ರೈತರ ಸಾಲ ಮನ್ನಾ ಮಾಡಿದರೆ ಮೋದಿಗೆ ಕೈಜೋಡಿಸಿ ನಮಸ್ಕರಿಸುತ್ತೇನೆ: ಸಚಿವ ವಿನಯ್ ಕುಲಕರ್ಣಿ


ಧಾರವಾಡ: ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಅದು ಮಂಡಿಸುವ ಬಜೆಟ್ ನ್ನು ನೋಡುತ್ತ ಬಂದಿದ್ದೇನೆ. ಒಂದು ಬಜೆಟ್ ನಲ್ಲೂ ಕೂಡ ರೈತರಿಗಾಗಿ ಯಾವುದೇ ಕೊಡುಗೆ ಕೊಟ್ಟಿದ್ದನ್ನು ನಾನು ನೋಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಹಲವು ಬಾರಿ ರಾಜ್ಯದ ನಿಯೋಗ ಹೋದರೂ ಸ್ಪಂದಿಸಿಲ್ಲ. ನಿಜವಾಗಿಯೂ ಅವರಿಗೆ ರೈತರ ಮೇಲೆ ಕಾಳಜಿ ಇದ್ದರೆ ರೈತರ ಸಾಲ ಮನ್ನಾ ಮಾಡಲಿ. ಮೊದಲು ರೈತರನ್ನು ನಾವು ಋಣಮುಕ್ತರನ್ನಾಗಿ ಮಾಡಬೇಕಿದೆ ಎಂದರು.

ಮಹಾದಾಯಿ, ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸುವುದರ ಜೊತೆಗೆ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಜೋಡಿಸಿ ನಮಸ್ಕಾರ ಮಾಡುತ್ತೇನೆ. ಆರೋಗ್ಯ ಭಾಗ್ಯ ಯೋಜನೆಯಡಿ ರೈತರಿಗೆ 20 ಲಕ್ಷ ಆಸ್ಪತ್ರೆ ವೆಚ್ಚ ನಾವೇ ರಾಜ್ಯ ಸರ್ಕಾರದಿಂದ ಭರಿಸುತ್ತಿದ್ದೇವೆ. ಇಂಥ ಕಿಸಾನ್ ಕಾರ್ಡ ಉಪಯೋಗವಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿದೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಜಿಎಸ್ ಟಿಯಿಂದ ಈ ದೇಶ ಸುಧಾರಣೆ ಆಗಿಲ್ಲ. ಮೋದಿ ಸರ್ಕಾರ ಯೂ ಟರ್ನ್ ಹೊಡೆದಿದೆ ಎಂದರು.

ನೋಟು ಅಮಾನ್ಯೀಕರಣದಿಂದ ದೊಡ್ಡ ಹೊಡೆತ ಬಿದ್ದಿದೆ. ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವಲ್ಲಿ ಪ್ರಧಾನಿ ವಿಫಲವಾಗಿದ್ದಾರೆ. ಈ ದೇಶದಲ್ಲಿ ಬರೀ ಭಾಷಣ ಮೋಡಿ ನಡೆಯುತ್ತಿದೆ. ಅಚ್ಛೇ ದಿನ ಯಾರಿಗೂ ಬಂದಿಲ್ಲ. ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕುತ್ತೇವೆ ಎಂದು ಪ್ರಧಾನಿಗಳು ಹೇಳಿದ್ದರು. ಇನ್ನೂ ಎಲ್ಲ ಜನ ಕಾಯುತ್ತ ಇದ್ದಾರೆ. ಆದರೆ, ಇಲ್ಲಿಯವರೆಗೂ ಯಾರೊಬ್ಬರ ಬ್ಯಾಂಕ್ ಖಾತೆಗೂ ಹದಿನೈದು ಪೈಸೆ ಜಮಾ ಆಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಅಲ್ಲದೇ ಪ್ರತಿಶತ 18 ತೆರಿಗೆ ಹಾಕುತ್ತಿದ್ದಾರೆ. ಇದೇನಾ ಮೋದಿಯವರ ಅಚ್ಛೇ ದಿನ ಎಂದು ಪ್ರಶ್ನಿಸಿದರು.

ಕೈಗಾರಿಕೋದ್ಯಮಿಗಳ ಪರವಾಗಿ ಕೇಂದ್ರ ಸರ್ಕಾರ ತೋರಿಸುವ ಕಾಳಜಿಯನ್ನು ದೇಶದ ರೈತರ ಮೇಲೂ ತೋರಿಸಲಿ. ಇಂದು ರೈತರ ಪರಿಸ್ಥಿತಿ ಬಹಳ ಹದಗೆಟ್ಟಿದೆ. ನಮ್ಮ ಬಳಿ ಕಡಲೆ ಬೀಜ ಒಂದು ವರ್ಷಕ್ಕೆ ಸಾಕಾಗುವಷ್ಟು ದಾಸ್ತಾನು ಇದೆ. ಆದರೂ ಮೋದಿ ಕಡಲೆ ಆಮದು ಮಾಡಿದ್ದರಿಂದ ಈಗ ಕಡಲೆ ದರ ಕುಸಿತಗೊಂಡಿದೆ. ಕಡಲೆ ಬೆಲೆ ಕುಸಿತಕ್ಕೆ ಮೋದಿಯವರೇ ಕಾರಣ. ಕಡಲೆ ಬೀಜ ಬಿತ್ತುವಾಗ ರೈತರು ಎಂಟು ಸಾವಿರ ಕೊಟ್ಟು ಒಂದು ಕ್ವಿಂಟಾಲ್ ಬೀಜ ಖರೀದಿ ಮಾಡಿದ್ದಾರೆ. ಆದರೆ, ಈಗ ಕೇವಲ ನಾಲ್ಕೂವರೆ ಸಾವಿರಕ್ಕೆ ಕಡಲೆ ಮಾರಾಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶ್ಯಾಮನೂರು ಹೇಳಿಕೆಗೆ ವಿರೋಧ…

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧ ಸಮಿತಿ ನಿರ್ಣಯಕ್ಕೆ ಶ್ಯಾಮನೂರು ಶಿವಶಂಕರಪ್ಪ ಅವರು ವಿರೋಧ ವ್ಯಕ್ತಪಡಿಸಿರುವ ಸಂಬಂಧ ಸಚಿವರು ಇದೇ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದರು.

ನಮಗೂ ಮತ್ತು ವೀರಶೈವರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಈಗಾಗಲೇ ಎರಡು ಬಾರಿ ವೀರಶೈವ ಲಿಂಗಾಯತ ಎಂದು ಬರೆದು ಕಳುಹಿಸಿದ್ದೇವೆ ಆದರೆ, ಅದಕ್ಕೆ ತಿರಸ್ಕಾರ ವ್ಯಕ್ತವಾಗಿದೆ. ಸಮಿತಿಯ ನಿರ್ಣಯಕ್ಕೆ ಅವರು ಒಪ್ಪಲೇಬೇಕು. ಇಲ್ಲಿ ಅವರವರ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿದೆ ಎಂದರು.

Leave a Reply

Your email address will not be published.