ಸಂವಿಧಾನ ಸುಟ್ಟು ಉದ್ಧಟತನ: ಡಿಎಸ್‌ಎಸ್‌ನಿಂದ ಪ್ರತಿಭಟನೆ


ಧಾರವಾಡ: ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರತದ ಶ್ರೇಷ್ಠ ಸಂವಿಧಾನವನ್ನು ಸುಟ್ಟು, ಡಾ.ಬಿ.ಆರ್.ಅಂಬೇಡ್ಕರ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆ ವಿರುದ್ಧ ಘೋಷಣೆ ಕೂಗಿ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತಂದ ಜಾತಿವಾದಿ ಹಾಗೂ ರಾಷ್ಟ್ರದ್ರೋಹಿಗಳ ಮೇಲೆ ಪ್ರಕರಣ ದಾಖಲಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಸಂವಿಧಾನ ವಿರೋಧಿಗಳ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಪವಿತ್ರ ಗ್ರಂಥವೆಂದೇ ಪರಿಗಣಿಸಲ್ಪಡುವ ಭಾರತ ಸಂವಿಧಾನವನ್ನು ದೆಹಲಿಯ ಸಂಸತ್ ಭವನ ಮತ್ತು ಪ್ರಧಾನಿಗಳ ನಿವಾಸದ ಹತ್ತಿರದಲ್ಲಿಯೇ ಇರುವ ಜಂತರ್ ಮಂತರ್‌ನಲ್ಲಿ ಕೆಲ ದುಷ್ಕರ್ಮಿಗಳು ಭಾರತದ ಸಂವಿಧಾನವನ್ನು ಸುಟ್ಟು ಡಾ.ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿದ್ದಾರೆ. ಅದೂ ಅಲ್ಲದೇ ಎಸ್‌ಸಿ ಹಾಗೂ ಎಸ್‌ಟಿ ಕಾಯ್ದೆ ವಿರುದ್ಧ ಘೊಷಣೆ ಕೂಗಿ ಅದನ್ನು ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟು ಉದ್ಧಟತನ ಮೆರೆದ ಜಾತಿವಾದಿ, ರಾಷ್ಟ್ರದ್ರೋಹಿಗಳ ಮೇಲೆ ಐಪಿಸಿ ಸೆಕ್ಷನ್ ೧೫೩ (ಎ) ಮತ್ತು ಸೆಕ್ಷನ್ ೫೦೫ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.

ಈ ರೀತಿ ರಾಷ್ಟ್ರ ರಾಜಧಾನಿ ದೆಹಲಿಯ ಸಂಸತ್ ಭವನದ ಮತ್ತು ಪ್ರಧಾನಿಗಳ ನಿವಾಸದ ಹತ್ತಿರದಲ್ಲಿ ಪೊಲೀಸರ ಸಮ್ಮುಖದಲ್ಲೇ ಇಂತಹ ನೀಚ ಕೃತ್ಯ ಎಸಗಲಾಗಿದೆ. ಇದೊಂದು ಜಾತಿ ವಿರೋಧಿ ಹಾಗೂ ಸಂವಿಧಾನ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಕೃತ್ಯವಾಗಿದ್ದು, ಇಂತಹ ಕೃತ್ಯ ಎಸಗಿದ ಆರೋಪಿತರು ಎಷ್ಟೇ ಪ್ರಭಾವಶಾಲಿಗಳಾಗಿದ್ದರು ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸದೇ ಇದ್ದಲ್ಲಿ ಇಂತಹ ಪ್ರಕರಣಗಳು ಮರುಕಳಿಸುವ ಸಂಭವ ಹೆಚ್ಚಾಗಿದೆ.

ಈ ಘೋರ ಕೃತ್ಯದಲ್ಲಿ ಯೂತ್ ಇಕ್ವ್ಯಾಲಿಟಿ ಫೌಂಡೇಶನ್ (ಅಜಾದ ಸೇನಾ), ಆರಕ್ಷಣ ವಿರೋಧಿ ಪಾರ್ಟಿ, ಭೂಮಿಹಾರ ಬ್ರಾಹ್ಮಣ ಏಕತಾಮಂಚ, ಸವರಣ ನ್ಯಾಯ ಅಂದೋಲನ ಬೇರೋಜಗಾರ ಆದಮಿ ಅಧಿಕಾರ ಪಾರ್ಟಿ ಎಂಬ ಸಂಘಟನೆಗಳು ಭಾಗಿಯಾಗಿದ್ದು, ಇವುಗಳ ಮುಖಂಡರುಗಳಾದ ಅಭಿಷೇಕ ಶುಕ್ಲಾ, ಸಂಜಯ ಶರ್ಮಾ, ದೀಪಕ ಗೌರ, ಅಶುತೋಷ ಕುಮಾರ, ಸಂತೋಷ ಪಾಟಕ, ಸಾಕೇತ ಬಿಹಾರಿ ಶರ್ಮಾ, ಸಂತೋಷ ಶುಕ್ಲಾ ಮುಂತಾದವರನ್ನು ಕೂಡಲೇ ವಶಕ್ಕೆ ಪಡೆದು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಇಲ್ಲವೇ ಈ ದೇಶದಿಂದ ಗಡಿಪಾರು ಮಾಡಬೇಕು. ಅಲ್ಲದೇ ಸಾಮಾಜಿಕ ಶಾಂತಿ ಸೌಹಾರ್ದತೆಗೆ ಭಂಗ ಉಂಟು ಮಾಡುವ ಮತ್ತು ಕೋಮುಗಲಭೆಗೆ ಪ್ರಚೋದಿಸುವ ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸುರೇಶ ನವಲೂರ, ನಾರಾಯಣ ಮಾದರ, ಲಕ್ಷ್ಮಣ ದೊಡಮನಿ,     ಹನುಮಂತ ಮೊರಬ, ರಮೇಶ ಅರಳಿಕಟ್ಟಿ, ಶಬ್ಬೀರ್ ಅತ್ತಾರ, ಯಲ್ಲಪ್ಪ ಮಂಟೂರ, ವಿಜಯ ಕುಂದಗೋಳ, ಲಕ್ಷ್ಮಣ ಬ. ದೊಡ್ಡಮನಿ ಪ್ರತಿಭಟನೆಯಲ್ಲಿದ್ದರು.

Leave a Reply

Your email address will not be published.