ಚುನಾವಣಾ ಕರ್ತವ್ಯಕ್ಕೆ ಅಧಿಕಾರಿ, ಸಿಬ್ಬಂದಿ ಮಾಹಿತಿ ಒದಗಿಸಲು ಎಸ್.ಬಿ.ಮುಳ್ಳಳ್ಳಿ ಸೂಚನೆ:


ಚುನಾವಣೆ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ: ಎಚ್ಚರಿಕೆ

ಬೆಳಗಾವಿ: ಚುನಾವಣಾ ಕಾರ್ಯಕ್ಕೆ ನಿಯೋಜಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವರವನ್ನು ತಕ್ಷಣವೇ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ  ಉಪ ಕಾರ್ಯದರ್ಶಿ ಹಾಗೂ ಚುನಾವಣಾ ಮಾನವ ಸಂಪನ್ಮೂಲ ನಿರ್ವಹಣಾ ನೋಡಲ್ ಅಧಿಕಾರಿ ಎಸ್.ಬಿ.ಮುಳ್ಳಳ್ಳಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣಾ ಸಿಬ್ಬಂದಿ ನಿಯೋಜನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಬೇಕಾದರೆ ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಧಿಕ ಅಧಿಕಾರಿ,ಸಿಬ್ಬಂದಿ ನಿಯೋಜನೆಯ ಅಗತ್ಯವಿದೆ. ಆದ್ದರಿಂದ ಆಯಾ ಇಲಾಖೆಯ ಜಿಲ್ಲಾ ಕಚೇರಿಯ ಮುಖ್ಯಸ್ಥರು ಪ್ರತಿಯೊಬ್ಬರ ವಿವರವನ್ನು ನಿಗದಿತ ನಮೂನೆಯಲ್ಲಿ ತಕ್ಷಣವೇ ಒದಗಿಸಬೇಕು ಎಂದು ಹೇಳಿದರು.

ಎನ್‍ಐಸಿ ವತಿಯಿಂದ ಇ-ಮೇಲ್ ಮೂಲಕ ಎಲ್ಲ ಇಲಾಖೆಗಳಿಗೆ ಕಳುಹಿಸಲಾಗುವ ನಿಗದಿತ ನಮೂನೆಯನ್ನು ಭರ್ತಿ ಮಾಡಿ ತಕ್ಷಣವೇ ಮರು ಸಲ್ಲಿಸಬೇಕು. ಸಮಯಾವಕಾಶ ಕಡಿಮೆ ಇರುವುದರಿಂದ ಆದಷ್ಟು ಬೇಗನೇ ಮಾಹಿತಿ ನೀಡಬೇಕು ಎಂದರು.

ಕಠಿಣ ಕ್ರಮ-ಎಚ್ಚರಿಕೆ:
ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸುಳ್ಳು ಪ್ರಮಾಣಪತ್ರ ನೀಡುವವರ ಮೇಲೆ ಹಾಗೂ ಸರಿಯಾಗಿ ಪರಿಶೀಲಿಸದೇ ವರದಿ ನೀಡುವ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್.ಬಿ.ಮುಳ್ಳಳಿ ಎಚ್ಚರಿಕೆ ನೀಡಿದರು.

ಅನಿವಾರ್ಯ ಕಾರಣಗಳು ಅಥವಾ ಆರೋಗ್ಯ ಸಮಸ್ಯೆಗಳಿದ್ದರೆ ಕೂಲಂಕುಶವಾಗಿ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.
ಚುನಾವಣಾ ಕಾರ್ಯಕ್ಕೆ ನಿಯೋಜಿಸಲು ಸಿಬ್ಬಂದಿ ಕೊರತೆ ಇರುವುದರಿಂದ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಬದಲು ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಎನ್‍ಐಸಿ ಅಧಿಕಾರಿ ಕ್ಷೀರಸಾಗರ ಅವರು, ಎಚ್‍ಆರ್‍ಎಂಎಸ್ ಮಾಹಿತಿ ಆಧರಿಸಿ ನಮೂನೆಗಳನ್ನು ತಯಾರಿಸಲಾಗಿದ್ದು, ಬಹುತೇಕ ಮಾಹಿತಿ ಅದರಲ್ಲಿ ಇದ್ದು ಖಾಲಿ ಬಿಟ್ಟಿರುವ ಕಾಲಂಗಳು ಅಂದರೆ ಚುನಾವಣಾ ಗುರುತಿನ ಚೀಟಿ, ತವರು ವಿಧಾನಸಭಾ ಕ್ಷೇತ್ರ, ಕಾರ್ಯನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಇತರೆ ಮಾಹಿತಿ ಮಾತ್ರ ಭರ್ತಿ ಮಾಡುವಂತೆ ತಿಳಿಸಿದರು.

ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.