ಜೀವ ತೆಗೆಯುವ ಧರ್ಮ, ಜ್ಞಾನ, ನಮಗೆ ಬೇಡ: ಶಾಸಕ ಪುಟ್ಟಣ್ಣಯ್ಯ

ಕುಪ್ಪಳ್ಳಿಯಿಂದ ಆಗಮಿಸಿದ ವಿಶ್ವಮಾನವ ಸಂದೇಶ ಜಾಥಾದ ಕುವೆಂಪು ಭಾವಚಿತ್ರಕ್ಕೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪುಷ್ಪಾರ್ಚನೆ ಸಲ್ಲಿಸಿ ಜಾಥವನ್ನು ಬರಮಾಡಿಕೊಂಡರು.
ಪಾಂಡವಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕುವೆಂಪು ವಿಶ್ವ ಮಾನವ ಸಂದೆಶ ಉಪನ್ಯಾಸ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಉದ್ಘಾಟಿಸಿದರು.

ಮಾನವ ಬಂಧುತ್ವ ವೇದಿಕೆಯಿಂದ ಜರುಗಿದ ಕುವೆಂಪು ವಿಶ್ವಮಾನವ ಸಂದೇಶ ಜಾಥಾ ಕಾಯ್ರಕ್ರಮದಲ್ಲಿ ಹೇಳಿಕೆ

ಪಾಂಡವಪುರ: ಮನುಷ್ಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ಸಮಾಜ ನಿರ್ಮಾಣವಾಗಿದ್ದು, ಜೀವ ತೆಗೆಯುವ ಧರ್ಮವಾಗಲೀ, ಜ್ಞಾನ, ವಿಜ್ಞಾನವಾಗಲಿ ನಮಗೆ ಬೇಡ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ, ಸರ್ಕಾರಿ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕುವೆಂಪು ವಿಶ್ವಮಾನವ ಸಂದೇಶ ಜಾಥಾ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಲೆ ಮಾಡು ಎಂದು ಯಾವ ಧರ್ಮವೂ ಹೇಳುವುದಿಲ್ಲ, ಆದರೂ ದಿನನಿತ್ಯ ಧರ್ಮದ ಹೆಸರಿನಲ್ಲಿ ಅನೇಕ ಕೊಲೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಇಬ್ಬರು ಅಮಾಯಕರನ್ನು ಕೊಲೆ ಮಾಡಿದ್ದು, ಅಮಾನವೀಯ ಘಟನೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ದೇಶದಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶ ಸಾರಬೇಕಾದುದು ಅವಶ್ಯಕ ಎಂದರು.

ದೇಶದಲ್ಲಿ ಶಿಕ್ಷಣ ಪದ್ಧತಿ ಬದಲಾಗಬೇಕು. ಧಾರ್ಮಿಕತೆ ಪರಿವರ್ತನೆಯಾಗಬೇಕು ಎಂದ ಅವರು, ನಾವು ಮೊದಲು ನಿಜವಾದ ಮನುಷ್ಯರಾಗಬೇಕು. ಕೆರೆ ನೀರಲ್ಲಿ ನಾಯಿ, ಹಂದಿ ಮುಳುಗೇಳಿದರೆ ನೀರು ಮಲೀನವಾಗುವುದಿಲ್ಲ, ಆದರೆ ಒಬ್ಬ ಮನುಷ್ಯ ಮುಟ್ಟಿದರೆ ನೀರು ಅಪವಿತ್ರ ಎಂದು ಹೇಳುವುದು ಮನುಷ್ಯತ್ವದ ವಿರೋಧಿಗಳು ಎಂದು ಕಿಡಿಕಾರಿದರು.

ಯಾರಿಗಾಗಿ ಸಂದೇಶ ಜಾಥಾ:
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಿಂದ ಕಳೆದ 10 ದಿನಗಳ ಹಿಂದೆ ಈ ಜಾಥಾ ವಿಶ್ವ ಮಾನವ ಸಂದೇಶ ಸಾರುತ್ತಾ 8 ಜಿಲ್ಲೆಗಳಲ್ಲಿ ಸಂಚರಿಸಿ ಸಾವಿರಾರು ಜನರಿಗೆ ವಿಶ್ವ ಮಾನವ ಸಂದೇಶ ಸಾರಿದೆ ಇದು ಕೇವಲ ಏನೋ ಒಂದು ಕಾರ್ಯಕ್ರಮ ಎಂದು ಉದಾಸೀನ ಮಾಡಬಾರದು.  ಜಾಥಾದ ಧ್ಯೇಯೋದ್ಧೇಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕನಿಷ್ಠ ಮನುಷ್ಯರಾಗಿ ಬದುಕಿದರೆ ಈ ಜಗತ್ತಿನಲ್ಲಿ ಎಲ್ಲರೂ ಶಾಂತಿ ಸೌಹಾರ್ಧತೆಯಿಂದ ಬದುಕಲು ಸಾಧ್ಯಚಾಗುತ್ತದೆ ಎಂದರು.

ಕಾಲೇಜು ಆವರಣಕ್ಕೆ ಆಗಮಿಸಿದ ಕುವೆಂಪು ವಿಶ್ವಮಾನವ ಸಂದೇಶ ಜಾಥಾವನ್ನು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಪ್ರಾಂಶುಪಾಲ ಬಿ.ಟಿ.ರಜನಿಕಾಂತ್ ಕುವೆಂಪು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ರಜನಿಕಾಂತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಪಕರಾದ ಡಿ.ಎಸ್.ಸರಸ್ವತಿ ಉಪನ್ಯಾಸ ನೀಡಿದರು.

ಕಸಾಪ ಅಧ್ಯಕ್ಷ ಎಂ.ರಮೆಶ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಟಿ.ಎಂ.ಶಿವಕಾಳಯ್ಯ, ಜಿಲ್ಲಾ ಮಹಿಳಾ ಸಂಚಾಲಕಿ ಎಚ್.ಎಂ.ಪ್ರಭಾವತಿ, ಮೈಸೂರು ವಿಭಾಗೀಯ ಸಂಚಾಲಕ ಆರ್.ಜಯಕುಮಾರ್, ತಾಲ್ಲೂಕು ಸಂಚಾಲಕ ನಜೀರ್ ಅಹಮದ್, ಟಿ.ವಿ.ಅನಿಲ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗಾಯಕ ಹುರಗಲವಾಡಿ ರಾಮಯ್ಯ ತಂಡದವರಿಂದ ಕುವೆಂಪು ರಚಿತ ಕಾವ್ಯಗಳನ್ನು ಹಾಡಲಾಯಿತು.

 

Leave a Reply

Your email address will not be published.