್ಗೆ ಇರುವ ಆಸಕ್ತಿಯನ್ನು ಅರಿತುಕೊಳ್ಳುತ್ತಾರೆ. ತೋಟದ ಕೆಲಸದಲ್ಲಿ ನಿರತರಾಗಿರುತ್ತಿದ್ದ ಪತಿಗೆ ಮಧ್ಯಾಹ್ನ ಹೊತ್ತಲ್ಲಿ ಬುತ್ತಿ ಹೊತ್ತು ಬಂದ ಪತ್ನಿ ಅಲ್ಲಿ  ಅಕ್ಷರಾಭ್ಯಾಸ ಮಾಡುತ್ತಾರೆ. ಜ್ಯೋತಿಬಾ ತಮ್ಮ ಮಡದಿಗೆ ಅಕ್ಷರ ಜ್ಞಾನ ಮಾಡಿಸುತ್ತಾರೆ.  ಸಾವಿತ್ರಿ ಬಾ ಫುಲೆಯವರಿಗೆ ತಮ್ಮ ಪತಿಯೇ ಮೊದಲ ಗುರುವಾಗಿ ಪರಿಣಮಿಸುತ್ತಾರೆ.

    ಸಾವಿತ್ರಿಬಾಯಿಗೆ ಯಾವ ಸಮಸ್ಯೆಗಳೂ ತಲೆ ದೋರಲಿಲ್ಲ. ಬಾಲ್ಯದಲ್ಲಿ  ಗಂಡನ ಕಳೆದುಕೊಂಡಿದ್ದ ಸಗುಣಾಬಾಯಿ ಕ್ಷೀರಸಾಗರ ಎಂಬ ಪೋಷಕ ಮಾತೆಯ ವಿಶಾಲ ಪ್ರೇಮˌ ದಯೆˌ ಅನುಕಂಪ ಜ್ಯೋತಿ ಬಾ ಫುಲೆಯವರನ್ನಷ್ಟೆ ಅಲ್ಲದೆ ಸಾವಿತ್ರಿ ಬಾ ಫುಲೆ  ಅವರನ್ನು ಮಗಳಂತೆ ಕಾಪಾಡಿಕೊಂಡಿತು. ಸಾವಿತ್ರಿ ಬಾ ಹಾಗೂ ಜ್ಯೋತಿ ಬಾ ಒಟ್ಟೊಟ್ಟಿಗೆ ಓದು ಬರಹ ನಡೆಸುತ್ತಿದ್ದುದ್ದನ್ನು ನೋಡಿ ಸಗುಣಬಾಯಿ ಸಂತೋಷಪಡುತ್ತಿದ್ದರು. ಹೀಗೆ ಗಂಡನ ಮನೆಯಲ್ಲಿ ಯಾವ ಅಡೆತಡೆಯೂ ಇಲ್ಲದೆ ತನ್ನ ವಿದ್ಯಾಭ್ಯಾಸ ಮುಂದುವರಿಸುವ  ಪ್ರೋತ್ಸಾಹದಾಯಕ ವಾತಾವರಣ ಸಾವಿತ್ರಿಬಾಯಿ ಅವರಿಗೆ ಸಿಗುತ್ತದೆ. ಈ ಎಲ್ಲದರ ಕಾರಣದಿಂದ ಸಾವಿತ್ರಿ ಬಾ ಶಿಕ್ಷಣವು 1841ರಿಂದ 1846 ರವರೆಗೆ ಮುಂದುವರಿಯುತ್ತದೆ.

