ಪುಟ್ಟಣ್ಣಯ್ಯ ಸಮಾಧಿಗೆ ರೈತರ ನಮನ ; ಎಲ್ಲೆಲ್ಲೂ ಗುಣಗಾನ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ದಂಟಹಳ್ಳಿ ಗ್ರಾಮದ 50 ಕ್ಕೂ ಹೆಚ್ಚು ರೈತರು ಶುಕ್ರವಾರ ರೈತ ನಾಯಕ ಪುಟ್ಟಣ್ಣಯ್ಯ ಅವರ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿದರು.

ಪಾಂಡವಪುರ : ಗುರುವಾರ ಅಂತ್ಯಸಂಸ್ಕಾರ ಮಾಡಲಾದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿ ಬಳಿ ಶುಕ್ರವಾರ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತರು ನಮನ ಸಲ್ಲಿಸಿದರು.

ಚಾಮರಾಜನಗರ, ಮೈಸೂರು ಮತ್ತು ಹಾಸನ ಜಿಲ್ಲೆಗಳಿಂದ ರೈತರು ಬಸ್ ಹಾಗೂ ಇತರೆ ವಾಹನಗಳ ಮೂಲಕ ಕ್ಯಾತನಹಳ್ಳಿ ಗ್ರಾಮಕ್ಕೆ ಆಗಮಿಸಿ ಪುಟ್ಟಣ್ಣಯ್ಯ ಅವರ ಸಮಾಧಿ ಬಳಿ ತೆರಳಿ ನಮಸ್ಕರಿಸಿದ ನಂತರ ಪುಟ್ಟಣ್ಣಯ್ಯ ಜಿಂದಾಬಾದ್. ಪುಟ್ಟಣ್ಣಯ್ಯ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕಿನ ದಂಟಹಳ್ಳಿ ಗ್ರಾಮದಿಂದ ಸುಮಾರು 50 ಮಂದಿ ರೈತರು ಬಸ್ ಮೂಲಕ ಸಮಾಧಿ ಸ್ಥಳಕ್ಕೆ ಆಗಮಿಸಿ ಪುಟ್ಟಣ್ಣಯ್ಯ ಸಮಾಧಿ ಬಳಿ ಹಸಿರು ಬಾವುಟ ನೆಟ್ಟು ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದಂಟಹಳ್ಳಿ ಗ್ರಾಮದ ರೈತ ಮುಖಂಡ ಲಕ್ಷ್ಮಣ ಮಾತನಾಡಿ, ನಾವು ಕೊಳ್ಳೇಗಾಲ ತಾಲ್ಲೂಕಿನ ದಂಟಹಳ್ಳಿ ಗ್ರಾಮದವರು. ನಮ್ಮದು ಗಡಿಗ್ರಾಮ, ಗ್ರಾಮದಲ್ಲಿ ಬಹುತೇಕ ಕೃಷಿಕರು ವಾಸವಾಗಿದ್ದಾರೆ, ನಮ್ಮ ಕಷ್ಟಗಳಿಗೆ ಪುಟ್ಟಣ್ಣಯ್ಯ ಪರಿಹಾರ ಒದಗಿಸುತ್ತಿದ್ದರು. ಪುಟ್ಟಣ್ಣಯ್ಯ ಅಗಲಿಕೆಯಿಂದ ರೈತರ ಕಷ್ಟಗಳಿಗೆ ಸ್ಪಂದಿಸುವ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ದುಖಃ ವ್ಯಕ್ತಪಡಿಸಿದರು.

ಗ್ರಾಮದ ಮಹದೇವಪ್ಪ, ವೆಂಕಟೇಗೌಡ, ಶಿವಣ್ಣ, ಕೊಟ್ಟೂರಪ್ಪ ಇದ್ದರು.
ಫೆ.18ರ ರಾತ್ರಿಯಿಂದಲೇ ತಾಲ್ಲೂಕಿನಾದ್ಯಂತ ರೈತ ನಾಯಕ ಪುಟ್ಟಣ್ಣಯ್ಯ ಅವರದೇ ಮಾತು, ಗುಣಗಾನ, ಹೋಟೆಲ್‍ಗಳ ಬಳಿ, ಕಟ್ಟೆಗಳ ಮೇಲೆ ಕುಳಿತ ಹಿರಿಯರು, ಪುಟ್ಟಣ್ಣಯ್ಯ ಎಂದೂ, ಯಾರೋಂದಿಗೂ ನಿಷ್ಠೂರವಾಗಿ ಮಾತನಾಡಿದವರಲ್ಲ, ಆ ಪಕ್ಷ, ಈ ಪಕ್ಷ ಎಂದು ಭೇದ ಭಾವ ವ್ಯಕ್ತಪಡಿಸಿದವರಲ್ಲ, ತಮ್ಮ ಬಳಿ ಸಹಾಯ ಕೋರಿ ಬಂದ ಎಲ್ಲರಿಗೂ ಒಂದೇ ರೀತಿಯಲ್ಲಿ ಕಂಡವರು ಎಂದು ಪುಟ್ಟಣ್ಣಯ್ಯ ಅಭಿಮಾನಿಗಳು ಮತ್ತು ಸಾರ್ವಜನಿಕರು ಪುಟ್ಟಣ್ಣಯ್ಯ ಕುರಿತು ಗುಣಗಾನ ಮಾಡುತ್ತಿರುವುದು ಕಂಡು ಬಂತು.

ಬಿಕೋ ಎನ್ನುವ ಕ್ಯಾತನಹಳ್ಳಿ : ಸದಾ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ಕ್ಯಾತನಹಳ್ಳಿ ಗ್ರಾಮ ಇಂದು ಬಿಕೋ ಎನ್ನುತ್ತಿತ್ತು. ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇರಲಿಲ್ಲ, ಅಂಗಡಿ ಹೊಟೇಲ್‍ಗಳು ಬಾಗಿಲು ಹಾಕಿದ್ದವು. ಗ್ರಾಮದ ರೈತರು ಮಂಕು ಬಡಿದವರಂತೆ ಕುಳಿತಿದ್ದರು. ಮಾತಿಲ್ಲ ಕತೆಯಿಲ್ಲ, ಪರಿಚಿತರನ್ನು ನೋಡಿದರೆ ಮೌನವಾಗೇ ಕಣ್ಸನ್ನೆಯಲ್ಲಿ ಉತ್ತರ.
ರಾರಾಜಿಸಿದ ಫ್ಲೆಕ್ಸ್‍ಗಳು : ಪುಟ್ಟಣ್ಣಯ್ಯ ಅಂತ್ಯಸಂಸ್ಕಾರದ ವೇಳೆ ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್‍ಗಳು ಮಾತ್ರ ರಸ್ತೆಯಲ್ಲಿ ರಾರಾಜಿಸುತ್ತಿದ್ದವು. ನಿನ್ನೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ತುಂಬಿದ್ದ ಕ್ರೀಡಾಂಗಣ ಇಂದು ಬಿಕೋ ಎನ್ನುತ್ತಿತ್ತು. ಒಟ್ಟಾರೆ ಇಡೀ ಕ್ಯಾತನಹಳ್ಳಿ ಗ್ರಾಮವೇ ತನ್ನ ಮಗನನ್ನು ಕಳೆದುಕೊಂಡು ಮೌನದಲ್ಲಿ ಮಲಗಿತ್ತು.

Leave a Reply

Your email address will not be published.