ಗ್ರಾಮೀಣ, ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಪ್ರಯತ್ನ: ಶಾಸಕ ಸತೀಶ ಜಾರಕಿಹೊಳಿ


  • ಬಿ.ಕೆ.ಕಂಗ್ರಾಳಿಯಲ್ಲಿ ಕುಡಿಯುವ ನೀರು ಪೂರೈಸುವ 75 ಲಕ್ಷ ರೂ. ಪೈಪ್ ಲೈನ್ ಕಾಮಗಾರಿಗೆ  ಚಾಲನೆ

ಬೆಳಗಾವಿ:ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿದ್ದರೂ ಬೇರೆ ಬೇರೆ ವಿಧಾನಸಭೆ ಕ್ಷೇತ್ರಗಳಲ್ಲಿರುವ ಅಭಿವೃದ್ಧಿ ವಂಚಿತ ಪ್ರದೇಶಗಳಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯೂ ಸೇರಿ ಬೇರೆ ಬೇರೆ ಅಭಿವೃದ್ಧಿ ಯೋಜನೆಗಳಡಿ ಸಹಾಯ ಸವಲತ್ತು ಪಡೆದು ಬೆಳಗಾವಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳ ಸಮಗ್ರ  ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

 ವೈಭವ ನಗರ, ಕಲ್ಮೇಶ್ವರ ನಗರ ಮತ್ತು ಬಿ.ಕೆ.ಕಂಗ್ರಾಳಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ 75 ಲಕ್ಷ ರೂ. ಪೈಪ್ ಲೈನ್ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಕಳೆದ 5 ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸರ್ಕಾರ ಯಾವುದೇ ಇದ್ದರೂ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಲ್ಲುವುದಿಲ್ಲ ಎಂದರು.