  ಅಸ್ಪೃಶ್ಯರಷ್ಟೇ ಅಲ್ಲ ಹಿಂದುಳಿದವರಿಗೂ ವಿದ್ಯೆ ನಿಷೇಧಿಸಿದಂತಹ ಕಾಲ ಅದು. ದಲಿತ ಹುಡುಗರು, ಹುಡುಗಿಯರಿಗೆ ಶಾಲೆಯಲ್ಲಿ ಪ್ರವೇಶ ನೀಡುತ್ತಿರಲಿಲ್ಲ. ಅಸ್ಪೃಶ್ಯತೆಯ  ಕಠೋರ ಆಚರಣೆಯಿಂದ ತರಗತಿಯಲ್ಲಿ ಅಸ್ಪೃಶ್ಯ ವಿದ್ಯಾರ್ಥಿಗಳಿದ್ದರೆ ಉನ್ನತ ವರ್ಗದವರ ಮಕ್ಕಳನ್ನು ಶಾಲೆಗೆ ಸೇರಿಸುತ್ತಲೇ ಇರಲಿಲ್ಲ. ಇದರಿಂದ ಸಾವಿತ್ರಿ ಬಾಯಿಗೆ ಒಂದು ಆಲೋಚನೆ ಮೊಳೆಯುತ್ತದೆ.   ಮೊದಲು ಅಸ್ಪೃಶ್ಯ ಹೆಣ್ಣುಮಕ್ಕಳಿಗೆ ವಿದ್ಯೆ  ನೀಡಬೇಕು. ಮಹಿಳೆಯರು ಶಿಕ್ಷಣ ಪಡೆದರೆ ಅವರು ಮುಂದಿನ ಪೀಳಿಗೆಗೆ ಕಲಿಸಲು ಮುಂದಾಗುತ್ತಾರೆ ಎಂದುಕೊಂಡು ಪತಿಯೊಂದಿಗೆ 1847 ಮೇ 1 ರಂದು ಮಹಾರ ವಾಡದಲ್ಲಿ (ಅಸ್ಪ್ರುಶ್ಯರ ಕೇರಿ) ಅಸ್ಪೃಶ್ಯ ಹೆಣ್ಣುಮಕ್ಕಳಿಗಾಗಿ  ಅಹಿಲ್ಯಾಶ್ರಮ* ಎಂಬ ಹೆಸರಿನಲ್ಲಿ ಪಾಠ ಶಾಲೆಯೊಂದನ್ನು ತೆರೆದರು.  ನಂತರಲ್ಲಿ ಸಂಪ್ರದಾಯವಾದಿಗಳ ಪಿತೂರಿಯಿಂದ ಆ ಶಾಲೆಗಳು ಸಂಪೂರ್ಣವಾಗಿ ಮುಚ್ಚಿಹೋಗುತ್ತವೆ.

 ಕೆಲವರಿಗೆ ಮಾತ್ರ ಶಾಲೆಗಳನ್ನು ತೆರೆದು ಅದರ ಪರಿಣಾಮವನ್ನು ಎದುರಿಸಿದ ಜ್ಯೋತಿ ಬಾ ಫುಲೆ ಅವರು ನಂತರ ಎಲ್ಲ ಸಮುದಾಯದವರಿಗೂ ಪ್ರವೇಶ ನೀಡುವಂತಹ ಹೆಣ್ಣುಮಕ್ಕಳ ಶಾಲೆಯೊಂದನ್ನು ತೆರೆಯಲು  ಆಲೋಚಿಸುತ್ತಾರೆ. ಮುಖ್ಯವಾಗಿ ಈ ಶಾಲೆಯಲ್ಲಿ ತಮ್ಮ ಪತ್ನಿಯೇ  ಶಿಕ್ಷಕಿಯಾಗಿ ದುಡಿಯಬೇಕೆಂಬ ಹಂಬಲವೂ ಅವರಿಗೆ ಇರುತ್ತದೆ. ಈ ಚಿಂತನೆ ಸಾವಿತ್ರಿ ಬಾಯಿ ಅವರಿಗೂ ಒಪ್ಪಿಗೆಯಾಗುತ್ತದೆ. ಆದರೆ ಪೂರ್ಣಾವಧಿ ಶಿಕ್ಷಕಿಯಾಗಿ ದುಡಿಯಲು ಅದಕ್ಕೆ ಬೇಕಾದ ತರಬೇತಿಯನ್ನು ಸಾವಿತ್ರಿ ಬಾ ಪಡೆದುಕೊಂಡಿರುವುದಿಲ್ಲ. ಅದಕ್ಕಾಗಿ ಅವರು ಅಹಮದ್ ನಗರದಲ್ಲಿದ್ದ  ಮಿಚೆಲ್  ನಾರ್ಮಲ್ ಶಾಲೆಗೆ ಸೇರಿದರು.

