ಮೋದಿ ಮೋಡಿಗೆ ಟಾಂಗ್ ಕೊಟ್ಟ ಅಪ್ಪ-ಮಗನ ಜೋಡಿ !


ಬೆಳಗಾವಿ: ‘ನಾನು ಕಿಂಗ್ ಮೇಕರ್ ಆಗುವುದಿಲ್ಲ , ನಾನೇ ಕಿಂಗ್ ‘ ಎಂದು ಚುನಾವಣೆಗೂ ಮುನ್ನ  ಪದೇ ಪದೇ ಹೇಳುತ್ತಿದ್ದ ಜೆಡಿಎಸ್ ವರಿಷ್ಠ  ಎಚ್.ಡಿ. ಕುಮಾರಸ್ವಾಮಿಗೆ ಕೊನೆಗೂ ಅದೃಷ್ಟ ‘ಕೈ ‘ ಹಿಡಿದಿದೆ.

ರಾಜ್ಯ ರಾಜಕೀಯದಲ್ಲಿ ಮಂಗಳವಾರ ನಡೆದ ಮಿಂಚಿನ ಬೆಳವಣಿಗೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಕುರ್ಚಿಯ ಹೊಸ್ತಿಲಲ್ಲೇ ಬಂದು ನಿಂತಿದ್ದಾರೆ.

ಕೇವಲ 38 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದರೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಅವಕಾಶ ಒದಗಿ ಬಂದಿರುವುದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸ  ಒದಗಿಸಿದೆ. ಹೆಚ್ಚಿನ ಸ್ಟಾರ್ ಪ್ರಚಾರಕರಿಲ್ಲದೇ ಅಪ್ಪ ದೇವೇಗೌಡ, ಮಗ ಕುಮಾರಸ್ವಾಮಿ ಅವರಷ್ಟೇ ಪ್ರಚಾರ ನಡೆಸಿ ಮುಖ್ಯಮಂತ್ರಿ ಗಾದಿವರೆಗೆ ಏರಿರುವ ಅಂಶ ಕುತೂಹಲ ಮೂಡಿಸಿದೆ.

ಇನ್ನೇನು ಪ್ರಮಾಣ ವಚನ ಸ್ವೀಕರಿಸಿಯೇ ಬಿಡುತ್ತೇನೆ ಎಂದು ಬೀಗುತ್ತಿದ್ದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪಗೆ ಮ್ಯಾಜಿಕ್ ಫಿಗರ್ ಕೈಕೊಟ್ಟಿದ್ದು ಶಾಕ್ ಉಂಟುಮಾಡಿದೆ.

ಈ ಬಾರಿ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್ ,  ಬಿಜೆಪಿ ಎರಡೂ ಪಕ್ಷಗಳು ಚುನಾವಣೆ ಪ್ರಕ್ರಿಯೆ ಶುರುವಾದಾಗಿನಿಂದಲೇ ಜಿದ್ದಿಗೆ ಬಿದ್ದಂತೆ ವರ್ತಿಸತೊಡಗಿದ್ದವು.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಅಮಿತ ಶಾ , ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವಾರು ಮುಖಂಡರು ಬಿಜೆಪಿ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಭರ್ಜರಿ ಪ್ರಚಾರ ಮಾಡಿದ್ದರು. ಅಷ್ಟೇ ಅಲ್ಲ ,  ಈ ಬಾರಿ ‘ಕೈ ‘ ಯಿಂದ  ಅಧಿಕಾರ ಕಿತ್ತುಕೊಳ್ಳುವುದು ಗ್ಯಾರಂಟಿ ಎಂದೆಲ್ಲ ಕೂಗಾಡಿದ್ದರು.

ಕಾಂಗ್ರೆಸ್ ನಾಯಕರೂ ಕೂಡ ತಾವೇನೂ ಕಮ್ಮಿ ಇಲ್ಲ  ಎಂದು ಹೇಳುತ್ತ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಗುಲಾಂ ನಬಿ ಆಝಾದ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಸೇರಿದಂತೆ ಘಟಾನುಘಟಿ ನಾಯಕರ ಮೂಲಕ ಪ್ರಚಾರದ ಭರಾಟೆ ನಡೆಸಿದ್ದರು.

ಆದರೆ, ಹೆಚ್ಚಿನ ಸ್ಟಾರ್ ಪ್ರಚಾರಕರ ನೆರವಿಲ್ಲದೇ ತಂದೆ ದೇವೇಗೌಡ, ಮಗ ಕುಮಾರಸ್ವಾಮಿ ಇಬ್ಬರೇ ನಾಯಕರು ಪ್ರಚಾರ ನಡೆಸಿ ಮುಖ್ಯಮಂತ್ರಿ ಗದ್ದುಗೆ ವರೆಗೂ ಏರಿ ಹೋಗಿರುವುದು ಈಗ  ಎಲ್ಲರ ಬಾಯಲ್ಲಿ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published.