ಅಭಿವೃದ್ದಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕಿದೆ: ವಿವೇಕರಾವ ಪಾಟೀಲ್


ಚಿಕ್ಕೋಡಿ: ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕಾದ ಅಗತ್ಯವಿದೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳು ಮತ್ತು ಹೋರಾಟ ಸಮಿತಿ ಸದಸ್ಯರು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಸಿಎಂ ಎದುರು ಶಕ್ತಿ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಹೇಳಿದರು.

ಪಟ್ಟಣದ ಮಿನಿವಿಧಾನ ಸೌಧ ಎದುರು ಕಳೆದ 10 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಬುಧುವಾರ ಸಂಜೆ ಪಾಲ್ಗೊಂಡು ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಅತಿ ಹೆಚ್ಚು ದೊಡ್ಡ ಬೌಗೋಳಿಕ ಕ್ಷೇತ್ರ ಹೊಂದಿರುವ ಜಿಲ್ಲೆ ಬೆಳಗಾವಿ. ಆಡಳಿತ ಮತ್ತು ಅಭಿವೃದ್ಧಿ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕಾದ ಅಗತ್ಯವಿದೆ. ಜಿಲ್ಲೆಯ ಕೊನೆಯ ಹಳ್ಳಿಯ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಚಿಕ್ಕೋಡಿ ಜಿಲ್ಲೆಯಾಗಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಹೋರಾಟ ಸಮಿತಿಯನ್ನೊಳಗೊಂಡ ನಿಯೋಗ ತೆಗೆದುಕೊಂಡು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಲು ಒತ್ತಡ ಹೇರಲಾಗುವುದು ಎಂದು ಹೇಳಿದರು.

ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಮತ್ತು ವಿಪ ಸದಸ್ಯ ವಿವೇಕರಾವ ಪಾಟೀಲ ಮತ್ತು ಈ ಭಾಗದ ಜನಪ್ರತಿನಿಧಿಗಳು ಮನಸ್ಸು ಮಾಡಿದರೇ ಜಿಲ್ಲೆ ಮಾಡುವುದು ಕಷ್ಟದ ಕೆಲಸವೇನಲ್ಲ. ಆದ್ದರಿಂದ ವಿವೇಕರಾವ ಪಾಟೀಲರು ರಮೇಶ ಜಾರಕಿಹೋಳಿಯವರೊಂದಿಗೆ ತೆರಳಿ ಸಿಎಂ ಮೇಲೆ ಒತ್ತಡ ಹೇರಿ ಚಿಕ್ಕೋಡಿ ಜಿಲ್ಲೆ ಮಾಡಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಸಮಾಜ ಸೇವಕ ಪ್ರದೀಪ ಮಾಳಗಿ ಮಾತನಾಡಿದರು. ನಿಪ್ಪಾಣಿ ಎಪಿಎಂಸಿ ಅಧ್ಯಕ್ಷ ಸುಭಾಸಗೌಡ ಪಾಟೀಲ, ದುಂಡಪ್ಪ ಬೆಂಡವಾಡೆ, ಮಾಜಿ ಶಾಸಕ ದತ್ತು ಹಕ್ಯಾಗೋಳ, ಬಾಬುರಾವ ಜಿಪರೆ, ಎಂ.ಕೆ.ಪೂಜೇರಿ, ಶಿವಪ್ಪ ಪೋಗತ್ಯಾನಟ್ಟಿ, ಬಸವರಾಜ ಡಾಕೆ, ಅಪ್ಪಾಸಾಬ ಪಾಟೀಲ, ಲಕ್ಷ್ಮಣ ಪೂಜೇರಿ, ಸುರೇಶ ತಳವಾರ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ ಇತರರು ಇದ್ದರು.

 

Leave a Reply

Your email address will not be published.