ಆದರೆ ಹೆಣ್ಣುಮಕ್ಕಳ ಶಾಲೆಯನ್ನು ತೆರೆದು ವಿದ್ಯೆ ಕಲಿಸುವ ಫುಲೆಯವರ ಚಿಂತನೆಗೆ ವಿರೋಧ ವ್ಯಕ್ತವಾಗುತ್ತದೆ.  ಯಾವ ಬೆದರಿಕೆಗೂ ಬಗ್ಗದೆ  ಪತಿ ಪತ್ನಿಯರಿಬ್ಬರೂ ತಾವು ತೆಗೆದುಕೊಂಡ ನಿರ್ಧಾರವನ್ನು ಬದಲಿಸುವುದಿಲ್ಲ.  ಇದರ ಮೇಲೆ ಮನೆಯಲ್ಲೂ ಕೆಲವು ಅಡಚಣೆಗಳು ಎದ್ದು ನಿಲ್ಲುತ್ತವೆ.  ತಮ್ಮ ಸೊಸೆಯನ್ನು ಶಾಲೆ ಕಲಿಸಲು ಕಳುಹಿಸುವುದು ಹಾಗೂ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಸಿಕೊಳ್ಳುವುದು ಅವರ ಮಾವ ಗೋವಿಂದರಾವ್ ಫುಲೆಯವರಿಗೆ ಒಪ್ಪಿಗೆಯಾಗುವುದಿಲ್ಲ. . ಈ ಎಲ್ಲ ಕಾರಣಗಳಿಂದ ಮಗನನ್ನು ಮನೆಯಿಂದ ಹೊರಹೋಗುವಂತೆ ಆದೇಶಿಸುತ್ತಾರೆ.  ಜ್ಯೋತಿ ಬಾ ಫುಲೆಯವರು ತಮ್ಮ ಸ್ವಂತ ಸುಖ ಸಂತೋಷಕ್ಕಿಂತ ಸಮಾಜದ ಏಳಿಗೆಯೇ ಮುಖ್ಯವೆಂದು ಮನೆಯಿಂದ ಹೊರ ನಡೆದು ಬಿಡುತ್ತಾರೆ.

 ತನ್ನ ಬದುಕು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿ ವ್ಯರ್ಥಗೊಳ್ಳಬಾರದು, ತನ್ನ ಪತಿಯ ಆದರ್ಶಗಳು ತನ್ನದು ಕೂಡ ಆಗಿವೆ ಎಂದು  ತನ್ನ ಬದುಕಿನ ಗುರಿಯ ಜಾಡನ್ನು ಹಿಡಿದು    ಸಾವಿತ್ರಿ ಬಾ ಕೂಡ  ಪತಿ ಇದ್ದಲ್ಲಿಗೆ ಗಂಟುಮೂಟೆ ಸಮೇತ ಬಂದು ಬಿಡುತ್ತಾರೆ.

