ಕೊಪ್ಪಳ ಜಿಲ್ಲೆಯ 1.63 ಲಕ್ಷ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ


ಇನ್ನೂ ಜಾರಿಯಾಗದ ಅನಿಲ ಭಾಗ್ಯ | ಮಹತ್ವಕಾಂಕ್ಷೆ ಯೋಜನೆಗೆ ಹಿನ್ನಡೆ |

ಕೊಪ್ಪಳ : ರಾಜ್ಯ ಸರ್ಕಾರ ಈಗಾಗಲೇ ಹಲವಾರು ಯೋಜನೆಗಳಿಗೆ ಭಾಗ್ಯದ ಹೆಸರಲ್ಲಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಇತ್ತೀಚಿನ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯು ಒಂದು ಮಹತ್ವದ ಯೋಜನೆಯಾಗಿದೆ. ಇದನ್ನು 2017 ರ ನವಂಬರ್-ಡಿಸಂಬರ್ ತಿಂಗಳಲ್ಲಿ ಮೊದಲನೇ ಹಂತದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ನೀಡಿದ್ದ ಭರವಸೆ ಅನುಷ್ಠಾನಗೊಳ್ಳಲು ಹಿನ್ನಡೆಯಾಗಿದೆ.

ಕೇಂದ್ರ ಸರ್ಕಾರ  ಉಜ್ಜಲಾ ಯೋಜನೆಯು ರಾಜ್ಯದ ಎಲ್ಲ ಫಲಾನುಭವಿಯನ್ನೂ ಒಳಗೊಂಡಿರುವದಿಲ್ಲ, ಒಂದು ಅಂದಾಜಿನ ಮಾಹಿತಿಯ ಪ್ರಕಾರ, 6-7 ಲಕ್ಷ ಫಲಾನುಭವಿಗಳು ಮಾತ್ರ ಉಜ್ಜಲಾ ಯೋಜನೆಯ ಲಾಭಗಳನ್ನು ಪಡೆದುಕೊಂಡಿದ್ದಾರೆ. ಇದು ಅಗತ್ಯಕ್ಕಿಂತಲೂ ಸಾಕಾಗುವುದಿಲ್ಲವೆಂದು ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ಯಡಿ ಫಲಾನುಭವಿಗಳಿಗೆ ಸಂಪೂರ್ಣ ಉಚಿತ ಅನಿಲ ಸಂಪರ್ಕ ಜೊತೆಗೆ ಎರಡು ಗ್ಯಾಸ್ ಬರ್ನರ್ ಸ್ಟೌವ್ ಮತ್ತು ಎರಡು ಭರ್ತಿ ಮಾಡಿದ ಸಿಲಿಂಡರ್‌ಅನ್ನು ಸಂಪೂರ್ಣ ಉಚಿತವಾಗಿ ನೀಡಲಿದೆ.

ಈ ಯೋಜನೆಗಾಗಿ ರೂ. 1,137 ಕೋಟಿ ಅನುದಾನ ಬಿಡುಗಡೆಗೆ ಸಮ್ಮತಿಸಿದ್ದು, 2018 ರ ಮಾರ್ಚ ಅಂತ್ಯದೊಳಗಾಗಿ ಈ ಸೌಲಭ್ಯವನ್ನು 28 ಲಕ್ಷ ಫಲಾನುಭವಿ ಕುಟುಂಬಗಳಿಗೆ ಕಲ್ಪಿಸಲು ರಾಜ್ಯ ಸರ್ಕಾರ 11 ನೇ ಅಕ್ಟೋಬರ್ 2017 ಸಚಿವ ಸಂಪುಟದಲ್ಲಿ ನಿರ್ಣಯವನ್ನು ಕೈಗೊಂಡಿತು. ಇದಕ್ಕಾಗಿ ವ್ಯಾಪಕ ಪ್ರಚಾರವು ನಡೆಯಿತು. ಸಿ.ಎಂ. ಸಿದ್ದರಾಮಯ್ಯ ಅವರ ಪಾಲಿನ ‘ಭಾಗ್ಯ’ಗಳ ಪಟ್ಟಿಗೆ ಈ ಮಹತ್ವಕಾಂಕ್ಷೆ ಯೋಜನೆಯು ಸೇರ್ಪಡೆಯಾಗಿ ಜಪ್ರಿಯಗೊಳ್ಳುವ ಮೊದಲು ಪ್ರಾರಂಭದಲ್ಲಿ ಸರ್ಕಾರ ತಾನು ಘೋಷಿಸಿದಂತೆ ಮೊದಲನೇ ಹಂತದಲ್ಲಿ ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿದ್ದ ಅನಿಲ ಸಂಪರ್ಕವನ್ನು ಇದುವರೆಗೂ ಕಲ್ಪಿಸಿ ಗುರಿ ಸಾಧಿಸುವಲ್ಲಿ ಸಾಧ್ಯವಾಗಿಲ್ಲ.

ಕೆಲ ತಾಂತ್ರಿಕ ಕಾರಣಗಳಿಂದಾಗಿ ಅನಿಲ ಸಂಪರ್ಕವನ್ನು ಫಲಾನುಭವಿಗಳಿಗೆ ನೀಡಲಾಗಿಲ್ಲ, ಶಾಸಕರ ಅಧ್ಯಕ್ಷತೆಯಲ್ಲಿನ ಸಮಿತಿಗಳು ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿವೆ, ಆದರೆ ಫಲಾನುಭವಿಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶನದಂತೆ ಅಗತ್ಯ ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯಿತಿ, ನಾಡ ಕಚೇರಿಗಳ ವೆಬ್‌ಸೈಟ್ ನಲ್ಲಿ ಆನಲೈನ್ ಮೂಲಕ ನೋಂದಣಿಯಾಗಿ ಸ್ವೀಕೃತಿಯನ್ನು ಪಡೆಯಬೇಕಾಗಿರುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯು ಇದುವರೆಗೂ ನಿಯಾಮಾನುಸಾರ ಪೂರ್ಣಗೊಂಡಿಲ್ಲ. ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಈ ಯೋಜನೆ ಕಾರ್ಯಗತ ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ.

