ದೌರ್ಜನ್ಯದ ವಿರುದ್ಧ ಮಹಿಳೆ ದನಿ ಎತ್ತಬೇಕು : ಬಿ.ಕೆ.ರವಿಕಾಂತ


ಪಾಂಡವಪುರ: ಮಹಿಳೆಯರ ರಕ್ಷಣೆಗಾಗಿ ಕಾನೂನಿನಲ್ಲಿ ಸಾಕಷ್ಟು ಅವಕಾಶ ಇದ್ದರೂ ನಿರಂತರವಾಗಿ ಎಲ್ಲೆಡೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಇದರ ವಿರುದ್ಧ ಮಹಿಳೆ ದನಿ ಎತ್ತಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಬಿ.ಕೆ.ರವಿಕಾಂತ್ ಸಲಹೆ ನೀಡಿದರು.

ಪಾಂಡವಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ರಾಷ್ಟ್ರೀಯ ಸಾಮಾಜಿಕ ನ್ಯಾಯ ಮತ್ತು ಬಡತನ ನಿರ್ಮೂಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಪುರುಷ ಪ್ರಧಾನ ರಾಷ್ಟ್ರವಾದರೂ ಇಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಹಕ್ಕು ಇದೆ, ಕಾನೂನಿನ ಅಡಿಯಲ್ಲಿ ಇಬ್ಬರೂ ಸರಿಸಮಾನರು. ಆದಾಗ್ಯೂ ಕೆಲವೊಮ್ಮೆ ಮಹಿಳೆಯರ ಮೇಲೆ ಬಲತ್ಕಾರ, ದೌರ್ಜನ್ಯ, ಅಸಮಾನತೆ, ಕೀಳರಿಮೆ ಹಲ್ಲೆಗಳು ನಡೆಯುತ್ತಿವೆ, ಅನೇಕ ಬಾರಿ ಮಹಿಳೆಯರು ಸಮಾಜದ ಭಯದಿಂದ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದನಿ ಎತ್ತದೆ ನೋವು ನುಂಗಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಮಹಿಳೆಯರಲ್ಲಿ ಶೈಕ್ಷಣಿಕ ಕೊರತೆಯೂ ಇದಕ್ಕೆ ಕಾರಣವಾಗಿದೆ ಎಂದರು.

ದೇಶದಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಹಲವಾರು ಕಾನೂನುಗಳಿವೆ, ಒಬ್ಬ ಮಹಿಳೆಗೆ ಅನಗತ್ಯವಾಗಿ ಮೆಸೆಜ್ ಕಳುಹಿಸಿದರೂ ಆತನ ವಿರುದ್ಧ ಕೇಸ್ ದಾಖಲಿಸಬಹುದು ತಮ್ಮ ರಕ್ಷಣೆಗೆ ಕಾನೂನಿನಲ್ಲಿ ಬಹಳಷ್ಟು ಅವಕಾಶ ಇದ್ದರೂ ಮಹಿಳೆ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ, ಇದರಿಂದ ದೌರ್ಜನ್ಯದ ಪ್ರಮಾಣಗಳ ಹೆಚ್ಚುತ್ತವೆ ವಿನಃ ಕಡಿಮೆ ಆಗುವುದಿಲ್ಲ, ಮಹಿಳೆಯರು ಪ್ರಶ್ನಿಸಿದರೆ ಮತ್ತು ಪ್ರತಿಭಟಿಸಿದರೆ ಮಾತ್ರ ತಮ್ಮ ಮೇಲಿನ ಹಲ್ಲೆಗಳನ್ನು ತಡೆಯಬಹುದು ಎಂದರು.

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಅನೇಕ ಇಲಾಖೆಗಳು ಜನಪರವಾಗಿ ಕೆಲಸ ಮಾಡುತ್ತಿವೆ, ಇಲಾಖೆಗಳಲ್ಲಿ ಯಾವುದೇ ಜಾತಿ, ವರ್ಣ, ಧರ್ಮ, ಲಿಂಗಭೇದವಿಲ್ಲದೇ ಎಲ್ಲರಿಗೂ ಒಂದೇ ನ್ಯಾಯದಂತೆ ಕೆಲಸಗಳು ನಡೆಯುತ್ತವೆ. ಇದನ್ನು ನಾವು ಪಡೆದುಕೊಳ್ಳಬೇಕು, ಆದರೆ ಸ್ವಾತಂತ್ರ್ಯದ ನೆಪದಲ್ಲಿ ಪ್ರಜೆಗಳೂ ಸಹಾ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಲಬಾರದು ಕಾನೂನು ಪ್ರಕಾರ ಇದು ಅಪರಾಧವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ, ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಜಗದೀಶ ಬಿಸೇರೊಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಶಿವಕುಮಾರ್, ತಹಸಿಲ್ದಾರ್ ಡಿ.ಹನುಮಂತರಾಯಪ್ಪ, ವಕೀಲರಾದ ಕೆ.ಎಸ್.ಮನು, ಎಚ್.ಎಸ್.ಮೈನಾವತಿ ಮಹಿಳೆಯರ ಹಕ್ಕು ಕರ್ತವ್ಯ ಮತ್ತು ಸಾಮಾಜಿಕ ನ್ಯಾಯ, ಬಡತನ ನಿರ್ಮೂಲನೆ ಕುರಿತು ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ಸಿ.ರಾಮಣ್ಣ ಸಮಾರಂಬದ ಅಧ್ಯಕ್ಷತೆ ವಹಿಸಿದ್ದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ರಾಮೇಗೌಡ, ಕಾರ್ಯದರ್ಶಿ ಸಿ.ಎನ್.ಧನಂಜಯ್ಯ, ವಕೀಲರಾದ ಪೂರ್ಣಿಮಾ, ಶಂಕರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಿ.ಎಸ್.ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು. 

Leave a Reply

Your email address will not be published.