ಬಿಜೆಪಿ, ಕಾಂಗ್ರೆಸ್ ಮಧ್ಯೆ ಬ್ಯಾನರ್ ನಲ್ಲೇ ಪ್ರಶ್ನೋತ್ತರ ಮಾಲೆ..!


ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಬಲು ಜೋರಾಗಿದೆ. ಎಲ್ಲ ಕ್ಷೇತ್ರಗಳಂತೆ ಇಲ್ಲಿಯೂ ಕಾವಿದೆ. ಆದರೆ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಬ್ಯಾನರ್ ವಾರ್‌ನಿಂದ ಜನರಿಗೆ ತಲೆ ಕೆಟ್ಟು ಹೋಗಿದೆ.

ಹೌದು..! ಕ್ಷೇತ್ರದ ಬಿಜೆಪಿಯ ಶಾಸಕ ಅರವಿಂದ ಬೆಲ್ಲದ ಅವರು ಇತ್ತೀಚೆಗೆ ಹಲವು ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ ಬೃಹತ್ ಕಟೌಟ್ ಗಳು, ಬ್ಯಾನರ್‌ಗಳು ಸದ್ದು ಮಾಡಿ ಕ್ಷೇತ್ರದಲ್ಲಿ ಬ್ಯಾನರ್ ವಾರ್‌ಗೆ ಅಂಕಿತ ಹಾಡಿದ್ದಾರೆ. ಅರವಿಂದ ಬೆಲ್ಲದ ಅವರು ಅಳವಡಿಸಿರುವ ಬ್ಯಾನರ್‌ಗಳು ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದ್ದು, ತಾವು ಏನೂ ಕಡಿಮೆ ಇಲ್ಲವೆಂಬಂತೆ ಬೆಲ್ಲದಗೆ ಟಾಂಗ್ ನೀಡಿದ್ದಾರೆ.

ಅರವಿಂದ ಅವರು ಬೆನ್ನು ತಿರುಗಿಸಿ ನಿಂತು ಧಾರವಾಡಕ್ಕೆ ಐಐಟಿ ತಂದವರು ಯಾರು, 2500 ಬಡವರಿಗೆ ಸೂರು ಒದಗಿಸಿದವರು ಯಾರು?, ಅವಳಿ ನಗರ ಕಾಂಕ್ರೀಟೀಕರಣ ಮಾಡಿದವರು ಯಾರು?, ರೈತರಿಗೆ ಡ್ಯಾಂ ಕಟ್ಟಿಸಿ, ನೆಮ್ಮದಿ ತಂದವರು ಯಾರು?, ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಯುಕೆಜಿ ತಂದವರಾರು?, ಎಂದು ಜನರಿಗೆ ಪ್ರಶ್ನೆಗಳನ್ನು ಕೇಳಿ ಒಂದು ರೀತಿ ವಿಶೇಷ ಅನಿಸುವ ಜಾಹೀರಾತುನ್ನು ಹಾಕಿಸಿ ಹೊಸತನ ಮೆರೆದಿದ್ದರು.

ಈ ಜಾಹೀರಾತುಗಳು ನೋಡುಗರನ್ನು ಆಕರ್ಷಿಸಲು ಸಫಲವಾಗಿವೆ. ಅದರ ಬಗ್ಗೆ ಮಾತನಾಡಿಕೊಳ್ಳುವಂತಾಗಿತ್ತು. ಇದು ಕ್ಷೇತ್ರದ ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ಉಂಟು ಮಾಡಿತ್ತು. ಇದಕ್ಕೇನು ಮಾಡುವುದು ಎಂದು ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು. ಆದರೆ, ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ದೀಪಕ ಚಿಂಚೋರೆ ಅವರು, ಅರವಿಂದ ಬೆಲ್ಲದ ಅವರಿಗೆ ಅವರದೇ ಸ್ಟೈಲ್‌ನಲ್ಲಿ ತಕ್ಕ ಉತ್ತರ ನೀಡಿದ್ದಾರೆ.

