ಇತಿಹಾಸ ತಿಳಿಯಿರಿ: ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರಿಗೆ ದಕ್ಕಿದ್ದು ಆತ್ಮಗೌರವದ ಗೆಲುವು !

ಕೋರೆಗಾಂವ್ ವಿಜಯಸ್ತಂಭ

ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಈಗ ಸುದ್ದಿಯಲ್ಲಿದೆ. ದಲಿತರ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರ, ಸಾವಿನಿಂದ ಮತ್ತೆ ದೇಶದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದೆ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ  1ನೇ ಜನವರಿ 1818ರಂದು ಭೀಮಾ ಕೋರೆಗಾಂವ್ ನಲ್ಲಿ ನಡೆದ ಐತಿಹಾಸಿಕ ಯುದ್ದದಲ್ಲಿ ಬ್ರಿಟಿಷರೊಂದಿಗೆ ಸೇರಿ ದಲಿತರು ಗೆದ್ದಿದ್ದರು. ದಲಿತರ ಗುಂಪಿನ ಸಹಾಯ ಪಡೆದು ಬ್ರಿಟಿಷ್ ಸೈನಿಕರು ಗೆಲುವು ಸಾಧಿಸಿದ್ದರು. ಇದು ತಮ್ಮ ಆತ್ಮಗೌರವದ ಗೆಲುವು ಎಂದು ಅಸ್ಪೃಶ್ಯ ವರ್ಗದ ದಲಿತರು ಕೋರೆಗಾಂವ್ ನಲ್ಲಿ ಪ್ರತಿವರ್ಷ ಜನವರಿ 1ರಂದು ಸಂಭ್ರಮಿಸುವುದು ಸಂಪ್ರದಾಯವಾಗಿದೆ. ಈ ವರ್ಷ ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ನಡೆಯುತ್ತಿದೆ.

  ಭೀಮಾ ಕೋರೆಗಾಂವ್ ನಲ್ಲಿ ನಡೆದ ಈ  ಐತಿಹಾಸಿಕ ಯುದ್ದದ ಈ ವರ್ಷದ ವಿಜಯೋತ್ಸವದ ವೇಳೆ  ಜನವರಿ 1ರಂದು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಆ ನಂತರ  ಪುಣೆ ಹಾಗೂ ಮುಂಬೈನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಾಗಾಗಿ ಭೀಮಾ ಕೋರೆಗಾಂವ್ ಮತ್ತೊಮ್ಮೆ ದೇಶಾದ್ಯಂತ ಸುದ್ದಿಯಲ್ಲಿದೆ.

 ಭೀಮಾ ಕೋರೆಗಾಂವ್ ಯುದ್ಧ ಎರಡು ಕಾರಣಗಳಿಂದ ಇತಿಹಾಸದಲ್ಲಿ ಮಹತ್ವ ಪಡೆದಿದೆ. ಈ ಯುದ್ಧ ದಲಿತರ ಆತ್ಮಗೌರವ ಮತ್ತು ಹಕ್ಕುಗಳ ಸಂರಕ್ಷಣೆಗಾಗಿ ನಡೆದ ಹೋರಾಟಕ್ಕೆ ಸಂದ ಜಯ ಎನ್ನುವುದು ಮೊದಲ ಕಾರಣವಾದರೆ, ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತಕ್ಕೆ ಕೊನೆ ಹಾಡಿದ ಯುದ್ಧ ಎಂಬುದು ಎರಡನೇ ಕಾರಣವಾಗಿದೆ.  ಹಾಗಾಗಿ ಈಗ ದಲಿತರ ಆತ್ಮಗೌರವ ಹಾಗೂ ಹಕ್ಕುಗಳ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಗಳನ್ನು ಈ ವರ್ಷಾಚರಣೆ ಹುಟ್ಟು ಹಾಕಿದೆ.

  1818ರ ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್  ಯುದ್ಧದ ಇತಿಹಾಸ ರೋಚಕವಾಗಿದೆ.  ಸುಮಾರು 874 ಬ್ರಿಟಿಷ್ ಸೈನಿಕರು ಮತ್ತು ಮಹಾರ್ ಜನಾಂಗದ ಮಹರ್ ಯುವ ಪಡೆಯ ಬಲಿಷ್ಠ ತಂಡವೊಂದು 28,000 ಸೈನ್ಯ ಬಲದ ಪೇಶ್ವೆಗಳ ವಿರುದ್ಧ ನಿರಂತರ 12  ಗಂಟೆ  ಯುದ್ಧ ಮಾಡಿ ವಿಜಯ ಸಾಧಿಸಿದ ಇತಿಹಾಸ ಅದು. ಅದರ ಹಿನ್ನೆಲೆಯೂ ಕುತೂಹಲಕಾರಿಯಾಗಿದೆ.

 ಬ್ರಿಟಿಷರೊಂದಿಗೆ ಯುದ್ಧ ನಡೆಯುವುದು ಖಚಿತವಾಗುತ್ತಿದ್ದಂತೆ ಮಹಾರ್ ಜನಾಂಗದ ಸಿದ್ಧಾಂಕ್ ಮಹರ್ ಎಂಬ ಯುವಕ ಪೇಶ್ವೆಗಳ ಬಳಿ ಬರುತ್ತಾನೆ.  ಬ್ರಿಟಿಷರು ನಮ್ಮ ದೇಶದವರಲ್ಲ, ನಾವು ಪೇಶ್ವೆಗಳಿಗೆ ನೆರವು ನೀಡುತ್ತೇವೆ ಎಂದು ಮನವಿ ಮಾಡುತ್ತಾನೆ.  ಪೇಶ್ವೆಗಳು  ಮನವಿಯನ್ನು ತಿರಸ್ಕರಿಸುತ್ತಾರೆ.  ಪೇಶ್ವೆಗಳು ಇಲ್ಲವೇ ಬ್ರಿಟಿಷರು ಹೀಗೆ ಯಾರ ಪರ ಹೋರಾಡಿದರೂ ನಿಮಗೆ ನಿಮ್ಮ ಹಕ್ಕು ಸಿಗುವುದಿಲ್ಲ ಎಂದು ಪೇಶ್ವೆಗಳು ಹೇಳಿ ಮಹಾರ್ ಜನಾಂಗದ ಯುವಕರನ್ನು  ಹೀಯಾಳಿಸಿ ಅವಮಾನ ಮಾಡುತ್ತಾರೆ.