ಜ್ಯೋತಿ ಬಾ ಫುಲೆಯವರು ಒಮ್ಮೆ ಸಾರ್ವಜನಿಕ ಸಭೆಯೊಂದರಲ್ಲಿ ಎಲ್ಲಾ ಜಾತಿಯ ಹೆಣ್ಣುಮಕ್ಕಳಿಗೆ ಶಾಲೆಯನ್ನು ಪ್ರಾರಂಭಿಸುವ ತಮ್ಮ ಮನದ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಆಗ ಅದೇ ಸಭೆಯಲ್ಲಿದ್ದ ತಾತ್ಯಾಸಾಹೇಬ್ ಭಿಡೆ  ಎಂಬ ಮಾನವೀಯ ಮನಸ್ಸುಳ್ಳ ವ್ಯಕ್ತಿಯು ಶಾಲೆಯನ್ನು ತೆರೆಯಲು ಬ್ರಾಹ್ಮಣ ಕೇರಿಯಲ್ಲಿದ್ದ ತಮ್ಮ ವಿಶಾಲ ಮನೆಯನ್ನು ಕೊಡುಗೆಯಾಗಿ ನೀಡಲು ಆಶ್ವಾಸನೆ ನೀಡಿದರು. ಇದನ್ನು ಫುಲೆ ದಂಪತಿಗಳು ಬಹಳ ವಿಶ್ವಾಸಪೂರ್ವಕವಾಗಿ ಸ್ವೀಕರಿಸಿದರು.

 ಭಿಡೆಯವರ ಉದಾರ ಮನಸ್ಸಿನ ನೆರವಿನಿಂದ 1848 ಜನವರಿ ತಿಂಗಳಲ್ಲಿ ಪ್ರಥಮ ಹೆಣ್ಣುಮಕ್ಕಳ ಶಾಲೆಯನ್ನು ಸರ್ಕಾರದ ನೆರವಿಲ್ಲದೆ ಪ್ರಾರಂಭಿಸುತ್ತಾರೆ. ಕೇವಲ18 ವರ್ಷದ ಸಾವಿತ್ರಿ ಬಾಯಿ ಆ ಶಾಲೆಯ ಮುಖ್ಯೋಪಾಧ್ಯಾನಿಯಾಗಿ ಕೆಲಸಕ್ಕೆ ನೇಮಕಗೊಳ್ಳುತ್ತಾರೆ. ಅಷ್ಟೇ ಅಲ್ಲ ಇವರು ಮಹಾರಾಷ್ಟ್ರದಲ್ಲಿಯೇ ತರಬೇತಿ ಪಡೆದು ಶಿಕ್ಷಕಿಯಾದ ಮೊದಲ ಮಹಿಳೆ ಎಂದು  ಗುರುತಿಸಿಕೊಳ್ಳುತ್ತಾರೆ.

ಫುಲೆ ದಂಪತಿಗಳ ಅಪರಿಮಿತ ಪರಿಶ್ರಮ ಹಾಗೂ ನಿಸ್ವಾರ್ಥ ಹೋರಾಟದಿಂದ ಪ್ರಾರಂಭಿಸಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಎಲ್ಲಾ ವರ್ಗ ಮತ್ತು ಜಾತಿಯ ಮಕ್ಕಳಿಗೂ ಮುಕ್ತ ಅವಕಾಶ ನೀಡಲಾಗುತ್ತದೆ.  ಪ್ರಾರಂಭದಲ್ಲಿ ಈ ಶಾಲೆಗೆ ಒಟ್ಟು ಒಂಭತ್ತು ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಉನ್ನತ ವರ್ಗಕ್ಕೆ ಸೇರಿದ ಬ್ರಾಹ್ಮಣˌ ಶೆಣ್ವಿ ˌ ಪ್ರಭು ಹೆಸರಿನ ಜಾತಿಯವರನ್ನು ಒಳಗೊಂಡಂತೆ ಎಲ್ಲರೂ ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಆದರೂ ಸಂಪ್ರದಾಯಸ್ಥ ಜನರು ಸಾವಿತ್ರಿ ಬಾಯಿ ಅವರನ್ನು ಹಿಂಬಾಲಿಸಿ ಅಸಹ್ಯವಾಗಿ ಮಾತನಾಡುತ್ತಿದ್ದರು.

