ಬಿಜೆಪಿ ಸೋಲಿಸುವವರ ಬೆನ್ನಟ್ಟಿದ ಕಾಂಗ್ರೆಸ್ !


ಹೊಸದಿಲ್ಲಿ :ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೋಲಿಸುವ ಯಾವುದೇ ಅಭ್ಯರ್ಥಿಯನ್ನು ತಾನು ಬೆಂಬಲಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಗೆಲುವು ಸಾಧಿಸುವುದು ತನ್ನ ಮುಖ್ಯ ಗುರಿ. ಏಕೆಂದರೆ ಈ ಎರಡೂ ರಾಜ್ಯಗಳು ಸೇರಿ ಲೋಕಸಭೆಯಲ್ಲಿ ಶೇ 22 ರಷ್ಟು ಸ್ಥಾನಗಳನ್ನು ಕೊಡಲಿವೆ ಎಂದು ಪಕ್ಷದ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ದೋಸ್ತಿ ಮಾಡಿಕೊಳ್ಳಲು ಪಕ್ಷ ಮುಂದಾಗಿದೆ ಎಂದೂ ಮೂಲಗಳು ತಿಳಿಸಿವೆ.

ಬಿಜೆಪಿ ಜತೆಗೆ ಹಳೆಯ ದೋಸ್ತಿಗಳಾದ ತೆಲಗು ದೇಶಂ ಪಕ್ಷ ಮತ್ತು ಶಿವಸೇನೆಗಳು ಮುನಿಸಿಕೊಂಡಿರುವುದರಿಂದ ಕಾಂಗ್ರೆಸ್ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿಯೂ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ ಎಂದೂ ಮೂಲಗಳು ತಿಳಿಸಿವೆ.

ತೃಣಮೂಲ ಕಾಂಗ್ರೆಸ್ರ್ಸಿನ ಮಮತಾ ಬ್ಯಾನರ್ಜಿ ಅಥವಾ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರನ್ನು ಬೆಂಬಲಿಸಬೇಕೋ ಎನ್ನುವ ವಿಚಾರ 2019 ರ ಚುನಾವಣಾ ಫಲಿತಾಂಶದ ಮೇಲೆ ಅವಲಂಬಿತವಾಗಿದೆ ಎಂದೂ ಕಾಂಗ್ರೆಸ್ ಪಕ್ಷ ಹೇಳಿರುವುದು ವಿಶೇಷ.

ರಾಹುಲ್ ಗಾಂಧಿ ಬುಧವಾರ ಸಂಜೆ ಮಹಿಳಾ ಫತ್ರಕರ್ತರೊಂದಿಗೆ ಸಂವಾದ ನಡೆಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ಇದೊಂದು ಅಭೂತಪೂರ್ವ ಸಂವಾದ ಎಂದು ಪಕ್ಷ ಬಣ್ಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published.