ಚಿಕ್ಕಾಡೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ನಾಲ್ಕು ಮೇಕೆ ಕೊಂದು ಒಂದನ್ನು ಹೊತ್ತೊಯ್ದ ಚಿರತೆ


ಪಾಂಡವಪುರ : ಮನೆ ಮುಂದೆ ಕಟ್ಟಿಹಾಕಿದ್ದ ಮೇಕೆಗಳ ಮೇಲೆ ದಾಳಿ ಮಾಡಿದ ಚಿರತೆ ನಾಲ್ಕು ಮೇಕೆಗಳನ್ನು ಕೊಂದು ಒಂದನ್ನು ಹೊತ್ತೊಯ್ದ ಘಟನೆ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಚಿಕ್ಕಾಡೆ ಗ್ರಾಮದ ಹೊರವಲಯದಲ್ಲಿರುವ ಮಹೇಶ್ ಎಂಬುವರ ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬದವರು ಭಯಭೀತರಾಗಿದ್ದಾರೆ.

ಸೋಮವಾರ ರಾತ್ರಿ ಮಹೇಶ್ ಎಂದಿನಂತೆ ತಮ್ಮ ಮನೆಯ ಮುಂದೆ ಮೇಕೆಗಳನ್ನು ಕಟ್ಟಿ ಹಾಕಿದ್ದರು. ಊಟ ಮುಗಿಸಿ ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟುವುದಾಗಿತ್ತು. ಈ ವೇಳೆ ವಿದ್ಯುತ್ ಹೋದ ಕಾರಣ ಕತ್ತಲಾಗಿತ್ತು.

ವಿದ್ಯುತ್ ಬಂದ ನಂತರ ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕೋಣ ಎಂದುಕೊಂಡಿದ್ದಾಗಲೇ ಕತ್ತಲಲ್ಲಿ ಮನೆ ಪಕ್ಕದ ಕಬ್ಬಿನ ಗದ್ದೆ ಮೂಲಕ ಬಂದ ಚಿರತೆ ಏಕಾಏಕಿ ಮೇಕೆಗಳ ಮೇಲೆ ದಾಳಿ ಮಾಡಿದೆ. ನಾಲ್ಕು ಮೇಕೆಗಳ ಕತ್ತನ್ನು ಕಚ್ಚಿದ್ದರಿಂದ ಅವುಗಳ ಸ್ಥಳದಲ್ಲೆ ಸಾವನ್ನಪ್ಪಿವೆ. ಇದರಲ್ಲಿ ಮೂರನ್ನು ಅಲ್ಲಿಯೇ ಬಿಟ್ಟು ಒಂದು ಮೇಕೆಯನ್ನು ಎತ್ತಿಕೊಂಡು ಹೋಯಿತು ಎಂದು ಮಹೇಶ್ ಹೇಳಿದರು.

ಚಿರತೆ ದಾಳಿಯನ್ನು ಕಣ್ಣಾರೆ ಕಂಡ ಮಹೇಶ್ ರವರ ಮಗ ಕಿರುಚಿಕೊಂಡು ಶಬ್ದ ಮಾಡಿದರೂ ಚಿರತೆ ಮೇಕೆಗಳ ಕತ್ತು ಕಚ್ಚಿ ಕೊಂದುಹಾಕಿದೆ.

ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದಾಗ ಅವರು ಮಧ್ಯರಾತ್ರಿ ಘಟನಾ ಸ್ಥಳಕ್ಕೆ ಬಂದು ಬೋನು ಇರಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಪಶು ಆರೋಗ್ಯಾಧಿಕಾರಿ ನಟರಾಜು ಸ್ಥಳಕ್ಕೆ ಬಂದು ಸತ್ತ ಮೇಕೆಗಳ ಪರೀಕ್ಷೆ ನಡೆಸಿದರು.

Leave a Reply

Your email address will not be published.