ಕಾಂಗ್ರೆಸ್ -ಜೆಡಿಎಸ್ ಮೈತ್ರಿಗೆ ಚಾಲನೆ


ಬೆಳಗಾವಿ:  ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ  ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಕಟಗೊಂಡಿಲ್ಲವಾದರೂ, ಯಾವ ಪಕ್ಷವೂ ಬಹುಮತ ಗಳಿಸುವುದಿಲ್ಲ ಎಂಬುದಂತೂ ಸ್ಪಷ್ಟವಾಗಿದೆ.

ಕಣದ ಈ ಚಿತ್ರಣ ಬಯಲಾಗುತ್ತಿದ್ದಂತೆಯೇ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ನಾನಾ ಲೆಕ್ಕಾಚಾರಗಳು ಶುರುವಾಗಿವೆ.

ಮ್ಯಾಜಿಕ್ ನಂ. 113 ಸ್ಥಾನಗಳು ಬಂದೇ ಬರುತ್ತವೆ ಎಂದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿಗೆ ಕೊನೆ ಗಳಿಗೆಯಲ್ಲಿ ಅದು ಸಾಧ್ಯವಾಗುವುದಿಲ್ಲ ಎಂದು ಮನವರಿಕೆಯಾಗಿದ್ದು, ಕೈ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿಗೆ ಕಮಲ ನಾಯಕರು ಬಂದಿದ್ದಾರೆ.

ಇನ್ನು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಲೆಕ್ಕ ಹಾಕಿರುವ ಕಾಂಗ್ರೆಸ್ ಪಕ್ಷ  ಜೆಡಿಎಸ್ ನೊಂದಿಗೆ ಕೈ ಜೋಡಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ನಾಯಕರ ನಡುವೆ ಮಾತುಕತೆಗಳೂ ನಡೆದಿದ್ದು, ಸಂಜೆಯ ವೇಳೆಗೆ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನ ಈ ವಿಭಿನ್ನ ನಡೆಗೆ ಕಾರಣವೂ ಇಲ್ಲದಿಲ್ಲ. ಒಂದೊಮ್ಮೆ ಬಿಜೆಪಿ ಕೈಗೆ ಅಧಿಕಾರ ಕೊಟ್ಟರೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಇದು ಗಂಭೀರವಾದ ಪರಿಣಾಮ ಬೀರುತ್ತದೆ ಎಂಬುದು ಒಂದು ಲೆಕ್ಕಾಚಾರ.  ಇದೇ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಉಸ್ತುವಾರಿಯನ್ನು ಅಹ್ಮದ ಪಟೇಲ್ ಗೆ ವಹಿಸಿದ್ದು, ದೇವೇಗೌಡರನ್ನು ಸಂಪರ್ಕಿಸುವ ಯತ್ನಗಳು ನಡೆದಿವೆ.

ಏತನ್ಮಧ್ಯೆ ಜೆಡಿಎಸ್ ನಿಂದ ಆಯ್ಕೆಯಾಗಿರುವ ಹುರಿಯಾಳುಗಳನ್ನು ಬೆಂಗಳೂರಿಗೆ ಕರೆಸಿಕೊಳ್ಳುತ್ತಿರುವ ದೇವೇಗೌಡ ಅವರೊಂದಿಗೆ ಗಹನ ಚರ್ಚೆಯಲ್ಲಿ ತೊಡಗಿದ್ದಾರೆ.

Leave a Reply

Your email address will not be published.