 ಪೇಶ್ವೆಗಳ ದುರಹಂಕಾರದಿಂದ ಮಹರ್ ಸೈನಿಕರ  ಆತ್ಮಗೌರವ ಕೆರಳಿ ನಿಲ್ಲುತ್ತದೆ. ಮಹರ್ ಜನಾಂಗದ ಯುವಕರು ಸೈನಿಕರಾಗಿ ಬ್ರಿಟಿಷರೊಂದಿಗೆ ಸೇರಿಕೊಳ್ಳುತ್ತಾರೆ. ಶಿರೂರಿನಿಂದ 27 ಮೈಲು ದೂರದ ಭೀಮಾ ಕೋರೆಗಾಂವ್ ನವರೆಗೆ ಮಹರ್ ಸೈನಿಕರು  ನಡೆದುಕೊಂಡೇ ಬರುತ್ತಾರೆ.  ಸತತ 12 ಗಂಟೆ  ಸೈನಿಕರು ರಣರಂಗದಲ್ಲಿ ಕಾದಾಡುತ್ತಾರೆ.  ಈ ಯುದ್ಧದಲ್ಲಿ ಬ್ರಿಟಿಷರೊಂದಿಗೆ ಸೇರಿದ ಮಹರ್ ಪಡೆಗೆ ಗೆಲುವಾಗುತ್ತದೆ.

  ಮಹಾರಾಷ್ಟ್ರದಲ್ಲಿ ತಳ ಊರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಲು ಭೀಮಾ ಕೋರೆಗಾಂವ್ ಯುದ್ಧ ನೆರವಾಯಿತು ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಹಾಗಾಗಿ  ಪ್ರತಿವರ್ಷ ಯುದ್ಧದ ವಿಜಯವನ್ನು  ನೆನಪಿಸಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ  ಪ್ರತಿವರ್ಷ ಜನವರಿ 1ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರೂ ಸಹ ಭೀಮಾ ಕೋರೆಗಾಂವ್ ಗೆ  ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು.

ಯುದ್ಧ ಗೆದ್ದ ನಂತರ ನಿರ್ಮಿಸಿದ ಮಹರ್ ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ವಿಜಯಸ್ತಂಭವನ್ನು  ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಮರು ನಿರ್ಮಿಸಲಾಗಿದೆ. ಮೂಲ ಸ್ತಂಭದಲ್ಲಿ 22 ಮಹರ್ ಸೈನಿಕರ ಸಾಹಸದ ಬಗ್ಗೆ ವಿವರಣೆ ಇತ್ತು. ಮಹರ್  ಪಡೆಯ ಸಾಹಸಗಾಥೆಗೆ ವಿಜಯಸ್ತಂಭ ಸಾಕ್ಷಿಯಾಗಿ ನಿಂತಿತ್ತು.  ಆಗ ವಿಜಯಸ್ತಂಭ ಇದ್ದ ಸ್ಥಳದಲ್ಲೇ  ಅದೇ ಮಾದರಿಯಲ್ಲಿ ಸ್ಮಾರಕವನ್ನು ಮರು ನಿರ್ಮಿಸಿ ವೀರ ಸೈನಿಕರ ತ್ಯಾಗ, ಬಲಿದಾನ, ಹೋರಾಟದ ಕೆಚ್ಚು ಮತ್ತು ಉದ್ದೇಶವನ್ನು  ಪ್ರತಿವರ್ಷ ಸ್ಮರಿಸಲಾಗುತ್ತದೆ.

  (ಮುತ್ತು)

2 Responses to "ಇತಿಹಾಸ ತಿಳಿಯಿರಿ: ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರಿಗೆ ದಕ್ಕಿದ್ದು ಆತ್ಮಗೌರವದ ಗೆಲುವು !"

 1. ಭರತ   January 3, 2018 at 7:29 pm

  ವಿಜಯಸ್ತಂಭ ಈವರೆಗೂ ಇದೆ , ದಯವಿಟ್ಟು ನಿಮ್ಮ ಇತಿಹಾಸದ ಜ್ಞಾನವನ್ನು ತಿದ್ದಿಕೊಳ್ಳಿ.

  Reply
  • Mrityunjay Yallapurmath   January 4, 2018 at 12:06 pm

   ಈಗಿರುವ ವಿಜಯ ಸ್ತಂಭ ಅದೇ ಸ್ಥಳದಲ್ಲಿ ಮತ್ತು ಅದೇ ಮಾದರಿಯಲ್ಲಿ ಮರು ನಿರ್ಮಾಣ ಮಾಡಿದ್ದು ಎಂದು ಇತಿಹಾಸ ಬಲ್ಲವರು ಹೇಳುತ್ತಾರೆ.ಒಟ್ಟಾರೆ ಈ ವಿಜಯಸ್ತಂಭ ಮಹಾರ್ ಸೈನಿಕರ ತ್ಯಾಗ, ಬಲಿದಾನಕ್ಕೆ ಸಾಕ್ಷಿಯಾಗಿ ಈಗಲೂ ಅಲ್ಲಿದೆ.

   Reply

Leave a Reply

Your email address will not be published.