ಸಂಪುಟ ವಿಸ್ತರಣೆಗೆ ಕೂಡಿ ಬಂತಾ ಕಾಲ?


ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ  ಎರಡನೇ ಹಂತದ ಸಂಪುಟ ವಿಸ್ತರಣೆಗೆ ಅಂತೂ ಕಾಲ ಕೂಡಿ ಬಂದಿದೆಯೇ?

ಹೌದು, ದೋಸ್ತಿ ಸರಕಾರದ ಸಮನ್ವಯ ಸಮಿತಿಯು ಜುಲೈ 30 ಅಥವಾ 31 ರಂದು ಸಭೆ ಸೇರುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಯ ಅಂತಿಮ ತಾಲೀಮು ನಡೆಯಲಿದೆ ಎಂದು ಗೊತ್ತಾಗಿದೆ.

ಇದೇ ಸಭೆಯಲ್ಲಿ ಬಹುನಿರೀಕ್ಷಿತ ನಿಗಮ -ಮಂಡಳಿಗಳ ಅಧ್ಯಕ್ಷರ ಆಯ್ಕೆ ಕುರಿತಂತೆಯೂ ಅಂತಿಮ ತೀರ್ಮಾನವಾಗುವ ಸಾಧ್ಯತೆಗಳಿವೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇತ್ತೀಚೆಗೆ ದೆಹಲಿಯಲ್ಲಿ ಹೇಳಿಕೆ ನೀಡಿ, ಆಷಾಢದ ನಂತರ ಸಂಪುಟ ವಿಸ್ತರಣೆ ಜತೆಗೆ ನಿಗಮ ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು.  ಆ ಮುಹೂರ್ತಕ್ಕಾಗಿ ಸಮನ್ವಯ  ಸಮಿತಿಯಲ್ಲಿ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.

ಏತನ್ಮಧ್ಯೆ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿರುವುದು ಈ ಭಾಗದ ಶಾಸಕರಲ್ಲಿ ಹೊಸ ಆಸೆ ಚಿಗುರಿಸಿದೆ.

ಒಟ್ಟು 30ನಿಗಮ ಮಂಡಳಿಗಳಿಗೆ ನೇಮಕ ನಡೆಯಬೇಕಿದ್ದು, 20 ಕಾಂಗ್ರೆಸ್ ಹಾಗೂ 10 ಜೆಡಿಎಸ್ ಶಾಸಕರು ಈ ಸ್ಥಾನಗಳನ್ನು ಪಡೆದುಕೊಳ್ಳಲಿದ್ದಾರೆ. ಯಾರು ಏನಾಗುತ್ತಾರೆ ಎಂಬುದೂ ಕೂಡ ಈಗ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published.