ಲಚ್ಯಾಣ ಸಿದ್ಧಲಿಂಗ ಮಹಾರಾಜರ ಚಲನಚಿತ್ರ ನಿರ್ಮಾಣಕ್ಕೆ ಸಂಕಲ್ಪ: ಶಿವಾನಂದ ಶ್ರೀ


ಇಂಡಿ: ಪವಾಡ ಪುರುಷ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆ ಕುರಿತು  ಚಲನಚಿತ್ರ ನಿರ್ಮಿಸಬೇಕು ಎಂಬ,  ಬಹುದಿನಗಳ ಬೇಡಿಕೆ ಈಗ ಸಾಕಾರಗೊಳ್ಳುವ ಕಾಲ ಕೂಡಿಬಂದಿದೆ ಇದೊಂದು ಯೋಗಾಯೋಗ ಎಂದು ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಹೇಳಿದರು.

ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,  ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆಯ ಕುರಿತು, ಚಲನಚಿತ್ರ ನಿರ್ಮಿಸಲು ಜಮಖಂಡಿಯ ಚಲನಚಿತ್ರ ತಂಡದವರು ಒಪ್ಪಿಗೆ ಸೂಚಿಸಿದ್ದಾರೆ. ಈ ಕಾರ್ಯಕ್ಕೆ ಅತ್ಯಗತ್ಯವಾದ ಆರ್ಥಿಕ ಸಹಾಯಕ್ಕೆ ದಾನಿಗಳು ಮುಂದೆಬರಬೇಕು ಎಂದರು.

ಸಭೆಯ ಸಾನಿಧ್ಯವಹಿಸಿದ ಬಂಥನಾಳ ಮಠದ ಪೀಠಾಧೀಶ ವೃಷಭಲಿಂಗೇಶ್ವರ ಶ್ರೀ ಮಾತನಾಡಿ,  ಸಿದ್ಧಲಿಂಗ ಮಹಾರಾಜರ  ಮಹಿಮೆ ಬಲು ದೊಡ್ಡದು, ಅವರ ಮಹಿಮೆಯನ್ನ ಇಂದಿನ ಜನಾಂಗಕ್ಕೆ ಪರಿಚಯಿಸುವ ಚಲನಚಿತ್ರ ನಿರ್ಮಾಣ ಕಾರ್ಯಕ್ಕೆ ಈ ಭಾಗದ ಭಕ್ತರು ಅಭೂತಪೂರ್ವ ಉತ್ಸಾಹ ತೋರಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.

ಚಿತ್ರಕಥೆ ಸಂಭಾಷಣೆಕಾರ ಪದ್ಮಣ್ಣ ನರಸಣ್ಣವರ ಮಾತನಾಡಿ, ಈ ಚಲನಚಿತ್ರವನ್ನು ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಬರೆದ ಕಥೆಯನ್ನೆ ಆಧರಿಸಿ, ಚಿತ್ರಿಕರಣ ಮಾಡಲಾಗುವದು, ಗುಣಮಟ್ಟದ ಕ್ಯಾಮರಾ ಬಳಸಲಾಗುವದು, ನುರಿತ ಕಲಾವಿದರು ಅಭಿನಯಿಸಲಿದ್ದಾರೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಹಲವು ದಾನಿಗಳು ಚಿತ್ರಿಕರಣಕ್ಕೆ ದೇಣಿಗೆ ಸಲ್ಲಿಸಿದರು. ಸಭೆಯಲ್ಲಿ ಎಂ.ಎಸ್. ಮುಜಗೊಂಡ ಹಾಗೂ ಉಪನ್ಯಾಸಕ ಎ.ಪಿ. ಕಾಗವಾಡಕರ, ಜಿ.ಕೆ. ಲಾಳಸೇರಿ ಹಾಗೂ ಡಿ.ಎ. ಮುಜಗೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸಯ್ಯ ಮಠ, ಮಲ್ಲಯ್ಯ ಮಠಪತಿ, ಚಿತ್ರಕಥೆ ಸಹನಿರ್ದೆಶಕ ಶಂಕರ ಪಾಟೀಲ್, ಸ್ಟಿಲ್ ಕ್ಯಾಮರಾಮನ್ ಶಿವಪ್ರಕಾಶ ತುಕ್ಕಣ್ಣವರ, ಊರಿನ ಗಣ್ಯರಾದ ಡಿ.ಎಸ್. ಪಾಟೀಲ್, ಜಗನ್ನಾಥ ಕೋಟೆ, ವಿ.ಎಂ. ಕರಾಳೆ, ಹಣಮಂತ ಮುಜಗೊಂಡ, ಗೌರಿಶಂಕರ ಬಾಬುಳಗಾಂವ, ಸಂಕಪ್ಪಗೌಡ ಬಿರಾದಾರ, ಅಶೋಕಗೌಡ ಪಾಟೀಲ್, ರಮೇಶ ದಾಯಗೋಡೆ, ಮಲಕಣ್ಣಾ ಗುಬ್ಯಾಡ ಹಾಗೂ ಸುತ್ತಲ ಗ್ರಾಮದ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published.