ಗೋವಾ ಅಧಿಕಾರಿಗಳ ಅನಧೀಕೃತ ಭೇಟಿ ತಡೆಗೆ ಮತ್ತೊಂದು ಚೆಕ್ ಪೋಸ್ಟ್: ಐಜಿಪಿ ಅಲೋಕ್ ಕುಮಾರ್


ಬೆಳಗಾವಿ:  ಗೋವಾ ಅಧಿಕಾರಿಗಳು ಕದ್ದು ಮುಚ್ಚಿ ಕಣಕುಂಬಿಗೆ ಭೇಟಿ ನೀಡುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ನೂತನ ಚೆಕ್ ಪೋಸ್ಟ್ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಂತಾ ಬೆಳಗಾವಿ ಐಜಿ ಅಲೋಕ್ ಕುಮಾರ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಅಧಿಕಾರಿಗಳು ಕರ್ನಾಟಕ ಸರಕಾರದ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ಕಳಸಾ ಬಂಡೂರಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.  ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಗೋವಾ ಅಧಿಕಾರಿಗಳಿಗೆ ಬ್ರೇಕ್ ಹಾಕಲು ನೂತನ ಚೆಕ್ ಪೋಸ್ಟ್ ಆರಂಭಿಸಲು ಸೂಚಿಸಲಾಗಿದೆ.

ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಬೆಳಗಾವಿಗೆ ಬಂದರೆ ನಾವು ಕೂಡ ಕಣಕುಂಬಿ ಪ್ರದೇಶದಲ್ಲಿ ಬಂದೋಬಸ್ತ್ ಏರ್ಪಡಿಸಲು ಅನುಕೂಲವಾಗುತ್ತದೆ. ಇಲ್ಲವಾದರೆ ಗಾಳಿ ಸುದ್ದಿ ಹರಿದಾಡಿ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವಿಷಯದ ಬಗ್ಗೆ ಈಗಾಗಲೇ ಗೋವಾ ಉತ್ತರ ಎಸ್ಪಿಯೊಂದಿಗೆ ಚರ್ಚಿಸಲಾಗಿದ್ದು,ಸಚಿವರು, ಅಧಿಕಾರಿಗಳು ಅನುಮತಿ ಪಡೆದು ಕಳಸಾ ಪ್ರದೇಶಕ್ಕೆ ಭೇಟಿ ನೀಡುವಂತೆ ಕೋರಲಾಗಿದೆ.

ದೇಶದ ಯಾವುದೇ ಪ್ರದೇಶದಲ್ಲಿಯೂ ಸಂಚರಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಕಳಸಾ ಬಂಡೂರಿ ವಿವಾದಿತ ಪ್ರದೇಶವಾದ್ದರಿಂದ ಕಾನೂನು ಸುವ್ಯವಸ್ಥೆ ಹಿತ ದೃಷ್ಟಿಯಿಂದ ಅನುಮತಿ ಪಡೆದು ಬರುವಂತೆ ಕೋರಲಾಗಿದೆ ಎಂದರು.

Leave a Reply

Your email address will not be published.