ಚಿಕ್ಕೋಡಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ರೈತರ ಮನವಿ

ರೈತರ ಕಬ್ಬಿನ ಬಿಲ್ ಬಾಕಿ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಚಿಕ್ಕೋಡಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಚಿಕ್ಕೋಡಿ : ರೈತರ ಕಬ್ಬಿನ ಬಿಲ್ ಬಾಕಿ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವಿಧ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಯವರು ಸುಮಾರು 1700 ಕೋಟಿ ರೂ.ಗಳಷ್ಟು ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ತಕ್ಷಣ ರೈತರ ಕಬ್ಬಿನ ಬಾಕಿ ಬಿಲ್ ಕೊಡಿಸಬೇಕು. ರೈತರ ಬಾಕಿ ಬಿಲ್ ಪಾವತಿಸದೇ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಾನುನೂ ಪ್ರಕಾರ ಕ್ರಮ ಜರುಗಿಸಬೇಕು. ರೈತರಿಗೆ ಬಾಕಿ ಬಿಲ್ ಜೊತೆಗೆ ಅದರ ಬಡ್ಡಿ ಸಮೇತ ಕೊಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. 

ಸತತ ಬರಗಾಲದಿಂದ ತತ್ತರಿಸಿ ಹೋಗಿರುವ ನಾಗರಮುನ್ನೋಳಿ ಹೋಬಳಿಯ ಹಲವಾರು ಹಳ್ಳಿಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು, ಆ ಭಾಗದ ರೈತರು ಸಾಕಷ್ಟು ಜಮೀನು ಹೊಂದಿದ್ದರೂ ಸಹ ಚಿಕ್ಕೋಡಿಗೆ ಕೂಲಿ ಕೆಲಸಕ್ಕಾಗಿ ವಲಸಿ ಹೋಗುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಸರಕಾರ ಕರಗಾಂವ ಏತ ನೀರಾವರಿ ಯೋಜನೆ ಮಂಜೂರು ಮಾಡುವ ಮುಖಾಂತರ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. 

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಹಲವಾರು ವರ್ಷಗಳಿಂದ ಪ್ರತಿಭಟನೆಗಳನ್ನು ನಡೆಸುತ್ತ ಬಂದಿದ್ದರೂ ಸಹ ಸರಕಾರ ಮತ್ತು ಜನಪ್ರತಿನಿಧಿಗಳು ಗಮನ ಹರಿಸದಿರುವುದು ಈ ಭಾಗದ ಜನರ ದುರ್ದೈವ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ರೈತರ ಸಾಲ ಮನ್ನಾ ಮಾಡಬೇಕು. ರೈತರ ಬೆಳೆಗಳಿಗೆ ಬೆಲೆ ನಿಗದಿಗೊಳಿಸಬೇಕು. ಕಬ್ಬಿನ ದರ ನಿಗದಿಗೊಳಿಸಬೇಕು. ಸರಕಾರ ಇದರ ಬಗ್ಗೆ ವಿಳಂಬ ನೀತಿ ಅನುಸರಿಸಿದರೇ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ರೈತ ಸಂಘದ ವಕ್ತಾರ ತ್ಯಾಗರಾಜ ಕದಮ, ರಮೇಶ ಕರನೂರೆ, ಮಹಾದೇವ ಸನದಿ, ರಾಜು ಪಾಟೀಲ, ರಾಮ ಮಡಿವಾಳ, ಮಾರುತಿ ದೊಡಮನಿ, ಕೆಂಪಣ್ಣಾ ಮಜ್ಜಗಿ, ಸಿದ್ರಾಮ ಬಬನೂರೆ, ನಿಂಗಪ್ಪಾ ಮೆಟಗುಡ್ಡ, ಬೀರಪ್ಪಾ ಮಟೇಗಾರ, ಮಾನಿಂಗ ತವಳೆ, ಸಚೀನಕುಮಾರ ಸೋನಾವನೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.