ದುಷ್ಕರ್ಮಿಗಳಿಂದ ತೋಟಕ್ಕೆ ಬೆಂಕಿ : ಲಕ್ಷಾಂತರ ರೂ. ನಷ್ಟ

ರೈತ ಚಲುವೇಗೌಡ


ಪಾಂಡವಪುರ: ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ ಬೆಲೆ ಬಾಳುವ ನೂರಾರು ಮರಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಘಟನೆ ತಾಲ್ಲೂಕಿನ ಚಿಕ್ಕಭೋಗನಹಳ್ಳಿ ಗ್ರಾಮದ ಬಳಿ ನಡೆದಿದೆ.

ಚಿನಕುರಳಿ ಗ್ರಾಮದ ಪಿಳ್ಳಪ್ಪರ ಚಲುವೇಗೌಡ ಎಂಬುವರಿಗೆ ಸೇರಿದ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ತೋಟದಲ್ಲಿ 30 ವರ್ಷದ 40 ಮಾವಿನ ಮರಗಳು, 10 ವರ್ಷದ 700 ತೇಗದ ಮರ, 7ವರ್ಷದ 50 ಸಪೋಟ, 15ವರ್ಷದ 700 ಅಕೇಶಿಯಾ, 20 ತೆಂಗು, 500 ಸಿಲ್ವರ್ ಮತ್ತು 25 ಹಲಸಿನ ಸಸಿಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು ರೂ. 7 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.

ಚಿನಕುರಳಿ ಗ್ರಾಮದ ರೈತ ಚಲುವೇಗೌಡರಿಗೆ ಚಿಕ್ಕಭೋಗನಹಳ್ಳಿ ಗ್ರಾಮದ ಸರ್ವೆ ನಂ.40/2 ರಲ್ಲಿ 4.33.00 ಎಕರೆ ಜಮೀನು ಇದ್ದು, ಇದರಲ್ಲಿ ತೋಟಕಾರಿಕೆ ಕೃಷಿ ಅಭಿವೃದ್ಧಿ ಪಡಿಸಲು ಸುಮಾರು 3 ಲಕ್ಷ ರೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ. ಇಡೀ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ನನ್ನ 20 ವರ್ಷದ ಶ್ರಮ ವ್ಯರ್ಥವಾಯಿತು ಎಂದು ರೈತ ಚಲುವೇಗೌಡ ಕಣ್ಣೀರಿಟ್ಟರು.

ಫಲ ನೀಡುತ್ತಿದ್ದ ತೆಂಗಿನ ಮರ, ಸಪೋಟ, ಮಾವಿನ ಮರಕ್ಕೆ ಬೆಂಕಿ ಬಿದ್ದಿದ್ದರಿಂದ ಮರಗಳು ಕಾಯಿಗಳ ಸಮೇತ ಸುಟ್ಟು ಕರಕಲಾಗಿವೆ. ಇವು ವಾರ್ಷಿಕ 50 ಸಾವಿರ ಆದಾಯ ನೀಡುತ್ತಿದ್ದವು.
ಈ ಬಗ್ಗೆ ಪಾಂಡವಪುರ ಪೊಲೀಸರಿಗೆ ಮತ್ತು ತಹಸಿಲ್ದಾರರಿಗೆ ದೂರು ನೀಡಲಾಗಿದೆ.

ನಷ್ಟ ಪರಿಹಾರಕ್ಕೆ ಒತ್ತಾಯ : ತೋಟಗಾರಿಕೆಯಿಂದ ಜೀವನ ನಡೆಸುತ್ತಿದ್ದ ರೈತ ಚಲುವೇಗೌಡರ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ಮತ್ತೆ ತೋಟ ಅಭಿವೃದ್ಧಿಪಡಿಸಲು ಹಣ ಬೇಕಿರುವುದರಿಂದ ಸರ್ಕಾರ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published.