  ಶಾಲೆಗೆ ಹೋಗುವಾಗ ಬರುವಾಗ ಅವರ ಮೈಮೇಲೆ ಸಗಣಿ ನೀರುˌ ಕೊಳೆತ ಮೊಟ್ಟೆˌ ಟೊಮೆಟೊ ಎಸೆದು ಅವಮಾನಿಸುತ್ತಿದ್ದರು. ಇದಾವುದಕ್ಕೂ ಏನೊಂದು ಪ್ರತಿಕ್ರಿಯಿಸದ ಸಾವಿತ್ರಿ ಬಾ  ನಾನು ನಮ್ಮ ಸೋದರಿಯರ ಸೇವೆ ಮಾಡುತ್ತಿದ್ದೇನೆˌ ನನ್ನ ಮೇಲೆ ಎರಚುವ ಸಗಣಿˌ ತೂರುವ ಕಲ್ಲುಗಳನ್ನು ಹೂವೆಂದು ತಿಳಿಯುತ್ತೇನೆ  ಎಂದು ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳುತ್ತಿದ್ದರು. ಈ ಮಾತುಗಳು ಸಾವಿತ್ರಿ ಬಾ ಅವರ ತಾಳ್ಮೆಯನ್ನು ಪ್ರತಿಬಿಂಬಿಸುತ್ತವೆ. ನಂತರ ತಮ್ಮ ಪತಿ ಜ್ಯೋತಿ ಬಾ ಫುಲೆಯವರ ಸಲಹೆಯಂತೆ ತಾವು ಕೆಲಸಕ್ಕೆ ಹೋಗುವಾಗ ಉಟ್ಟ ಸೀರೆಯಲ್ಲದೆ ಬೇರೊಂದು ಸೀರೆಯನ್ನು ತೆಗೆದುಕೊಂಡು ಹೋಗಲಾರಂಭಿಸಿದರು. ಹೋಗುವಾಗ ಬರುವಾಗ ಸಗಣಿ ನೀರಿನ ಸೀರೆಯನ್ನು ಉಟ್ಟುಬರಲು ತೀರ್ಮಾನಿಸಿದರು. ಹೀಗೆ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಪ್ರಾರಂಭಿಸಿದ ಈ ಶಾಲೆ 1848 ರ ಹೊತ್ತಿಗೆ ನಲವತ್ತೈದು ವಿದ್ಯಾರ್ಥಿನಿಯರನ್ನು ಹೊಂದುವಷ್ಟು ಪ್ರಗತಿಯನ್ನು ಸಾಧಿಸಿತು.

ಹೀಗೆ ಫುಲೆ ದಂಪತಿಗಳಿಂದ 1848 ರಿಂದ 1852 ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ಹದಿನೆಂಟು ಶಾಲೆಗಳು ಪ್ರಾರಂಭವಾದವು. ಇದರಲ್ಲಿ ಅಸ್ಪೃಶ್ಯ  ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶಾಲೆಗಳುˌ ರೈತರು ಮತ್ತು ಸ್ತ್ರೀ ಕೂಲಿಕಾರ್ಮಿಕರಿಗೆ ರಾತ್ರಿ ಶಾಲೆಗಳು ಕೂಡ ಸೇರಿದವು. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದ ಹುಡುಗರಿಗಿಂತ ಫುಲೆಯವರ ಶಾಲೆಗಳಲ್ಲಿ ಕಲಿಯುವ ಹುಡುಗಿಯರ ಸಂಖ್ಯೆ ಅಧಿಕವಾಗಿತ್ತು. ಈ ಸುದ್ಧಿ *ಪೂನಾ ಅಬ್ಸರ್ವರ್* ಪತ್ರಿಕೆಯಲ್ಲಿ ಮೇ 29, 1852ರಲ್ಲಿ ಪ್ರಕಟವಾಗಿ ಜನರ ಗಮನವನ್ನು ಸೆಳೆಯಿತು.

  ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಫುಲೆ ದಂಪತಿಗಳನ್ನು ಶಿಕ್ಷಣ ಇಲಾಖೆಯು 16 ನವೆಂಬರ್ˌ 1852 ರಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಸನ್ಮಾನಿಸಲಾಯಿತು. ಸಾವಿತ್ರಿ ಬಾ ಫುಲೆಯವರದು ಬಿಡುವಿಲ್ಲದ ಕರ್ಮ ಇವರು ಶಿಕ್ಷಕಿಯಾಗಿˌ ಪ್ರಧಾನ ಶಿಕ್ಷಕಿಯಾಗಿˌ ಸಂಚಾಲಕಿಯಾಗಿ ನೂರೆಂಟು ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ಶಿಸ್ತಿನಿಂದ ನಿಭಾಯಿಸುತ್ತಿದ್ದರು. ಸ್ವತಃ ಇವರೇ ಪಠ್ಯಕ್ರಮಗಳನ್ನು ಸಿದ್ಧಪಡಿಸುತ್ತಿದ್ದರು. ಅವರ ಬೋಧನಾ ಕೌಶಲ್ಯಕ್ಕೆ ಬ್ರಿಟಿಷ್ ಅಧಿಕಾರಿಗಳೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.  ಬ್ರಿಟಿಷರೊಂದಿಗೆ ಇಂಗ್ಲೀಷಿನಲ್ಲಿ ಮಾತುಕತೆ ನಡಸುವಷ್ಟು ಸಾಮರ್ಥ್ಯ ಪಡೆದುಕೊಂಡಿದ್ದರು. ಪತ್ನಿಯ ಈ ಸಾಧನೆಯನ್ನು ಕಂಡು ಜ್ಯೋತಿ ಬಾ ಫುಲೆಯವರು ತುಂಬ ಹೆಮ್ಮೆ ಪಡುತ್ತಿದ್ದರು. ನಾನೇನಾದರೂ ಸಾಧಿಸಿದ್ದರೆ ಯಶಸ್ಸನ್ನು ಕಂಡಿದ್ದರೆ ಅದರಲ್ಲಿ ಅವಳಿಗೆ ಸಮಪಾಲು ದೊರೆಯಬೇಕೆಂದು ಎಲ್ಲರಲ್ಲಿಯೂ ಹೇಳುತ್ತಿದ್ದರು.

  1852 ರಲ್ಲಿ ಸರಕಾರದ ಶಿಕ್ಷಣ ಇಲಾಖೆ ಜ್ಯೋತಿ ಬಾ ಫುಲೆಯವರಿಗೆ ಸನ್ಮಾನ ನೀಡಿ ಗೌರವಿಸಿದ ಸಂದರ್ಭದಲ್ಲಿ ತಮ್ಮ ಪತ್ನಿಯ ಬಳಿ ಬಂದು ನಿಜವಾಗಿಯೂ ಸತ್ಕಾರ-ಸಮ್ಮಾನವಲ್ಲವೂ ನಿನಗೆ ಸಲ್ಲಬೇಕು. ನಾನು ನಾಮ ಮಾತ್ರಕ್ಕೆ ಪಾಠ ಶಾಲೆಗಳನ್ನು ಶುರು ಮಾಡಿದವನು. ಎಲ್ಲಾ ಸಂಕಷ್ಟಗಳನ್ನು  ಅಡ್ಡಿ ಆತಂಕಗಳನ್ನು ಎದುರಿಸಿ ಪಾಠ ಶಾಲೆಗಳನ್ನು ನಡೆಸಿದವಳು ನೀನು. ನಿನ್ನ ಸೇವಾಭಾವನೆ ನನ್ನಲ್ಲಿ ಹೆಮ್ಮೆಯನ್ನುಂಟು ಮಾಡಿದೆ ಎಂದು ಹೇಳುತ್ತಾರೆ.

  ಪತಿಯಂತೆ ಪತ್ನಿ ಸಾವಿತ್ರಿ ಬಾಯಿ ಫುಲೆಯವರನ್ನು ಬ್ರಿಟಿಷ್ ಸರ್ಕಾರ ಫೆಬ್ರವರಿ12ˌ 1853ರಲ್ಲಿ ಸನ್ಮಾನಿಸಿ *ಉತ್ತಮ ಶಿಕ್ಷಕಿ* ಎಂದು ಘೋಷಿಸಿ ಗೌರವಿಸಿತು.

