ಕರ್ನಾಟಕ ಭೂ ಸೇನಾ ನಿಗಮದಿಂದ ಕಳಪೆ ಕಾಮಗಾರಿ : ಜೆಡಿಎಸ್ ಪ್ರತಿಭಟನೆ


ಪಾಂಡವಪುರ : ಕರ್ನಾಟಕ ಭೂ ಸೇನಾ ನಿಗಮ (ಲ್ಯಾಂಡ್ ಆರ್ಮಿ)ದಿಂದ ತಾಲ್ಲೂಕಿನಲ್ಲಿ ನಡೆದಿರುವ 10 ಕೋಟಿ ವೆಚ್ಚದ ಕಾಮಗಾರಿಗಳು ಅಪೂರ್ಣ ಮತ್ತು ಕಳಪೆಯಿಂದ ಕೂಡಿದ್ದು ಸಿಓಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಇಂದು ಕರ್ನಾಟಕ ಭೂ ಸೇನಾ ನಿಗಮ ಮತ್ತು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಭೂ ಸೇನಾ ನಿಗಮ ಕಚೇರಿ ಮುಂದೆ ಜಮಾಯಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು, ನಿಗಮದ ಅಧಿಕಾರಿಗಳು ಏಜೆಂಟರ ಮೂಲಕ ನಡೆಸಿದ ಕಾಮಗಾರಿಗಳಿಗೆ ಇಲಾಖೆಯಿಂದ ಕೋಟ್ಯಾಂತರ ಮೌಲ್ಯದ ಕಬ್ಬಿಣ ಮತ್ತು ಸಿಮೆಂಟ್ ನೀಡಿದ್ದಾರೆ, ಇವುಗಳು ಕಾಮಗಾರಿಗಳಿಗೆ ಬಳಸಿಲ್ಲ. ಕಾಳ ಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಿ ಕಳಪೆ ಕಾಮಗಾರಿ ನಡೆಸಲಾಗಿದೆ, ಜತೆಗೆ ಬಹುತೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲವಾದರೂ ಬಿಲ್ ಪಾವತಿಸಲು ಇಲಾಖೆಯ ಅಧಿಕಾರಿಗಳು ಮುಂದಾಗಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು ಕೂಡಲೇ ಸಿಓಡಿ ತನಿಖೆ ನಡೆಸಿ ಕಳಪೆ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡದಂತೆ ಒತ್ತಾಯಿಸಿದರು.

ಅಧಿಕಾರಿಗಳಿಗೆ ಒತ್ತಡ : ಕಳಪೆ ಕಾಮಗಾರಿ ಮತ್ತು ಅಪೂರ್ಣ ಕಾಮಗಾರಿ ನಡೆದಿದ್ದರೂ ಕಾಮಗಾರಿಯ ಬಿಲ್ ಪಾವತಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ವಿನಾ ಕಾರಣ ಕ್ಷೇತ್ರದ ಶಾಸಕ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹೆಸರನ್ನು ಈ ವಿಚಾರದಲ್ಲಿ ತಳುಕು ಹಾಕಿ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಲಾಗಿದೆ ಕೂಡಲೇ ಅಧಿಕಾರಿಗಳು ಕಳಪೆ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ನಂತರ ಹಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ತೆರಳಿ ಅಲ್ಲಿಯೂ ಕೂಡ ಪ್ರತಿಭಟನೆ ನಡೆಸಿ ತನಿಖೆ ನಡೆಸುವಂತೆ ಕೋರಿ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು.

ಸಚಿವರಿಂದ ಯಾವುದೇ ಒತ್ತಡ ಇಲ್ಲ : ಕ್ಷೇತ್ರದ ಶಾಸಕ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಂದ ನಮಗೆ ಬಿಲ್ ಪಾವತಿಸದಿರುವ ಬಗ್ಗೆ ಯಾವುದೇ ಒತ್ತಡ ಇಲ್ಲ ಎಂದು ಕರ್ನಾಟಕ ಭೂ ಸೇನಾ ನಿಗಮಅ ಅಧಿಕಾರಿಗಳು ಪ್ರತಿಭಟನಾಕಾರರ ಮುಂದೆ ಸ್ಪಷ್ಟ ಪಡಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್, ಜೆಡಿಎಸ್ ಮುಖಂಡರಾದ ಎಂ.ಬಿ.ಶ್ರೀನಿವಾಸ್, ಕಣಿವೆ ಯೋಗೇಶ್, ಪ್ರಕಾಶ್, ರಾಮಕೃಷ್ಣ, ವೈರಮುಡಿಗೌಡ, ಸಗಾಯ್ ರಾಜ್ ಸೇರಿದಂತೆ ಪಾಂಡವಪುರ ಪುರಸಭೆಯ ಎಲ್ಲಾ ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.