ದಿ.ಕೆ.ಎಸ್. ಪುಟ್ಟಣ್ಣಯ್ಯರಿಗೆ ದಲಿತ ಸಂಘಟನೆಗಳಿಂದ ಪುಷ್ಪ ನಮನ


ಪಾಂಡವಪುರ: ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ರೈತ ನಾಯಕ ಪುಟ್ಟಣ್ಣಯ್ಯ ಸಮಾಧಿಗೆ ಪುಷ್ಪ ನಮನ ಅರ್ಪಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಯುವ ದಲಿತ ಮುಖಂಡ ಹಾರೋಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಸುಮಾರು ಐವತ್ತಕ್ಕೂ ಹೆಚ್ಚು ಮುಖಂಡರು ಮಂಗಳವಾರ ಬೆಳಿಗ್ಗೆ ಕ್ಯಾತನಹಳ್ಳಿ ಗ್ರಾಮಕ್ಕೆ ಪಾಂಡವಪುರದ ಮೂಲಕ ಬೈಕ್ ರ್ಯಾಲಿಯಲ್ಲಿ ತೆರಳಿ ರೈತ ನಾಯಕ ಪುಟ್ಟಣ್ಣಯ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಿದರಲ್ಲದೇ ಪುಟ್ಟಣ್ಣಯ್ಯ ಅವರಂತೆ ಸಮಾನತೆಯ ಹಾದಿ ತುಳಿಯುವ ಪ್ರತಿಜ್ಞೆ ಮಾಡಿದರು.

ಇದೇ ಸಂದರ್ಭದಲ್ಲಿ ಪುಟ್ಟಣ್ಣಯ್ಯ ಅವರಿಗೆ ಜಯವಾಗಲಿ, ಪುಟ್ಟಣ್ಣಯ್ಯ ಅಮರ್‍ರಹೆ, ರೈತ ಸಂಘ ಮತ್ತು ದಲಿತ ಸಂಘಟನೆಗಳಿಗೆ ಜಯವಾಗಲಿ, ಪುಟ್ಟಣ್ಣಯ್ಯ ಅವರ ಸಮ ಸಮಾಜದ ಕನಸು ಈಡೇರಲಿ ಎಂಬ ಘೋಷಣೆ ಕೂಗಿದರು.

ಯುವ ದಲಿತ ಮುಖಂಡ ಹಾರೋಹಳ್ಳಿ ಸೋಮಶೇಖರ್ ಮಾತನಾಡಿ, ಪುಟ್ಟಣ್ಣಯ್ಯ ಕೇವಲ ರೈತ ನಾಯಕ ಮಾತ್ರವಲ್ಲ ಅವರು ದಲಿತರ ದ್ವನಿಯಾಗಿದ್ದರು, ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ಸದಾ ಖಂಡಿಸುತ್ತಲೇ ಅವರ ಸಾಮಾಜಿಕ ಉದ್ಧಾರಕ್ಕೆ ಶ್ರಮಿಸಿದವರು ಎಂದರು.

ಪುಟ್ಟಣ್ಣಯ್ಯ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಚಳವಳಿ ಮತ್ತು ಹೋರಾಟದ ರೂಪದಲ್ಲಿ ನಮ್ಮ ರಕ್ತದ ಕಣ ಕಣದಲ್ಲಿ ಅಡಗಿದ್ದಾರೆ, ನಾವು ಪುಟ್ಟಣ್ಣಯ್ಯ ಅವರ ಸಮ ಸಮಾಜದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ನಿರಂತರವಾಗಿ ಸಾಗುತ್ತೇವೆ ಎಂದರು.

ಪುಟ್ಟಣ್ಣಯ್ಯ ದಲಿತರ ಬಗ್ಗೆ ತಾಳಿದ್ದ ಉದಾತ್ತ ಮನೋಭಾವ ಇಂದಿನ ಎಲ್ಲಾ ನಾಯಕರಿಗೆ ಜನಪ್ರತಿನಿಧಿಗಳಿಗೆ ಆದರ್ಶವಾಗಬೇಕು ಎಂದ ಸೋಮಶೇಖರ್ ಪುಟ್ಟಣ್ಣಯ್ಯ ತಮ್ಮ ಜೀವಿತಾವಧಿಯಲ್ಲಿ ಭಾಗವಹಿಸಿದ ಎಲ್ಲಾ ವೇದಿಕೆಗಳಲ್ಲಿ ಅಸ್ಪøಶ್ಯತೆ ವಿರುದ್ಧ ಸದಾ ದನಿ ಎತ್ತುತ್ತಿದ್ದ ಏಕೈಕ ನಾಯಕರಾಗಿದ್ದರು. ಅವರ ಅಗಲಿಕೆಯಿಂದ ದಲಿತ ಸಮುದಾಯ ತನ್ನ ನಾಯಕನನ್ನು ಕಳೆದುಕೊಂಡಿದೆ ಎಂದು ಮರುಗಿದರು.

ನಂತರ ಮುಖಂಡರು ಪುಟ್ಟಣ್ಣಯ್ಯ ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವಾನ ಹೇಳಿದರಲ್ಲದೇ, ರೈತ ಸಂಘದ ಮುಂದಿನ ಎಲ್ಲಾ ಹೋರಾಟಗಳಲ್ಲಿ ದಲಿತ ಸಂಘಟನೆಗಳು ಸಹಕಾರ ನೀಡುತ್ತವೆ ಎಂಬ ಭರವಸೆ ನೀಡಿದರು.

ಮಂಡಿಬೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಲೋಹಿತ್, ನಾರಾಯಣಪುರ ನರಸಿಂಹಮೂರ್ತಿ, ಸಣಬ ಗ್ರಾಮದ ಚಿಕ್ಕಹನುಮಯ್ಯ, ಅಮೃತಿ ಮಹದೇವ್, ವಿಜಯಕುಮಾರ್, ದೇವೇಗೌಡನಕೊಪ್ಪಲು ಪುಟ್ಟಣ್ಣ, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಮಹದೇವು, ಲಾಲಿಪಾಳ್ಯ ಬಿ.ರಾಜು, ದೇವರಾಜು, ದೊಡ್ಡವೆಂಕಟಯ್ಯ, ಕಪಾಲಿ ಮಹದೇವು, ಹೊಸಕೋಟೆ ಹಾಳಪ್ಪ, ಮಾಣಿಕ್ಯನಹಳ್ಳಿ ಮಂಜು, ಹೊಸಕೋಟೆ ಧಮೇಶ ಇತರರು ಇದ್ದರು.

Leave a Reply

Your email address will not be published.