ದೀಪಕ್ ಚಿಂಚೋರೆ ಅವರು ನೋಡುಗರಿಗೆ ಎದುರು ನಿಂತು ನಿಮ್ಮ ಪ್ರಶ್ನೆಗಳಿಗೆ ನಮ್ಮ ಉತ್ತರ ಎಂಬ ಬೃಹತ್ ಬ್ಯಾನರ್ ಗಳನ್ನು ಹಾಕಿ ಅರವಿಂದ ಬೆಲ್ಲದಗೆ ಟಾಂಗ್ ನೀಡಿದ್ದಾರೆ. ಆ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದ ಹಲವು ಸಾಧನೆಗಳನ್ನು ನಮ್ಮ ಸಾಧನೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿಕೊಂಡಿದ್ದಾರೆ ಎಂಬಂತೆ ತಿರುಗೇಟು ನೀಡಿದ್ದಾರೆ. ಇಂಥ ಬ್ಯಾನರ್ ವಾರ್ ನಗರದ ಹಲವಡೆ ರಾರಾಜಿಸುತ್ತಿವೆ. ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ ಎಂದು ಬ್ಯಾನರ್‌ನಲ್ಲಿ ದೊಡ್ಡದಾಗಿ ಬರೆಯಿಸಿರುವ ಚಿಂಚೋರೆ ಅವರು, ಧಾರವಾಡಕ್ಕೆ ಐಐಟಿ ತಂದವರು ನಾವು, ಅವಳಿ ನಗರದ ರಸ್ತೆಗಳನ್ನು ಕಾಂಕ್ರಿಟ್ ಮಾಡಿದವರು ನಾವು, 2500 ಬಡ ಕುಟುಂಬ ಗಳಿಗೆ ಸೂರು ಒದಗಿಸಿದವರು ನಾವು, ಗ್ರಾಮಗಳಲ್ಲಿ ನೂರಾರು ಡ್ಯಾಂಗಳನ್ನು ಕಟ್ಟಿಸಿದವರು ನಾವು, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತಂದವರು ನಾವು ಎಂದು ಬರೋಬ್ಬರಿ ಟಾಂಗ್ ಕೊಟ್ಟಿದ್ದಾರೆ.

ಈ ಬ್ಯಾನರ್ ಆರಂಭಿಸಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಬ್ಯಾನರ್ ಮೂಲಕವೇ ಉತ್ತರ ನೀಡಿರುವ ಕಾಂಗ್ರೆಸ್ ನಾಯಕ ದೀಪಕ ಚಿಂಚೋರೆ ಅವರ ಕ್ರಮಕ್ಕೆ ಇದೀಗ ಬಿಜೆಪಿ ಮತ್ತೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ಕ್ಷೇತ್ರದ ಜನರಲ್ಲಿ ಮೂಡಿದೆ.

ಅಸಮಾಧಾನ…
ಬಿಜೆಪಿ ಕಾಂಗ್ರೆಸ್‌ನ ಬ್ಯಾನರ್ ವಾರ್‌ಗೆ ಕೆಲವು ಜನ ಅಸಮಾಧಾನಗೊಂಡಿದ್ದಾರೆ. ಅಸಲಿಗೆ ನಗರದಲ್ಲಿ ಯಾವುದೇ ರಸ್ತೆಗಳು ಚೆನ್ನಾಗಿಲ್ಲ. ಬಡವರಿಗೆ ಸೂರು ಸಿಕ್ಕಿಲ್ಲ, ಮಳೆನೇ ಸರಿಯಾಗಿ ಆಗುತ್ತಿಲ್ಲ ಎಲ್ಲಿಯ ಚೆಕ್ ಡ್ಯಾಮ್ ಎಂದು ಇಬ್ಬರನ್ನೂ ಗೇಲಿ ಮಾಡುತ್ತಿದ್ದಾರೆ. ಜೆಡಿಎಸ್ ಮುಖಂಡರು ಅರವಿಂದ ಬೆಲ್ಲದ ಅವರ ಹೊಸ ಜಾಹೀರಾತು ಶೈಲಿಯನ್ನು ಬಲವಾಗಿ ಟೀಕಿಸಿದ್ದಾರೆ.

 

Leave a Reply

Your email address will not be published.