ಜಗಳೂರಿನಲ್ಲಿ ‘ಚಂದ್ರಗ್ರಹಣ ವೀಕ್ಷಿಸಿ ಮೂಢನಂಬಿಕೆ ತೊಲಗಿಸಿ’ ಜಾಗೃತಿ ಕಾರ್ಯಕ್ರಮ


ಮಾನವ ಬಂಧುತ್ವ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

ಜಗಳೂರು :ಶೋಷಿತರ ಭಾವನೆಗಳನ್ನು ಬಳಸಿಕೊಂಡ ಪುರೋಹಿತ ಶಾಹಿ ವರ್ಗ ಮೂಢನಂಬಿಕೆಗಳನ್ನು ಏರುವ ಮೂಲಕ ಆರ್ಥಿಕ ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಶೋಷಣೆಗೆ ಒಳಪಡಿಸಿದೆ. ಇಂತಹವರ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ನಾಗಲಿಂಗಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಮಾನವ ಬಂಧುತ್ವ ವೇದಿಕೆ ವತಿಯಿಂದ ಗುರುವಾರ ಆಯೋಜಿಸಿದ್ದ ಚಂದ್ರಗ್ರಹಣ ವೀಕ್ಷಿಸಿ ಮೂಢನಂಬಿಕೆ ತೊಲಗಿಸಿ ಜಾಗೃತಿ ಕಾರ್ಯಕ್ರಮ ಕುರಿತು ಮಾತನಾಡಿದರು. 

ಶತಮಾನಗಳ ಕಾಲ ದೇವರು ಧರ್ಮದ ಹೆಸರಿನಲ್ಲಿ ಸಮಾಜವನ್ನು ಹೊಡೆದಾಳುತ್ತಿರುವ ಮನುಶಾಹಿ ವರ್ಗ ಪ್ರಕೃತಿಯಲ್ಲಾಗುವಂತಹ ಪ್ರತಿಯೊಂದು ನೈಸರ್ಗಿಕ ಪ್ರಕ್ರಿಯೆಗಳಿಗೆ ಕೆಲ ಕಟ್ಟುಪಾಡುಗಳನ್ನು ನಂಬಿಕೆಗಳನ್ನು ಏರುವ ಮೂಲಕ ಭಯಗ್ರಸ್ಥ ಮನಸ್ಸುಗಳ ಭಾವನೆಗಳನ್ನು ಕೇಂದ್ರೀಕರಿಸಿ ಹೊಟ್ಟೆಪಾಡಿಗಾಗಿ ಜ್ಯೋತಿಷ್ಯ, ಜಾತಕಫಲ, ವಾಸ್ತು, ವಾಮಾಚಾರದಂತಹ ಮೂಢನಂಬಿಕೆಗಳನ್ನು ಏರುತ್ತಿರುವುದು ಸಾಮಾನ್ಯವಾಗಿದೆ. ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಠಿಕೋನಗಳನ್ನು ಅಳವಡಿಸಿಕೊಂಡು ಸಮಾಜ ಕಟ್ಟುವಂತಹ ಕೆಲಸ ಮಾಡಬೇಕಿದೆ ಎಂದರು. 

ಮಾನವ ಬಂಧುತ್ವ ವೇದಿಕೆಯ ಸಲಹಾ ಸಮಿತಿ ಸದಸ್ಯ ಎಂ.ರಾಜಪ್ಪ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಹಲವಾರು ವೈಜ್ಞಾನಿಕವಾಗಿ ಮುಂದುವರಿದಂತಹ ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್‍ರವರ ವೈಚಾರಿಕೆ ಸಿದ್ಧಾಂತಗಳೇ ನಮಗೆ ಆದರ್ಶವಾಗಬೇಕಿದೆ. ಕೆಲ ಕೋಮುವಾದಿ ಶಕ್ತಿಗಳು ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿದ್ದು ಇದರಿಂದ ವಿದ್ಯಾರ್ಥಿಗಳು ದೂರವಿರಬೇಕು. ಗ್ರಹಣ ಎನ್ನುವುದು ವೈಜ್ಞಾನಿಕ ಪ್ರಕ್ರಿಯೆಯೇ ಹೊರತು ಯಾವುದೇ ದೋಷವಲ್ಲ. ವಿದ್ಯಾರ್ಥಿಗಳು ಇದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಮೂಲಕ ಕುಟುಂಬದಲ್ಲಿ ಜಾಗೃತಿ ಮೂಡಿಸಬೇಕೆಂದರು. 

ಎಎಸ್‍ಎಫ್‍ಐ ರಾಜ್ಯ ಖಜಾಂಚಿ ವೀಣಾ ಮಾತನಾಡಿ, ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸಾಮಾಜಿಕ ಕಟ್ಟುಪಾಡುಗಳಿಂದ ಹೊರಬಂದು ವೈಚಾರಿಕತೆ ಹಾಗೂ ಚಿಂತನೆಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ಮಾನವ ಬಂದುತ್ವ ವೇದಿಕೆ ಸಂಸ್ಥಾಪಕರಾದ ಸತೀಶ್ ಜಾರಕಿಹೊಳಿಯವರು ರಾಜ್ಯಾದ್ಯಂತ ಮೌಢ್ಯಾಚರಣೆಯ ವಿರುದ್ಧ ಸಾಮಾಜಿಕ ಕ್ರಾಂತಿ ಹಮ್ಮಿಕೊಂಡಿರುವುದು ನಮ್ಮೆಲ್ಲರಿಗೆ ಆದರ್ಶವಾಗಬೇಕಿದೆ ಎಂದರು. 

ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಆಧುನಿಕ ದೃಶ್ಯ ಮಾದ್ಯಮಗಳು ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳಲಿಕ್ಕಾಗಿಯೇ ಪ್ರತಿದಿನ ಜನರಲ್ಲಿ ಮೌಢ್ಯವನ್ನು ಬಿತ್ತುವಂತಹ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವುದು ಮತ್ತಷ್ಟು ಸಮಾಜವನ್ನು ದುರ್ಬಲಗೊಳಿಸುತ್ತಿದೆ. ಸಮಾಜವನ್ನು ಜಾಗೃತಿಗೊಳಿಸುವಂತಹ ಮಾದ್ಯಮಗಳೇ ಈ ರೀತಿಯಾಗಿ ಮೂಢನಂಬಿಕೆಗಳನ್ನು ವೈಭವೀಕರಿಸಿದರೆ ಮತ್ತಷ್ಟು ಚಿಂತನೆಗಳು ಹದಗೆಡಲಿವೆ ಎಂದು ಆತಂಕ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಧನ್ಯಕುಮಾರ್, ಸಹ ಸಂಚಾಲಕ ಎಸ್.ತಿಪ್ಪೇಸ್ವಾಮಿ, ಪ್ರಾಂಶುಪಾಲ ಸಿ.ಪಿ.ಜಗದೀಶ್, ಡಿಎಸ್‍ಎಸ್ ಸಂಚಾಲಕ ಸತೀಶ್, ಸದಸ್ಯ ಯುವರಾಜ್, ಮಧು, ಉಪನ್ಯಾಸಕರಾದ ಮಂಜುನಾಥರೆಡ್ಡಿ, ರಮೇಶ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.