ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನಡೆ: ಸಂಸದ ಜೋಶಿ ಅಸಮಾಧಾನ


ಧಾರವಾಡ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಹಾಗೂ ಜನಸಾಮಾನ್ಯರ ಬೇಡಿಕೆ ಮತ್ತು ಅಭಿಪ್ರಾಯಗಳಿಗೆ ಸ್ಪಂದಿಸಿ ಅವರ ಭಾಗವಹಿಸುವಿಕೆಗೆ ಅವಕಾಶ ಮಾಡಿ ಕೊಡಬೇಕೆಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ  ಸಭಾಂಗಣದಲ್ಲಿ ಜರುಗಿದ ಮಹಾನಗರ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ)ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನಗರ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಗರ ಭಾಗದಲ್ಲಿ ಸ್ಮಾರ್ಟ ಸಿಟಿ ಯೋಜನೆ ಬಹುಮುಖ್ಯವಾಗಿದ್ದು, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹಾಗೂ ಯೋಜನೆ ಅನುಷ್ಠಾನ ಆಗಿಲ್ಲ. ಯೋಜನೆಯ ರೂಪರೇಷೆಯನ್ನು ರೂಪಿಸುವಾಗ ಸರಿಯಾಗಿ ಜನ ಪ್ರತಿನಿಧಿಗಳ ಹಾಗೂ ಜನರ ಅಭಿಪ್ರಾಯ ಪಡೆದಿಲ್ಲ ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿ ಘಟಕ, ಸಾರಿಗೆ ವ್ಯವಸ್ಥೆ, ಉದ್ಯಾನವನ, ಕೆರೆಗಳ ಕಾಮಗಾರಿ ಮತ್ತು ಬಸ್ ನಿಲ್ದಾಣ ಮತ್ತು ಪಾರ್ಕಿಂಗ್ ವ್ಯವಸ್ಥೆಯ ಕುರಿತು ಸ್ಮಾರ್ಟ ಸಿಟಿ ಯೋಜನೆಯಲ್ಲಿ ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನ ಹಾಗೂ ಯೋಜನೆಗಳ ಕುರಿತು ಮಹಾನಗರ ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ವಿವರಿಸಿದರು.

ಜನರಿಗೆ ಅನುಕೂಲವಾಗುವ ಮತ್ತು ನಮ್ಮ ಸಂಸ್ಕೃತಿ ಪರಂಪರೆಯನ್ನು ಸಂಕೇತಿಸುವ ವಿನ್ಯಾಸವನ್ನು ಅಳವಡಿಸುವ ಮೂಲಕ ಕಟ್ಟಡ, ಉದ್ಯಾನವನಗಳನ್ನು ನಿರ್ಮಿಸಬೇಕು. ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಳಂಬ ಮತ್ತು ನಿಷ್ಕಾಳಜಿ ಮಾಡುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಮಾಡಿದ ಸಂಸದ ಪ್ರಹ್ಲಾದ ಜೋಶಿ ಅವರು ವಸತಿ, ಕಡಿಯುವ ನೀರು ಮತ್ತು ಕೃಷಿ ಕಲ್ಯಾಣ ಕಾರ್ಯಕ್ರಮಗಳು ತೃಪ್ತಿಕರವಾಗಿ ಜಾರಿಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಾದ ಅಧಿಕಾರಿಗಳು ಉದಾಸೀನತೆ ತೋರುತ್ತಿದ್ದಾರೆ. ನರೇಗಾ, ಪಿ.ಎಮ್.ಎ.ವಾಯ್.ಜೆ., ಆಧಾರ, ಸ್ವಚ್ಛ ಭಾರತ ಮಿಷನ್, ಪಿ.ಎಮ್.ಜಿ.ಎಸ್.ವಾಯ್., ರಾಷ್ಟ್ರೀಯ ಸುರಕ್ಷತಾ ಯೋಜನೆ ಮುಂತಾದವುಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕೆಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ ಸ್ನೇಹಲ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ವ್ಯವಸ್ಥಿತವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಜನಪ್ರತಿನಿಧಿಗಳ ಬೇಡಿಕೆಯಂತೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುವುದು. ನರೇಗಾದಲ್ಲಿ ಉತ್ತಮ ಪ್ರಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.

ಸಭೆಗೆ ಹಾಜರಾಗದ ಕಿಮ್ಸ್ ಮುಖ್ಯಸ್ಥರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚೈತ್ರಾ ಶಿರೂರ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಉಪಕಾರ್ಯದರ್ಶಿ ಎಸ್.ಜಿ.ಕೊರವರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.