 ಮಹಿಳೆಯರಲ್ಲಿ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ಜಾಗೃತಿ  ಮೂಡಿಸುವ ಸಲುವಾಗಿ 1852ರಲ್ಲಿ *ಮಹಿಳಾ ಸೇವಾಮಂಡಳಿ* ಯನ್ನು ಸ್ಥಾಪಿಸುತ್ತಾರೆ. ಸಾವಿತ್ರಿಬಾಯಿಯವರು ಸ್ಥಾಪಿಸಿದ ಈ ಮಹಿಳಾ ಸೇವಾ ಮಂಡಳಿಯು ದೇಶದ ಮೊತ್ತಮೊದಲ ಮಹಿಳಾ ಸೇವಾ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಸಹಾಯಕ ಹೆಣ್ಣು ಮಕ್ಕಳು ಜೀವ ಕಳೆದುಕೊಳ್ಳುವ ಪ್ರಸಂಗ ಎದುರಾಗುವ ಸಾಧ್ಯತೆಗಳನ್ನು ಅರಿತಿದ್ದ ಸಾವಿತ್ರಿ ಬಾ ಫುಲೆಯು ಅಂಥ ಅಬಲೆ ಹೆಣ್ಣುಮಕ್ಕಳಿಗಾಗಿ ತಮ್ಮ ಪತಿಯೊಡಗೂಡಿ ತಮ್ಮ ಮನೆಯಲ್ಲಿಯೇ 18 ಜನವರಿ  1853ರಲ್ಲಿ ಬಾಲ್ಯ ಹತ್ಯಾ ನಿಷೇಧಕ ಪ್ರಸೂತಿ ಗೃಹ ಪ್ರಾರಂಭಿಸುತ್ತಾರೆ.

ಸಾವಿತ್ರಿ ಬಾ ಫುಲೆ ಅವರು ಮೊದಲ ಶಿಕ್ಷಕಿಯಷ್ಟೆ ಅಲ್ಲ. ಮೊದಲ ಕವಯಿತ್ರಿಯೂ ಹೌದು. ಅವರು ಶಿಕ್ಷಣದ ಪ್ರಾಮುಖ್ಯತೆಯನ್ನು ಕುರಿತು ಬರೆದ ಸಾಲುಗಳು ಹೀಗಿವೆ..

ನಡೆ ! ಶಿಕ್ಷಣ ಪಡೆ !
ನಡೆ ! ಶಿಕ್ಷಣ ಪಡೆ
ಸ್ವಾವಲಂಬಿಯಾಗುˌ ಪರಿಶ್ರಮಿಯಾಗು
ದುಡಿದು ಜ್ಞಾನˌ ಸಿರಿವಂತಿಕೆಯ ಗಳಿಸು
ತಿಳಿವಳಿಯೂ ಇಲ್ಲದಿರೆ ಎಲ್ಲಾ ವ್ಯರ್ಥ
ಜಡತೆ ಬೇಡˌ ನಡೆˌ ಶಿಕ್ಷಣ ಪಡೆ
ದಮನಿತರˌ ಪರಿತ್ಯಾಜ್ಯರ ದುಃಖ ಕೊನೆಗೊಳಿಸು
ಕಲಿಯುವ ಸುವರ್ಣಾವಕಾಶ ಇದೆ ನಿನಗೆ
ಓದಿ ಜಾತಿ ಸಂಕೋಲೆಗಳ ಭೇದಿಸುವವನಾಗು
ವೈದಿಕ ಶಾಸ್ತ್ರದ ಕಾಲ್ತೊಡರುಗಳ ಕಿತ್ತೆಸೆದು
ನಡೆˌ ನಡೆ !

