ಗೋದಾಮಿನಲ್ಲಿ ಅಂಗನವಾಡಿ ಆಹಾರ ಧಾನ್ಯ ಅಕ್ರಮ ಸಂಗ್ರಹ: ಎಸಿ ದಿಢೀರ್ ದಾಳಿ, ಪರಿಶೀಲನೆ


ಪಾಂಡವಪುರ: ಅಕ್ರಮ ಆಹಾರ ಧಾನ್ಯಗಳ ಸಂಗ್ರಹದ ಆರೋಪದ ಮೇಲೆ ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲೂಕಿನ  ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡುವ ಎಂ.ಎಸ್.ಪಿ.ಸಿ. ಗೋದಾಮಿನ ಮೇಲೆ ಪಾಂಡವಪುರ ಉಪ ವಿಭಾಗಾಧಿಕಾರಿಗಳು ಸೋಮವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಪಟ್ಟಣದ ನಾಗಮಂಗಲ ಬೈಪಾಸ್ ರಸ್ತೆಯ ಹಿರೋಡೆ ಕೆರೆ ಬಳಿ ಮತ್ತು ಟಿಎಪಿಸಿಎಂಎಸ್ ರೈಸ್‍ಮಿಲ್ ಆವರಣದಲ್ಲಿ ಎಂ.ಎಸ್.ಪಿ.ಸಿ. ಯವರು ಬಾಡಿಗೆಗೆ ಪಡೆದಿರುವ ಗೋದಾಮಿನ ಮೇಲೆ ಸೋಮವಾರ ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಆರ್.ಯಶೋದ ಅವರ ತಂಡ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿ ಗೋದಾಮಿನಲ್ಲಿ ಸಂಗ್ರಹ ಇರುವ ಆಹಾರ ಧಾನ್ಯಗಳ ವಿವರ ಪಡೆದರು.

ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕೆ ಮತ್ತು ತರಬೇತಿ ಕೇಂದ್ರದವರು ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲೂಕಿನ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರು ಮತ್ತು ಕಿಶೋರಿಯರಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡಲು ಸರ್ಕಾರದಿಂದ ಗುತ್ತಿಗೆ ಪಡೆದಿದ್ದು, ಫಲಾನುಭವಿಗಳಿಗೆ ಸಮರ್ಪಕವಾಗಿ ಪೌಷ್ಠಿಕ ಆಹಾರ ವಿತರಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಗೋದಾಮಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಅತ್ಯಂತ ಗೌಪ್ಯವಾಗಿ ನಡೆದ ದಾಳಿ ವೇಳೆ ಗೋದಾಮಿನಲ್ಲಿ ಸಕ್ಕರೆ, ಕಡಲೆ, ಹೆಸರುಕಾಳು, ಅಕ್ಕಿ ಪತ್ತೆಯಾಗಿದೆ.

ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಗೋದಾಮಿನಲ್ಲಿ ಶೇಖರಣೆ ಇದೆ ಎಂಬ ಗುಮಾನಿ ಇದ್ದು, ಪರಿಶೀಲನೆಯ ನಂತರ ಸತ್ಯ ಹೊರಬೀಳಲಿದೆ.

ಗೋದಾಮಿನಲ್ಲಿ ಇರುವ ಆಹಾರ ಧಾನ್ಯಗಳ ಸಂಗ್ರಹದ ಬಗ್ಗೆ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕೆ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ಕೆ.ಟಿ.ಮೀನಾಕುಮಾರಿ ಅವರನ್ನು ಎಸಿ ಆರ್.ಪೂರ್ಣಿಮಾ ವಿಚಾರಣೆ ನಡೆಸಿದರು.

ದಾಳಿ ವೇಳೆ ತಹಸಿಲ್ದಾರ್ ಡಿ.ಹನುಂತರಾಯಪ್ಪ, ಆಹಾರ ಶಿರಸ್ತೆದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕ ಪ್ರಸನ್ನ, ಕೆ.ಎಫ್.ಸಿ.ಸಿ. ಡಿಪೋ ಮ್ಯಾನೇಜರ್ ಕೃಷ್ಣ ಇದ್ದರು.

 

Leave a Reply

Your email address will not be published.