ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ನೆಪದಲ್ಲಿ ಮರಗಳ ಮಾರಣಹೋಮ..!


ಧಾರವಾಡ: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಅವಸರದಲ್ಲಿ ಧಾರವಾಡದಲ್ಲೊಂದು ಯಡವಟ್ಟು ಮಾಡಿಕೊಂಡಿದೆ.

ಹೌದು! ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯನ್ನು ಇಲಾಖೆಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಇಲ್ಲಿನ ಕಡಪಾ ಮೈದಾನದ ಆವರಣದಲ್ಲಿ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ನೆಪದಲ್ಲಿ ಅಲ್ಲಿದ್ದ ಅನೇಕ ಮರಗಳನ್ನು ಮಹಾನಗರ ಪಾಲಿಕೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಬುಡಸಮೇತ ಕಿತ್ತು ಇದೀಗ ಪೇಚಿಗೆ ಸಿಲುಕಿಕೊಂಡಿದೆ.

ಮರಗಳನ್ನು ರಾತ್ರೋರಾತ್ರಿ ಅವಸರವಸರಾಗಿ ಕಡಿದು ಹಾಕಿದ್ದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕಡಪಾ ಮೈದಾನದಲ್ಲಿ ಅಪ್ಪಿಕೊ ಚಳವಳಿ ನಡೆಸಿದರು.

ಉಳಿದ ಮರಗಳನ್ನು ಅಪ್ಪಿಕೊಂಡ ಬಿಜೆಪಿ ಕಾರ್ಯಕರ್ತರು ಉಳಿಸಿ… ಉಳಿಸಿ….ಮರಗಳನ್ನು ಉಳಿಸಿ… ಎಂಬ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಾಲಿಕೆಯ ಆಯುಕ್ತರ ಸೂಚನೆಯಂತೆ ನಿನ್ನೆ ತಡರಾತ್ರಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಮೈದಾನದಲ್ಲಿನ ಮರಗಳನ್ನು ಕಡಿದು ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಾಕ್ಷಿ ಸಮೇತ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿ, ಮರ ಕತ್ತರಿಸಿದವರ ಮೇಲೆ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿದ್ದೇವೆ. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಪಾಲಿಕೆಯ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಮರಗಳನ್ನು ಕತ್ತರಿಸಲು ಸೂಚಿಸಿದ್ದಾರೆ. ಈ ಜಾಗೆಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸುವ ಮೂಲಕ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.

ಪಾಲಿಕೆ ಸದಸ್ಯ ಸಂಜಯ ಕಪಟಕರ, ನಾಗೇಶ ಕಲಬುರ್ಗಿ, ವಿಜಯಾನಂದ ಶೆಟ್ಟಿ, ಶಂಕರ ಶೇಳಕೆ, ಬಲರಾಮ ಕುಸುಗಲ್ಲ, ಸಂಗನಗೌಡ ರಾಮನಗೌಡ್ರ, ಈರಣ್ಣ ಹಪ್ಪಳಿ, ಶ್ರೀನಿವಾಸ ಕೋಟ್ಯಾನ್, ಶರಣು ಅಂಗಡಿ, ರಾಕೇಶ್ ನಾಝರೆ, ದೇವರಾಜ ಶಹಾಪುರ, ವಿಜಯ ಸಾಬಳೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.