 ವೈಭವ ನಗರ, ಕಲ್ಮೇಶ್ವರ ನಗರ ಮತ್ತು ಬಿ.ಕೆ.ಕಂಗ್ರಾಳಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ 75 ಲಕ್ಷ ರೂ. ಕಾಮಗಾರಿ ನಡೆಯಲು ನಗರ ಸೇವಕ ಬಸಪ್ಪ ಚಿಕ್ಕಲದಿನ್ನಿ ಅವರು ವಿಶೇಷ ಪ್ರಯತ್ನ ಮಾಡಿದ್ದಾರೆ. ನಾನು ಸಚಿವನಾಗಿದ್ದಾಗ ಪೈಪ್ ಲೈನ್ ಕಾಮಗಾರಿಯೂ ಸೇರಿ ಹಲವು ಕಾಮಗಾರಿಗಳು ಜಾರಿಗೊಳ್ಳಲು ನೆರವು ಸಿಕ್ಕಿದ್ದನ್ನು ಚಿಕ್ಕಲದಿನ್ನಿ ಅವರು ನೆನಪಿಸಿಕೊಂಡಿದ್ದಾರೆ. ಆದರೆ ಅಭಿವೃದ್ಧಿಪರ ಕೆಲಸಗಳನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಲು ಮುಂದಾದ  ಚಿಕ್ಕಲದಿನ್ನಿ ಅವರೇ  ಅಭಿನಂದನಾರ್ಹರು ಎಂದು ಪ್ರಶಂಸಿಸಿದ ಶಾಸಕ ಸತೀಶ ಜಾರಕಿಹೊಳಿ ಅವರು, ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶ ಮತ್ತು ಸಮಗ್ರ ಜಿಲ್ಲೆ ಅಭಿವೃದ್ಧಿಗೊಳ್ಳಲು ಇನ್ನಷ್ಟು ಯೋಜನೆಗಳನ್ನು ತರೋಣ, ಇದಕ್ಕಾಗಿ ಶಾಸಕ ಸಂಜಯ ಪಾಟೀಲ ಸೇರಿ ಹಲವು ಜನಪ್ರತಿನಿಧಿಗಳು ನನ್ನ ಜೊತೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಅಭಿವೃದ್ಧಿ ಕೈಗೊಳ್ಳಲು ವೈವಿಧ್ಯಮಯ ಯೋಜನೆಗಳಿವೆ. ಅವನ್ನೆಲ್ಲ ಸಮರ್ಪಕವಾಗಿ ಜಾರಿಗೆ ತರುವ ಕೆಲಸ ಇನ್ನೂ ಆಗಬೇಕಿದೆ. ಯಮಕನಮರಡಿ ಮತ್ತು ಬೆಳಗಾವಿ ನಗರ ವಿಧಾನಸಭೆ ಕ್ಷೇತ್ರದ ಮತ್ತು ಬೆಳಗಾವಿ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಇಟಿಪಿ ಯೋಜನೆ  ಸೇರಿ ಹಲವು ಯೋಜನೆಗಳು ಜಾರಿಗೊಳ್ಳಬೇಕಿದೆ. ಈ ಯೋಜನೆಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಬೇಕಿದೆ. ಬೇರೆ ಬೇರೆ ಯೋಜನೆಗಳಲ್ಲಿ ಅನುದಾನ ತಂದರೆ ಬೆಳಗಾವಿ ಮತ್ತು ಜಿಲ್ಲೆಯ ಬೆಳವಣಿಗೆಗೆ ಪೂರಕವಾಗಿ   ಅಭಿವೃದ್ಧಿ ಕೈಗೊಳ್ಳಲು ಅನುಕೂಲವಾಗಲಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ, ಗಾರ್ಡನ್ ಹೀಗೆ ಹಲವು ಯೋಜನೆಗಳು ಬೆಳಗಾವಿ ನಗರದಲ್ಲಿ ಇನ್ನೂ ಜಾರಿಗೊಳ್ಳಬೇಕಿದೆ. ಸಮಗ್ರ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಯೋಜನೆ ಸೇರಿ ಹಲವು ಯೋಜನೆಗಳ ಸದುಪಯೋಗ ಪಡೆಯಲಾಗುವುದು. ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ತಾವು ಸಚಿವರಾಗಿದ್ದಾಗ ಬೆಳಗಾವಿ ಚನ್ನಮ್ಮ ನಗರದಲ್ಲಿ ಫ್ಲೈ ಓವರ್ ನಿರ್ಮಿಸುವ ಉದ್ದೇಶಕ್ಕಾಗಿ  100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿತ್ತು.  ಆದರೆ ಅಧಿಕಾರಾವಧಿಯ ನಂತರದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿಲ್ಲ. ಬದಲಾಗಿ ಬೀದಿ ದೀಪ, ರಸ್ತೆ ಡಾಂಬರೀಕರಣ, ಕಿಲ್ಲಾ ಪ್ರದೇಶದಲ್ಲಿ 330 ಅಡಿ ಧ್ವಜ ನಿರ್ಮಾಣ, ಈಜುಗೊಳ, ಟೆಬಲ್ ಟೆನ್ನಿಸ್ ಸೇರಿ ಉಳಿದ ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾಂಗಣ ನಿರ್ಮಿಸಲು ಅನುದಾನ ಉಪಯೋಗಿಸಲಾಗಿದೆ. ಬೆಳಗಾವಿ ನಗರದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಹೊಸ ವೈಭವ ನಗರ ಪ್ರದೇಶವೂ ಸೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೈಗೊಳ್ಳಲು ಎಲ್ಲ ಪ್ರಯತ್ನಗಳೂ ಜಾರಿಯಲ್ಲಿರುತ್ತವೆ. ಸರ್ಕಾರ ಯಾವುದಿದ್ದರೂ ಅಭಿವೃದ್ಧಿ ಕಾಮಗಾರಿಗಳು ನಿಲ್ಲುವುದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಗ್ರಾಮಸ್ಥರ ಪರವಾಗಿ ಆತ್ಮೀಯವಾಗಿ ಸತ್ಕರಿಸಲಾಯಿತು.

ಶಾಸಕ ಸಂಜಯ ಪಾಟೀಲ್, ನಗರ ಸೇವಕ ಬಸಪ್ಪ ಚಿಕ್ಕಲದಿನ್ನಿ, ಗ್ರಾ.ಪಂ.ಅಧ್ಯಕ್ಷ ದತ್ತಾ ಪಾಟೀಲ, ಗ್ರಾ.ಪಂ.ಉಪಾಧ್ಯಕ್ಷ ಕೌಸರ್ ಬಂದೇನವಾಜ್,ಮುಖಂಡರಾದ ಅನಿಲ ಪಾವಸೆ, ವಿಜಯ ಪಾವಸೆ, ಪಾರೂಕ್ ಪಠಾಣ ಮತ್ತಿತರರು ಇದ್ದರು.

Leave a Reply

Your email address will not be published.