ಸರ್ವರಿಗೂ ಶಿಕ್ಷಣದ ಬೆಳಕನ್ನು ನೀಡಲು ಹೋರಾಡಿದ ವಿದ್ಯಾದೇವತೆ ಮಾತೆ ಸಾವಿತ್ರಿ ಬಾ ಫುಲೆಯವರು ಸಮಾನತೆಯನ್ನು ಬಯಸಿದವರು. ಸಾಮಾಜಿಕವಾಗಿ ಕೆಳಹಂತದಲ್ಲಿದ್ದ ಜನರನ್ನು ಎಚ್ಚರಗೊಳಿಸಲು ಅವರ ಕವನದ ಸಾಲುಗಳು ಇಂತಿವೆ.

ಸೋದರರೆ ! ಏಳಿ ಎಚ್ಚೆತ್ತುಕೊಳ್ಳಿ
ತಲೆಮಾರಿನ ದಾಸ್ಯ ಶೃಂಖಲೆಯ ಕಿತ್ತು ಬೀಸಾಡಿ
ಓದು—ಬರಹ ಕಲಿಯಲಾದರೂ ಎಚ್ಚೆತ್ತುಕೊಳ್ಳಿ

“ಕಬ್ಬ ಫುಲೆ” (ಕಾವ್ಯ ಅರಳಿತು) ಎಂಬುದು 1854ರಲ್ಲಿ ಪ್ರಕಟವಾದ ಸಾವಿತ್ರಿಬಾ ಫುಲೆಯವರ ಮೊದಲ ಕವನ ಸಂಕಲನ. ಇದರಲ್ಲಿ ಒಟ್ಟು 41 ಕವನಗಳಿವೆ.

 ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿˌ ಸ್ತ್ರೀ ವಿಮೋಚನೆಯ ಸಮರ್ಥಕಿˌ ಪ್ರಥಮ ಕವಯಿತ್ರಿˌ ಶೋಷಿತರ ನಾಲಿಗೆಯಲ್ಲಿ ಅಕ್ಷರ ಅರಳಿಸಿದ ವಿದ್ಯಾಮಾತೆ ಎಂದೇ ಸಾವಿತ್ರಿ ಬಾ ಹೆಸರಾದರು.

 ಸಾವಿತ್ರಿಬಾಯಿ ಫುಲೆಯವರು 10 ಮಾರ್ಚ್  1897ರಲ್ಲಿ ತಮ್ಮ ಬದುಕಿನ ಯಾತ್ರೆಯನ್ನು ಕೊನೆಗೊಳಿಸಿದರು. ಯಾವುದೇ ವರ್ಗದ ಮಹಿಳೆಯೇ ಇರಲಿ, ಇವತ್ತು ಕೈಯೆತ್ತಿ ಮುಗಿಯಬೇಕಾಗಿರುವುದುˌ ತಪ್ಪದೇ ಸ್ಮರಿಸಬೇಕಿರುವುದು ಶಿಕ್ಷಣದ ಬೆಳಕನ್ನು ನೀಡಿ ಬದುಕಿನ ಕತ್ತಲೆ ಕಳೆದ ನಿಸ್ವಾರ್ಥ ತ್ಯಾಗಮಯಿ ಸಾವಿತ್ರಿ ಬಾ ಫುಲೆ ಅವರನ್ನು ಎಂಬುದನ್ನು  ತಿಳಿದವರೆಲ್ಲ ಹೇಳುತ್ತಾರೆ. ಈಗಲಾದರೂ ಈ ಮಾತೆಯನ್ನು ಸ್ಮರಿಸಿˌ ಅವರಿಗೆ ಸಿಗಬೇಕಾದ ಗೌರವವನ್ನು ನೀಡಬೇಕಾದುದು ಎಲ್ಲರ ಕರ್ತವ್ಯ. .

ಎಲ್ಲರಿಗೂ  ಸಾವಿತ್ರಿ ಬಾ ಫುಲೆಯವರ ಜನ್ಮದಿನದ ಶುಭಾಷಯಗಳು

(-ದೇವರಾಜು.ಕೆ.ಮಲಾರ)

Leave a Reply

Your email address will not be published.