ಶೂ ವಿತರಣೆಗೆ 5.20 ಕೋಟಿ: ಅಧಿಕಾರಿಗಳ ಗೊಂದಲದಿಂದ ನೆನೆಗುದಿಗೆ ಬಿದ್ದ ಖರೀದಿ ಪ್ರಕ್ರಿಯೆ


ಕೊಪ್ಪಳ: ಸರಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಗಳಲ್ಲಿ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ಗಳನ್ನು ಜೂನ್ 30 ರ ಒಳಗಾಗಿ ಖರೀದಿಸಿ ವಿತರಿಸುವುಂತೆ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಸಹ ಇಲಾಖೆ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಹಣ ಬಿಡುಗಡೆಯಾಗಿ ತಿಂಗಳು ಕಳೆದರೂ ಶೂ, ಸಾಕ್ಸ್ ವಿತರಿಸದಿರುವುದು ಬೆಳಕಿಗೆ ಬಂದಿದೆ.

ಪ್ರತಿ ಬಾರಿ ಹಣ ಬಿಡುಗಡೆಯಾಗುವುದು ವಿಳಂಬವಾಗುತ್ತಿದ್ದ ಕಾರಣ ಅರ್ಧ ಶಾಲೆ ಅವಧಿ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ದೊರೆಯುತ್ತಿದ್ದವು. ಆದರೆ, ಈ ವರ್ಷ ಶಾಲೆ ಆರಂಭದಲ್ಲೇ ಸರ್ಕಾರ ಆಯಾ ಶಾಲೆಗಳ ಎಸ್‌ಡಿಎಂಸಿ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡಿದೆ. ನಿಯಮದಂತೆ ಎಫ್‌ಡಿಡಿಐ(ನೋಯಿಡಾ) ನೀಡುವ ತಾಂತ್ರಿಕ ಗುಣಮಟ್ಟ ಅನುಸರಿಸಿ ಯಾವುದೇ ಕಾರಣಕ್ಕೆ 13. 7. 2018  ಅನ್ನು ಮೀರತಕ್ಕದ್ದಲ್ಲವೆಂದು ಆದೇಶದಲ್ಲಿ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್.ಡಿ.ಎಂ.ಸಿ) ಗಳಿಗೆ ವಹಿಸಲಾಗಿದೆ. ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಕೆಲ ಶಾಲಾ ಮುಖ್ಯೋಪಾದ್ಯಯರು ಹಾಗೂ ಎಸ್.ಡಿ.ಎಂ.ಸಿಯವರು ಕೂಡಿ ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸಿ ಅತ್ಯಂತ ತೀರಾ ಕಳಪೆ ಶೂ ಮತ್ತು ಸಾಕ್ಸ್ ಗಳನ್ನು ಖರೀಸಿದ ಉದಾಹರಣೆಗಳು ಇವೆ.

ಅಧಿಕಾರಿಗಳ ಸಮನ್ವಯದ ಕೊರತೆ : ಜಿಲ್ಲೆಯ ಇಲಾಖೆ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಹಣ ಬಿಡುಗಡೆಯಾಗಿ ತಿಂಗಳು ಕಳೆದರೂ ಶೂ, ಸಾಕ್ಸ್ ಖರೀದಿ ನಡೆಯುತ್ತಿಲ್ಲ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295ರೂ., ಮತ್ತು 9,10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325ರೂ.,ಅನುದಾನ ನಿಗದಿ ಪಡಿಸಲಾಗಿದೆ.

ಶೂ, ಸಾಕ್ಸ್ ಖರೀದಿಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಇಲಾಖೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ಜೂನ್ 28ರಂದು ನಡೆದ ಜಿಪಂ ಸ್ಥಾಯಿ ಸಮಿತಿ ಸಭೆಯಲ್ಲಿ ಶೂ, ಸಾಕ್ಸ್ ಖರೀದಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಅನುಮತಿ ಪಡೆಯಲು ಸೂಚಿಸಿದೆ. ಆದರೆ ಈ ಬಗ್ಗೆ ತಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲವೆಂದು ಜವಳಿ ಇಲಾಖೆ ಸಹಾಯಕ ನಿರ್ದೇಶಕರು ಹೇಳುತ್ತಾರೆ. ಡಿಡಿಪಿಐ ಸಹ ಈ ಬಗ್ಗೆ ನಿರ್ದೇಶಕರ ಗಮನಕ್ಕೆ ತಂದಿದ್ದು, ಜಿಪಂ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಗಮಕ್ಕೆ ತಂದಿರುವುದಾಗಿ ಹೇಳುತ್ತಾರೆ. ಈ ಎರಡು ಇಲಾಖೆಗಳ ಇಬ್ಬರ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಮಕ್ಕಳಿಗೆ ಈ ಸೌಲಭ್ಯ ಇನ್ನೂ ಸಿಗದಂತಾಗಿದೆ.

1071 ಶಾಲೆಗಳಿಗೆ ರೂ. 5.20 ಕೋಟಿ: ಪ್ರಸಕ್ತ ವರ್ಷ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯ ಕೊಪ್ಪಳ ತಾಲೂಕಿನ 251, ಗಂಗಾವತಿ- 346, ಕುಷ್ಟಗಿ-247 ಮತ್ತು ಯಲಬುರ್ಗಾ ತಾಲೂಕಿನ 227 ಸೇರಿ 1071 ಶಾಲೆಗಳಿಗೆ ಕಳೆದ 40 ದಿನಗಳ ಹಿಂದೆಯೇ 5.20ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಆದರೆ ಸ್ಪಷ್ಟ ನಿರ್ದೇಶನವಿಲ್ಲದ ಕಾರಣದಿಂದಾಗಿ ಖರೀದಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಈವರ್ಷನಾದರೂ ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ತಲುಪದಿರುವುದು ದುರುಂತ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಬಿಸಿಯೂಟ, ಕ್ಷೀರಭಾಗ್ಯ, ಪುಸ್ತಕ, ಸಮವಸ್ತ್ರದ ಬಳಿಕ 2015-16 ರಿಂದ ಉಚಿತವಾಗಿ 1ರಿಂದ 10ನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೆ ಒಂದು ಜೊತೆ ಕಪ್ಪು ಬಣ್ಣದ ಶೂ ಹಾಗೂ ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ ಗಳನ್ನು ವಿತರಿಸಲಾಗುತ್ತಿದೆ.

-ಮೌಲಾಹುಸೇನ್ ಬುಲ್ಡಿಯಾರ್

Leave a Reply

Your email address will not be published.