ಗೆಲುವು ನನ್ನದೇ, ವೈರಿಗಳಿಗೆ ಈ ಚುನಾವಣೆಯಲ್ಲಿ ಭವಿಷ್ಯವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೊಳಿ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡುತ್ತಿರುವುದು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಉದಗಟ್ಟಿ ಗ್ರಾಮಸ್ಥರು ಬೆಳ್ಳಿ ಗದೆ ನೀಡಿ ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.

ಗೋಕಾಕ: ಬಸವಣ್ಣನವರ ಪರಿಕಲ್ಪನೆಯಂತೆ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಎಲ್ಲ ಸಮಾಜದವರನ್ನು ಒಗ್ಗೂಡಿಸಿ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದು, ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ  ಪ್ರವಾಸಿ ಮಂದಿರ ಉದ್ಘಾಟನೆ ಹಾಗೂ ವಾಲ್ಮೀಕಿ ಸಮುದಾಯ ಭವನದ ಅಡಿಗಲ್ಲನ್ನು ನೆರವೇರಿಸಿ ಅವರು ಮಾತನಾಡಿದರು.

ಕಳೆದ 14 ವರ್ಷಗಳಿಂದ ಎಲ್ಲ ಸಮಾಜಗಳ ಅಭಿವೃದ್ದಿಗೆ ಪ್ರಾಶಸ್ತ್ಯ ಕಲ್ಪಿಸಿಕೊಡಲಾಗುತ್ತಿದೆ. ಅರಭಾವಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.  2004 ರಿಂದ ಇಲ್ಲಿಯವರೆಗೆ ನಮ್ಮ ಕಾರ್ಯಕರ್ತರ ರಥವನ್ನು ಜನರ ಏಳ್ಗೆಗಾಗಿ ಮುನ್ನಡೆಸಿಕೊಂಡು ಬಂದಿದ್ದು, ಮುಂದೆಯೂ ನಮ್ಮ ರಥ ಯಶಸ್ವಿಯಾಗಿ ಸಾಗಲಿದೆ. ಜನರ ಪ್ರೀತಿ-ವಿಶ್ವಾಸವೇ ಇದರ ಯಶಸ್ಸಿಗೆ ಕಾರಣ ಎಂದರು.

ವೈರಿಗಳಿಗೆ ನೆಲೆ ಇಲ್ಲ : ಅಭಿವೃದ್ಧಿ ವಿಚಾರದಲ್ಲಿ ನಮ್ಮ ಬೆರಳಣಿಕೆಯಷ್ಟು ವೈರಿಗಳು ಸತ್ಯಕ್ಕೆ ದೂರವಾದ ಸುದ್ಧಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಕೊಡದಿರಿ. ಕ್ಷೇತ್ರದ ಪರಿಚಯವೇ ಇಲ್ಲದ ಅವರುಗಳು ಒಂದೇ ಭಾಗಕ್ಕೆ ಸೀಮಿತಗೊಂಡಿದ್ದಾರೆ. ಅವರು ಎಷ್ಟೇ ಅಪಪ್ರಚಾರ ನಡೆಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಕ್ಷೇತ್ರದ ಮತದಾರ ಪ್ರಭುಗಳ ಆಶೀರ್ವಾದದಿಂದ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ದೇವರು ನನ್ನ ಹಣೆಬರಹವನ್ನು ನಿರ್ಧರಿಸಿದ್ದಾನೆ. ದೇವರು ಬರೆದಂತೆ ನಾನು ಈಗಾಗಲೇ ಗೆದ್ದು ಬಂದಿದ್ದೇನೆ. ಇದನ್ನು ಗರ್ವದಿಂದ ಹೇಳುತ್ತಿಲ್ಲ. ಮತದಾರ ಪ್ರಭುಗಳು ತೋರುತ್ತಿರುವ ಪ್ರೀತಿಯಿಂದ ಹೇಳುತ್ತಿದ್ದೇನೆ. ಗೆಲುವು ನನ್ನದೇ. ವೈರಿಗಳಿಗೆ ಈ ಚುನಾವಣೆಯಲ್ಲಿ ಯಾವುದೇ ಭವಿಷ್ಯವಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕ್ಷೇತ್ರದ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕ್ಷೇತ್ರದಲ್ಲಿಯೇ ಅತೀ ಹೆಚ್ಚಿನ ಮತಗಳನ್ನು ನೀಡುವ ಗ್ರಾಮಗಳಲ್ಲಿ ಉದಗಟ್ಟಿಯೂ ಒಂದು. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲವನ್ನು ಈಡೇರಿಸುವ ಶಾಸಕರ ಕಾರ್ಯ ಶ್ಲಾಘನೀಯ.
ಜನಪ್ರತಿನಿಧಿ ಹೇಗಿರಬೇಕೆಂಬುದನ್ನು ಇವರಿಂದ ತರಬೇತಿಯನ್ನು ಇತರರು ಪಡೆದುಕೊಳ್ಳಬೇಕು. ಅತೀ ಹೆಚ್ಚಿನ ವಸತಿ ಶಾಲೆಗಳು ಹಾಗೂ ಯಾತ್ರಿ ನಿವಾಸಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಎಂದಿಗೂ ಇವರನ್ನು ಶಾಸಕರನ್ನಾಗಿ ನೋಡುವುದಿಲ್ಲ. ಮನೆಯ ಮಗನಂತೆ ನೋಡಿಕೊಳ್ಳುತ್ತೇವೆ. ಮುಂದಿನ ಚುನಾವಣೆಯಲ್ಲಿ ಲಕ್ಷ ಮತಗಳ ಅಂತರದಿಂದ ಬಾಲಚಂದ್ರ ಜಾರಕಿಹೊಳಿ ಅವರು ಜಯಗಳಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದಗಟ್ಟಿ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಉದ್ಘಾಟಿಸಿದರು. 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಅಡಿಗಲ್ಲನ್ನು ನೆರವೇರಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಉದ್ದಮ್ಮಾದೇವಿ ದೇವಸ್ಥಾನ ಕಮೀಟಿಯವರು ಬೆಳ್ಳಿ ಗಧೆ ನೀಡಿ ಸತ್ಕರಿಸಿದರು.
ಸಾನಿಧ್ಯವನ್ನು ಪದ್ಮರಾಜೇಂದ್ರ ಸ್ವಾಮಿಗಳು ವಹಿಸಿದ್ದರು.

ಹಿರಿಯ ಸಹಕಾರಿ ಬಸಗೌಡ ಪಾಟೀಲ, ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಗ್ರಾಪಂ ಅಧ್ಯಕ್ಷೆ ಮುತ್ತವ್ವಾ ವಡೇರ, ಭೂತಪ್ಪ ಗೊಡೇರ, ಹನಮಂತ ಕೊಪ್ಪದ, ಮಲಕಾರಿ ವಡೇರ, ರಂಗಪ್ಪ ಛಪ್ರಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಎನ್.ಟಿ. ಫಿರೋಜಿ, ಜಿಪಂ ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಮಾರುತಿ ತೋಳಮರಡಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಅಜ್ಜಪ್ಪ ಗಿರಡ್ಡಿ, ಶಿದ್ಲಿಂಗ ಕಂಬಳಿ, ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ನಿರ್ದೇಶಕ ಬಸವರಾಜ ಸಾಯನ್ನವರ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಿ.ಡಿ. ಪಾಟೀಲ, ಪರ್ವತಗೌಡ ಪಾಟೀಲ, ಹನಮಂತ ತೇರದಾಳ ಇತರರು ಇದ್ದರು.

Leave a Reply

Your email address will not be published.