ಈ ಯೋಜನೆಗೆ ಜಿಲ್ಲೆಯ ಒಟ್ಟು 1.63 ಲಕ್ಷ ಫಲಾನುಭವಿಗಳ ಅರ್ಹರಿದ್ದು, ಈ ಪೈಕಿ, ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಇದೇ ನವೆಂಬರ್-ಡಿಸೆಂಬರ್ ತಿಂಗಳ ಒಳಗಾಗಿ ೫೨೦೫೯ ಫಲಾನುಭವಿಗಳನ್ನು ಆಯಾ ಶಾಸಕರುಗಳು ಆಯ್ಕೆ ಮಾಡಿ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿಯನ್ನು ನಿಗದಿಪಡಿಸಿಕೊಳ್ಳಲಾಗಿತ್ತು.

ಜನವರಿ ತಿಂಗಳಲ್ಲಿ ಎರಡನೇ ಹಂತ ಹಾಗೂ ಮಾರ್ಚ್ ನಲ್ಲಿ ಮೂರನೇ  ಹಂತ ಹೀಗೆ ಮೂರು ಹಂತಗಳಲ್ಲಿ ಜಿಲ್ಲೆಯ ಎಲ್ಲ 1.63 ಲಕ್ಷ ಅನಿಲ ರಹಿತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಹಾಗೂ ಇದರಲ್ಲಿ ಪ.ಜಾತಿ/ಪ.ಪಂಗಡದವರಿಗೆ ಶೇ. 20, ಉಳಿದ ಎಲ್ಲ ವರ್ಗಗಳ ಶೇ. 80 ರಷ್ಟು ಆಯ್ಕೆ ಪ್ರಾಧನ್ಯತೆಯನ್ನು ನೀಡಲಾಗಿದೆ ಸರಕಾರದ ಮಹತ್ವಕಾಂಕ್ಷೆ ಯೋಜನೆಯನ್ನು ಜನರಿಗೆ ಆದಷ್ಟು ಬೇಗ ತಲುಪಿಸಲಿ ಎನ್ನವುದು ಸಾರ್ವಜನಿಕರ ಆಗ್ರಹವಾಗಿದೆ.

* ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲಿರುವ ಅನಿಲ ರಹಿತ ಕುಟುಂಬಗಳು : ಯಲಬುರ್ಗಾ ತಾಲೂಕಿನಲ್ಲಿ 37 ಸಾವಿರ, ಕುಷ್ಟಗಿ- 37 ಸಾವಿರ, ಕೊಪ್ಪಳ-44 ಸಾವಿರ ಹಾಗೂ ಗಂಗಾವತಿ ತಾಲೂಕಿನಲ್ಲಿ 45 ಸಾವಿರ ಸೇರಿದಂತೆ 1.63 ಲಕ್ಷ ಕುಟುಂಬಗಳು ಅರ್ಹವಾಗಿವೆ. ಮೊದಲ ಹಂತದಲ್ಲಿ ಯಲಬುರ್ಗಾ- 11956, ಕುಷ್ಟಗಿ- 11967, ಕೊಪ್ಪಳ- 14137 ಹಾಗೂ ಗಂಗಾವತಿ ತಾಲೂಕಿನ 139999 ಸೇರಿದಂತೆ 52059 ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ವನ್ನು ಮೊದಲ ಹಂತದಲ್ಲಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

* ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 4040 ರೂ. ಗಳನ್ನು ಭರಿಸಲಿದೆ. ಸಿಲಿಂಡರ್ ಭದ್ರತಾ ಠೇವಣಿಗೆ 1450 ರೂ., ರೆಗ್ಯುಲೇಟರ್ ಠೇವಣಿ-150, ಸುರಕ್ಷಾ ಹೋಸ್-190 , ಡಿಜಿಸಿ ಪುಸ್ತಕ-50 , ತಪಾಸಣೆ ಮತ್ತು ಜೋಡಣೆ ವೆಚ್ಚ-100, ಗ್ಯಾಸ್ ಸ್ಟೌವ್- 1000 ಹಾಗೂ ಎರಡು ಭರ್ತಿ ಸಿಲಿಂಡರ್- ರೂ. 1100 ಸೇರಿದಂತೆ ಒಟ್ಟು 4040 ರೂ. ವೆಚ್ಚ ಮಾಡಲಿದೆ. ಮೊದಲ ಹಂತದಲ್ಲಿ ಸರ್ಕಾರದ ಸೂಚನೆಯಂತೆ ಫಲಾನುಭವಿಗಳಿಗೆ ಅನಿಲ ಸಂಪರ್ಕ ನೀಡಲು ಪ್ರಾಥಮಿಕ ಹಂತದಲ್ಲಿ ಕ್ರಮಗಳನ್ನು ಕೈಗೊಂಡಿದ್ದು, ಫಲಾನುಭವಿಗಳ ಆನಲೈನ್ ನಲ್ಲಿ ನೋಂದಣಿ ಕಾರ್ಯ ನಡೆದಿದೆ, ಇದು ಮುಗಿದ ತಕ್ಷಣ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ತಿಳಿಸಿದ್ದಾರೆ.

 ಮೌಲಾಹುಸೇನ ಬುಲ್ಡಿಯಾರ್

Leave a Reply

Your email address will not be published.